ಅಮಾನವೀಯ ಘಟನೆ| ಪತ್ನಿಯನ್ನು ಬೈಕ್ ಹಿಂದೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪತಿ

Please follow and like us:

ಪತ್ನಿಯನ್ನು ಬೈಕ್ ಹಿಂದೆ ಕಟ್ಟಿ ದಾರಿಯಲ್ಲಿ ದರದರನೆ ಎಳೆದೊಯ್ಯುತ್ತಿದ್ದರೂ ಯಾರೂ ನೆರವಿಗೆ ಬಾರದೇ ನೋಡುತ್ತಾ ನಿಂತ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಕಚ್ಛಾ ರಸ್ತೆಯಲ್ಲಿ ಪತ್ನಿಯ ಕಾಲುಗಳನ್ನು ಕಟ್ಟಿ ಬೈಕ್ ನಲ್ಲಿ ಎಳೆದೊಯ್ಯಲಾಗುತ್ತಿದ್ದು, ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿರುವ ಹೃದಯವಿದ್ರಾವಕ ಘಟನೆ ನಾಗ್ವಾರ್ ಜಿಲ್ಲೆಯಲ್ಲಿ ನಡೆದಿದ್ದು, 40 ಸೆಕೆಂಡ್ ಗಳ ಈ ವೀಡಿಯೋ ಮನಕಲಕುವಂತಿದೆ.

ಪ್ರೇಮ್ ರಾಮ್ ಮೇಘಾವಲ್ ಎಂಬಾತ ಈ ಕೃತ್ಯ ಎಸಗಿದ್ದು, ಡ್ರಗ್ಸ್ ವ್ಯಸನಿಯಾಗಿದ್ದ ಈತ ನಿರುದ್ಯೋಗಿಯಾಗಿದ್ದು, 2 ಲಕ್ಷ ರೂ. ನೀಡಿ ಈಕೆಯನ್ನು ಮದುವೆ ಆಗಲು ಖರೀಸಿದ್ದ.

ರಾಜಸ್ಥಾನದಲ್ಲಿ ಮಹಿಳೆಯರ ಖರೀದಿ ಮತ್ತು ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಖರೀದಿಸಿ ವ್ಯಕ್ತಿಯನ್ನು ಪತಿ ಎಂದು ಭಾವಿಸಿ ಆತ ಹೇಳಿದ ಎಲ್ಲಾ ಕೆಲಸ ಮಾಡಬೇಕು. ಇವರನ್ನು ಜೀತದಾಳಿನಂತೆ ನೋಡಿಕೊಂಡು ಕೆಲಸಕ್ಕೆ ಕಳುಹಿಸಿ ಅವರ ವೇತನದಲ್ಲಿ ಜೀವನ ಸಾಗಿಸುವವರೂ ಇದ್ದಾರೆ ಎಂದು ಹೇಳಲಾಗಿದೆ.

ಬೈಕ್ ನಲ್ಲಿ ಕೆಲವು ಮೀಟರ್ ದೂರ ಎಳೆದೊಯ್ದ ಪತಿ ನಂತರ ಬೈಕ್ ನಿಲ್ಲಿಸಿ ಆಕೆಯ ಮುಂದೆ ಧಿಮಾಕಿನಿಂದ ಸೊಂಟದ ಮೇಲೆ ಕೈ ಇಟ್ಟುಕೊಂಡು ನೋಡುತ್ತಿದ್ದಾನೆ. ಆಗ ಮಹಿಳೆ ಆತನ ಕಾಲಿಗೆ ಬಿದ್ದು ಗೋಗರೆದಿದ್ದಾಳೆ.

ತಿಂಗಳ ಹಿಂದೆ ಚಿತ್ರೀಕರಿಸಿರಬಹುದು ಎಂದು ಶಂಕಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದ ಈ ವೀಡಿಯೋ ಇದೀಗ ವೈರಲ್ ಆಗಿದ್ದು ಎಲ್ಲೆಡೆ ತೀವ್ರ ಆಕ್ರೋಶ ಕೇಳಿ ಬಂದಿದೆ.

ಘಟನೆ ನಡೆಯುವಾಗ ಮಹಿಳೆ ಸೇರಿದಂತೆ ಕನಿಷ್ಠ ಮೂವರು ಇದ್ದರೂ ಯಾರೂ ಆಕೆಯ ನೆರವಿಗೆ ಬಂದಿಲ್ಲ. ಅಲ್ಲದೇ ಗ್ರಾಮದ ಯಾರೂ ಕೂಡ ಸಹಾಯಕ್ಕೆ ಬಾರದೇ ಇರುವುದು ಆಘಾತಕಾರಿಯಾಗಿದೆ.

ಮೂಲಗಳ ಪ್ರಕಾರ ಆತ ಆಕೆಯ ಪತಿಯಾಗಿದ್ದು, ನೆರೆಯ ರಾಜ್ಯದಲ್ಲಿ ಖರೀದಿ ಮಾಡಿದ ಪತ್ನಿ ಆಗಿದ್ದಾಳೆ ಎಂದು ಹೇಳಲಾಗಿದೆ. ಜೈಸ್ಲಾಮರ್ ನಲ್ಲಿರುವ ತಂಗಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಪತ್ನಿ ಹೇಳಿದ್ದಕ್ಕೆ ಈ ರೀತಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.

 

 

Please follow and like us:
Donate Janashakthi Media

Leave a Reply

Your email address will not be published. Required fields are marked *