ಆರ್‌.ಬಿ.ಮೋರೆ ದಲಿತ ಮತ್ತು ಕಮ್ಯುನಿಸ್ಟ್‌ ಚಳವಳಿಗಳ ನಡುವಿನ ಸೇತುವೆಯಂತೆ ಇದ್ದರು: ಡಾ. ಅಶೋಕ ಧವಳೆ

ಅಂಬೇಡ್ಕರ್‌, ಮೋರೆ ಮತ್ತು ಇಂದಿನ ಸಮರಶೀಲ ಚಳವಳಿ: ಸವಾಲುಗಳು, ಸಾಧ್ಯತೆಗಳು ಕುರಿತ ವಿಚಾರ ಸಂಕಿರಣದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಡಾ. ಅಶೋಕ ಧವಳೆ ಅವರು ಹೀಗೆಂದರು ಅವರು ನವೆಂಬರ್ 16ರಂದು ಬೆಂಗಳೂರಿನ ‘ಸೌಹಾರ್ದ’ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದ ಆಶಯ ಭಾಷಣ ಮಾಡುತ್ತಿದ್ದರು. ಅದೇ ಸಭೆಯಲ್ಲಿ ಆರ್‌.ಬಿ. ಮೋರೆ : ಮೊದಲ ದಲಿತ ಕಮ್ಯುನಿಸ್ಟ್‌ ಎಂಬ ಮೋರೆ ಅವರ ಸ್ವ-ಚರಿತ್ರೆ ಮತ್ತು ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಸಹ ಮಾಡಲಾಯಿತು. . ಅನುವಾದಕ ಅಬ್ದುಲ್ ರೆಹಮಾನ್ ಪಾಷಾ ತಮ್ಮ ಅನುಭವ ಹಂಚಿಕೊಂಡರು. ಪುಸ್ತಕ ಮತ್ತು ವಿಚಾರ ಸಂಕಿರಣದ ವಿಷಯಕ್ಕೆ ಇಂದಿರಾ ಕೃಷ್ಣಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಡಾ. ಆರ್.‌ ಮೋಹನರಾಜ್‌, ಸುಬ್ಬು ಹೊಲೆಯಾರ್‌ ಸ್ಪಂದಿಸಿ ಮಾತನಾಡಿದರು.

ಮೋರೆ, ಬಾಲ್ಯದಿಂದಲೇ ತಾವು ಮತ್ತು ತಮ್ಮ ಸಮುದಾಯ ಅನುಭವಿಸುತ್ತಿದ್ದ ಅಸ್ಪೃಶ್ಯತೆಯ ಕ್ರೌರ್ಯದ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಅಂಬೇಡ್ಕರ್‌ ಅಭಿಮಾನಿಯಾಗಿದ್ದ ಮೋರೆ, ಪ್ರಸಿದ್ಧ ಮಹಾಡ್‌ ಕೆರೆಯ (ಮಾರ್ಚ್ 19-20, 1927) ಚಳವಳಿಯ ರೂವಾರಿ ಆಗಿದ್ದರು. ಅದು ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರ್ ನಾಯಕತ್ವದಲ್ಲಿ ನಡೆದ ಮೊದಲ ಸಾರ್ವಜನಿಕ ಹೋರಾಟವಾಗಿತ್ತು. ಚಾರಿತ್ರಿಕ ಮನುಸ್ಮೃತಿ ದಹನ ಕಂಡ (ಡಿಸೆಂಬರ್ 25, 1927) ಎರಡನೇ ಮಹಾಡ್ ಸಮ್ಮೇಳನದ ಸಂಘಟಕರೂ ಮೋರೆ ಅವರೇ ಆಗಿದ್ದರು. ಇವೆರಡೂ ಸಫಲ ಸಾರ್ವಜನಿಕ ಚಳುವಳಿಗಳಾಗಿದ್ದವು ಮತ್ತು ಇವೆರಡರಲ್ಲೂ ದಲಿತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸದ್ದು ಮಾತ್ರವಲ್ಲದೆ, ಹಲವಾರು ಸವರ್ಣೀಯರು ಭಾಗವಹಿಸಿದ್ದರೂ ಎಂದು ಗಮನಿಸಬೇಕು. ಎಂದು ಡಾ.ಧವಳೆ ಅವರು ಹೇಳಿದರು.

ನಾಸಿಕದ ಕಾಳಾರಾಂ ದೇವಸ್ಥಾನ ಪ್ರವೇಶ ಚಳುವಳಿ ಡಾ.ಅಂಬೇಡ್ಕರ್ ಹಮ್ಮಿಕೊಂಡ ಮೂರನೇ ಸಾರ್ವಜನಿಕ ಹೋರಾಟವಾಗಿತ್ತು. ಆದರೆ ಅದು ಐದು ವರ್ಷಗಳ ಕಾಲ (1930-35) ಸಮರಶೀಲವಾಗಿ ನಡೆದರೂ, ಬ್ರಾಹ್ಮಣರ ಹಠಮಾರಿ ಕಟು ದೋರಣೆಯಿಂದಾಗಿ ಅದನ್ನು ಹಿಂತೆಗೆದುಕೊಳ್ಳಬೇಕಾಯಿತು, ಇದೇ ಅವರನ್ನು ನಾನು ಹಿಂದೂವಾಗಿ ಹುಟ್ಟಿದ್ದರು, ಹಿಂದೂ ಧರ್ಮದಲ್ಲೇ ಸಾಯುವುದಿಲ್ಲ’ ವೆಂದು ಘೋಷಿಸುವಂತೆ, ಮುಂದೆ ಬೌದ್ಧ ಧರ್ಮ ಸ್ವೀಕರಿಸುವಂತೆ ಮಾಡಿದ್ದು., ಎಂಬುದರತ್ತ ಡಾ.ಧವಳೆ ಗಮನ ಸೆಳೆದರು.

ಇದನ್ನೂ ಓದಿ: ಸಹಕಾರಿ ಸಾಲದ ಕಡಿತ ಮತ್ತು ಬಡ್ಡಿ ಹೆಚ್ಚಳ, ರೈತಾಪಿ ಕೃಷಿ ನಾಶದ ಮತ್ತೊಂದು ಹೆಜ್ಜೆ – ಸಿಪಿಐಎಂ

1930ರ ಹೊತ್ತಿಗೆ ಮಾರ್ಕ್ಸ್ ವಾದದತ್ತ ಆಕರ್ಷಿತರಾದ ಮೋರೆ ಕಮ್ಯುನಿಸ್ಟ್ ಪಕ್ಷ ಸೇರಿದರು. ದಲಿತರ ವಿಮೋಚನೆ, ಎಲ್ಲ ದುಡಿಯುವ ಜನರ ರೈತ-ಕಾರ್ಮಿಕರ ವಿಮೋಚನೆಯೊಂದಿಗೆ ತಳುಕು ಹಾಕಿಕೊಂಡಿದೆಯೆಂದು ಅರಿತುಕೊಂಡ ಅವರು ರೈತ-ಕಾರ್ಮಿಕ ಚಳುವಳಿಗಳಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ರೈತ-ಕಾರ್ಮಿಕ ಚಳುವಳಿಗಳಲ್ಲಿ ಮೋರೆ ಅವರ ದಲಿತ ಚಳುವಳಿಯ ಸಂಗಾತಿಗಳೂ ಭಾಗವಹಿಸಿದರು. ಅವರಲ್ಲಿ ಹಲವರು ಕಮ್ಯುನಿಸ್ಟ್ ಪಕ್ಷ ಸಹ ಸೇರಿದರು. ಹೀಗೆ ಮೋರೆ ದಲಿತ ಮತ್ತು ಕಮ್ಯುನಿಸ್ಟ್ ಚಳುವಳಿಗಳ ನಡುವಿನ ಸೇತುವೆಯಾಗಿದ್ದರು ಎಂದು ಡಾ.ಧವಳೆ ವಿವರಿಸಿದರು.

ಸಾಮಾನ್ಯವಾಗಿ ಹಲವರು ಟೀಕಿಸುವಂತೆ, ಕಮ್ಯುನಿಸ್ಟ್ ಪಕ್ಷ ಮತ್ತು ಚಳುವಳಿಗೆ ಭಾರತೀಯ ಸಮಾಜದ ಜಾತಿ-ಅಸ್ಪೃಶ್ಯತೆಯ ಕುರಿತು ಅರಿವೇ ಇರಲಿಲ್ಲ, ಈ ವಾಸ್ತವ ಅವರ ಧೋರಣೆ ಮತ್ತು ಕಾರ್ಯಾಚರಣೆಗಳನ್ನು ತಟ್ಟಲೇ ಇಲ್ಲವೆಂಬುದು ನಿಜವಲ್ಲ. 1930ರಲ್ಲೇ ಪ್ರಕಟಿಸಲಾದ ಪಕ್ಷದ ಪ್ರಣಾಳಿಕೆಯ ಮೊದಲ ಆವೃತ್ತಿ ಎನ್ನಬಹುದಾದ ‘ಕಾರ್ಯಾಚರಣೆಗೆ ವೇದಿಕೆ’ (ಪ್ಲಾಟ್ ಫಾರ್ಮ್ ಫಾರ್ ಆಕ್ಶನ್) ಯಲ್ಲೇ ಜಾತಿ- ಅಸ್ಪೃಶ್ಯತೆಯ ಪ್ರಶ್ನೆಯನ್ನು ಎತ್ತಿಕೊಳ್ಳಲಾಗಿತ್ತು. ಮುಂದೆ 1940-50ರ ದಶಕದಲ್ಲಿ ಸ್ವತಂತ್ರ ದಲಿತ ಚಳುವಳಿ ಮತ್ತು ಡಾ.ಅಂಬೇಡ್ಕರ್ ಅವರ ಕುರಿತು ಪಕ್ಷದ ಧೋರಣೆಯಲ್ಲಿ ಕೆಲವು ತಪ್ಪುಗಳು ಆದವು.

ಈ ತಪ್ಪುಗಳನ್ನು ಗುರುತಿಸಿ ಅದರ ವಿರುದ್ಧ ಮೋರೆ ಪಕ್ಷದೊಳಗೆ ಹೋರಾಟ ನಡೆಸಿದರು. ಈ ಕುರಿತು ಪಕ್ಷದ ಕೇಂದ್ರೀಯ ನಾಯಕತ್ವಕ್ಕೆ ವಿವರವಾದ ಪತ್ರ (1953, 1957 ಮತ್ತು 1961ರಲ್ಲಿ) ಬರೆದು ಅವನ್ನು ಸರಿಪಡಿಸಲು ಅವಿರತ ಪ್ರಯತ್ನ ನಡೆಸಿದರು. (ಮೋರೆ ಅವರ 1953 ರ ಪತ್ರ ಪುಸ್ತಕದಲ್ಲಿದೆ) ಅವರ ಪತ್ರವನ್ನು ಕೇಂದ್ರ ಮತ್ತು ರಾಜ್ಯ ಸಮಿತಿಗಳಲ್ಲಿ ಮಂಡಿಸಿ ಚಚರ್ಚಿಸಲಾಯಿತು. ಮೋರೆ ಅವರ ಹೆಚ್ಚಿನ ಅಂಶಗಳನ್ನು ಅಂಗೀಕರಿಸಿ, ಮುಂದೆ ಪಕ್ಷದ ಧೋರಣೆಗಳಲ್ಲಿ ಒಳಗೊಳ್ಳಲಾಯಿತು, ಎಂದು ಡಾ. ಧವಳೆ ತಿಳಿಸಿದರು.

ಡಾ.ಅಂಬೇಡ್ಕರ್ ಅವರ States and Minorities ಪುಸ್ತಕದಲ್ಲಿ ಪ್ರಸ್ತಾವಿಸಿದ ಮತ್ತು ನಮ್ಮ ಸಂವಿಧಾನದ ಮೂಲತತ್ವಗಳ ಆಧಾರವಾದ ಮೂಲಭೂತವಾದ ಧೋರಣೆಗಳ ಕುರಿತು ಡಾ.ಧವಳೆ ಮಾತನಾಡಿದರು, ಪ್ರಮುಖ ಉದ್ಯಮಗಳು ಮತ್ತು ಭೂಮಿಯನ್ನು ರಾಷ್ಟ್ರೀಕರಿಸಬೇಕೆಂದ ಪ್ರಸ್ತಾವ ಸೇರಿದಂತೆ ಅಲ್ಲಿನ ಆರ್ಥಿಕ ಧೋರಣೆಗಳನ್ನು ಸಂವಿಧಾನದಲ್ಲಿ ಒಳಗೊಳ್ಳಲು ಸಾಧ್ಯವಾಗಲಿಲ್ಲ. ಡಾ.ಅಂಬೇಡ್ಕರ್ ನಂತರದ ಅಂಬೇಡ್ಕರ್ ವಾದಿಗಳು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಎಡ ಚಳುವಳಿಯ ಅರಿವಿಗೂ ಅದು ಬರಲಿಲ್ಲ. ಎಂಬುದರತ್ತ ಡಾ.ಧವಳೆ ಗಮನ ಸೆಳೆದರು.

ಇವೆರಡು ಅಂಶಗಳು ಎಡ-ದಲಿತ ಚಳುವಳಿಗಳು ದೂರ ಸರಿಯುವುದಕ್ಕೆ ಕಾರಣವಾಯಿತೇನೋ ಎಂದು ಅವರು ಸೂಚ್ಯವಾಗಿ ಹೇಳಿದರು.

ಹೃದಯದಲ್ಲಿ ಅಂಬೇಡ್ಕರ್‌ ಸಿದ್ಧಾಂತ ಇರುವವರು ಬಿಜೆಪಿ, ಆರ್‌ಎಸ್‌ಎಸ್‌ಗೆ ಸೇರುವುದು ಬಿಡಿ, ಅವರ ಹತ್ತಿರವೂ ಕುಳಿತುಕೊಳ್ಳುವುದಿಲ್ಲ. ಆದರೆ, ಇಂದು ಬಾಯಲ್ಲಿ ಅಂಬೇಡ್ಕರ್‌ ಮಾತನಾಡುತ್ತಾ ಬಿಜೆಪಿಯೊಂದಿಗೆ ಕೈಜೋಡಿಸುವವರು ಹೆಚ್ಚಾಗಿದ್ದಾರೆ ಎಂದರು. ಈ ಅಂಶವನ್ನು ಅವರು – 2002 ಗುಜರಾತ್ ಮುಸ್ಲಿಮರ ಹತ್ಯಾಕಾಂಡದ ನಂತರ ಬಿ.ಎಸ್.ಪಿ ನಾಯಕಿ ಮಾಯಾವತಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದು, ಅಥಾವಳೆ ಎನ್,ಡಿ.ಎ ಸೇರಿ ಸಚಿವರಾಗಿರುವುದು ಮತ್ತು ಇತ್ತೀಚಿನ ಮಹಾರಾಷ್ಟ್ರ ಚುನಾವಣೆಗಳಲ್ಲಿ ಕೆಲವು ಅಂಬೇಡ್ಕರ್ ವಾದಿ ಪಕ್ಷಗಳು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪರ್ಧೆ ಮಾಡುತ್ತಿರುವುದು – ಈ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದರು.

ಇದು ರ್ಯಾಡಿಕಲ್ ದಲಿತ ಚಳುವಳಿಗೆ ಸವಾಲು ಮತ್ತು ನಕಾರಾತ್ಮಕ ಅಂಶವೆಂದರು. ಆದರೆ ಅದೇ ಸಮಯದಲ್ಲಿ ಮಹಾರಾಷ್ಟ್ರದಲ್ಲೂ ಇತರ ರಾಜ್ಯಗಳಲ್ಲೂ ಯುವ ಅಂಬೇಡ್ಕರ್ ವಾದಿ ಗುಂಪುಗಳು ಈ ನೀತಿಗಳ ನಕಾರಾತ್ಮಕತೆಯನ್ನು ಅರ್ಐ ಮಾಡಿಕೊಂಡಿದ್ದು ಹೊಸ ದಲಿತ ರ್ಯಾಡಿಕಲ್ ಚಳುವಳಿ ಕಟ್ಟುವತ್ತ ಹೋಗುತ್ತಿದ್ದಾರೆ ಎಂಬುದುಸಕಾರಾತ್ಮಕ ಅಂಶವೆಂದರು. ಬರಹಗಾರ ಬಂಜಗೆರೆ ಜಯಪ್ರಕಾಶ್‌ ಪುಸ್ತಕವನ್ನು ಪರಿಚಯಿಸುತ್ತಾ, ಸಮಗ್ರ ಕ್ರಾಂತಿಯ ಹೊರತಾಗಿ ಜಾತಿ ರಹಿತ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ ಎಂದು ದಲಿತರಿಗೆ ಹೇಳುತ್ತಿದ್ದ ಮೋರೆಯವರು, ಜಾತಿಯನ್ನು ಅರ್ಥ ಮಾಡಿಕೊಂಡು ಕಾರ್ಯಕ್ರಮ ರೂಪಿಸದೇ ಇದ್ದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದು ಕಮ್ಯುನಿಸ್ಟರಿಗೂ ಹೇಳುತ್ತಿದ್ದರು. ದಲಿತರಿಗೂ ಕಮ್ಯುನಿಸ್ಟರಿಗೂ ಕನ್ನಡಿ ಹಿಡಿದಂತಿರುವ ಈ ಪುಸ್ತಕವನ್ನು ಎರಡೂ ಕಡೆಯವರು ಓದಬೇಕು ಎಂದರು.

ಒಟ್ಟಿಗೆ ಸಾಗಬೇಕಿದ್ದ ದಲಿತ ಮತ್ತು ಕಮ್ಯುನಿಸ್ಟ್‌ ಚಳವಳಿಗಳು ಪರಸ್ಪರ ಅಪನಂಬಿಕೆಯಿಂದ ವಿರೋಧಿಸಿಕೊಂಡೇ ಬಹಳ ಸಮಯದ ಬಂದಿದ್ದರಿಂದ ಅತ್ತ ಜಾತಿ ವಿಮೋಚನೆಯೂ ಆಗಲಿಲ್ಲ, ಇತ್ತ ಸಮಗ್ರ ಕ್ರಾಂತಿಯೂ ಆಗಲಿಲ್ಲ ಎಂದು ಹೇಳಿದರು. ‘ಅನುವಾದಕರೇ ಕಾಣದ, ಮೋರೆಯವರೇ ನಮಗೆ ನೇರವಾಗಿ ಕಾಣುತ್ತಿದ್ದಾರೆ’, ‘ಪುಸ್ತಕ ಕನ್ನಡದಲ್ಲೆ ಬರೆಯಲಾಗಿದೆಯೇನೋ ಎಂಬಂತಿದೆ’ ಇತ್ಯಾದಿ ಈ ಸಭೆಯಲ್ಲಿ ಮಾತನಾಡಿದ ಎಲ್ಲರ ಮೆಚ್ಚುಗೆ, ಹೊಗಳಿಕೆಗೆ ಪಾತ್ರವಾದ ಪಾಷಾ ಅವರು ‘ಅನುವಾದ ನನಗೆ ಸಂತೋಷ, ತೃಪ್ತಿ ತಂದ ಕೆಲವೇ ಪುಸ್ತಕಗಳಲ್ಲಿ ಇದು ಒಂದು) ಎಂದರು. ಅವರು ಪುಸ್ತಕ. ಮೋರೆ ಅವರ ಜೀವನ, ಅನುವಾದದ ಪ್ರಕ್ರಿಯೆ (ಅಕ್ಷರ ಕಾಣದೆ, ಮಹಾಡ್ ಕೆರೆಗೆ ಇಳಿದು ನೀರು ಕುಡಿಯುವ ದೃಶ್ಯ ಕಾಣಬೇಕು, ಕೇಳಬೇಕು, ಮನುಸ್ಮೃತಿ ದಹನದ ಬಿಸಿ ತಟ್ಟಬೇಕು) ಕುರಿತು ಮನಮುಟ್ಟುವಂತೆ
ಮಾತನಾಡಿದರು.

ಅನುವಾದಕ ಅಬ್ದುಲ್‌ ರೆಹಮಾನ್‌ ಪಾಷಾ, ಹೋರಾಟಗಾರರಾದ ಇಂದಿರಾ ಕೃಷ್ಣಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಆರ್‌. ಮೋಹನ್‌ರಾಜ್‌, ಸುಬ್ಬು ಹೊಲೆಯಾರ್‌, ಎನ್‌. ನಾಗರಾಜ್‌, ಕ್ರಿಯಾ ಮಾಧ್ಯಮದ ವಸಂತರಾಜ್‌ ಎನ್‌.ಕೆ,  ಕೆ.ಎಸ್‌. ವಿಮಲಾ ಭಾಗವಹಿಸಿದ್ದರು.

ಆರ್‌.ಬಿ. ಮೋರೆ : ಮೊದಲ ದಲಿತ ಕಮ್ಯುನಿಸ್ಟ್‌ ಪುಸ್ತಕದಿಂದ

ಎರಡು ರೀತಿಗಳಲ್ಲಿ ಇದು ಒಂದು ವಿಶಿಷ್ಟ ಕೃತಿ. ತಂದೆಯ ಅಪೂರ್ಣ ಸ್ವಚರಿತ್ರೆಯನ್ನು ಮಗ ಜೀವನಚರಿತ್ರೆಯಾಗಿ ಪೂರ್ಣಗೊಳಿಸಿರುವುದು ಒಂದು ವೈಶಿಷ್ಟ, ಪ್ರಸಕ್ತ ಸಂದರ್ಭದಲ್ಲಿ ಇನ್ನಷ್ಟು ಮಹತ್ವದ ಸಂಗತಿಯೆಂದರೆ, ಇದು ಬ್ರಿಟಿಷ್ ವಸಾಹತುಶಾಹೀ ಆಳ್ವಿಕೆಯ ಅಡಿಯಲ್ಲಿ ಭಾರತದಲ್ಲಿ ವರ್ಗ ದಮನ ಮತ್ತು ಜಾತಿದಮನದ ವಿರುದ್ಧ ಮೂಡಿಬಂದ ಎರಡು ಜನಾಂದೋಲನಗಳ ನಡುವಿನ ಸಂಬಂಧದ ಬಗ್ಗೆ ಸಾಮಾನ್ಯವಾಗಿ ಇರುವ ಕಲ್ಪನೆಗಳನ್ನು ಮರುವಿಮರ್ಶೆಗೆ ಒಳಪಡಿಸಲು ಪ್ರೇರೇಪಿಸುವ ಕೃತಿ.

ಇದನ್ನೂ ಓದಿ: ಬಿಜೆಪಿ ಸೋಲಿಗೆ ಕಾರಣ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು: ಆರ್‌. ಅಶೋಕ್

ರಾಮಚಂದ್ರ ಬಾಬಾಜಿ ಮೋರೆ, ಡಾ.ಅಂಬೇಡ್ಕರರ ಆರಂಭದ ಮತ್ತು ಅತ್ಯಂತ ಪ್ರಖರ ಅನುಯಾಯಿಗಳಲ್ಲಿ ಒಬ್ಬರು. ಡಾ.ಅಂಬೇಡ್ಕರ್‌ರವರ ನೇತೃತ್ವದ 1927ರ ಐತಿಹಾಸಿಕ ಚವ್ದಾರ್ ಕೆರೆ ಸತ್ಯಾಗ್ರಹಕ್ಕೆ ದಾರಿ ಮಾಡಿಕೊಟ್ಟ ಅವರ ಮೊದಲ ಮಹಾಡ್ ಭೇಟಿಗೆ ಕಾರಣೀಭೂತರಾದವರು, ಅದನ್ನನುಸರಿಸಿ ನಡೆದ ಮನುಸ್ಮೃತಿ ದಹನದ ನಂತರ ಡಾ.ಅಂಬೇಡ್ಕರ್‌ರವರ ಅತ್ಯಂತ ವಿಶ್ವಾಸಾರ್ಹ ಸಹಯೋಗಿಯಾಗಿ ಹೊಮ್ಮಿದರು. ಅದಾದ ಮೂರು ವರ್ಷಗಳಲ್ಲೇ ಅವರು ಕಮುನಿಸ್ಟ್ ಪಕ್ಷ ಸೇರಿ ಅಚ್ಚರಿ ಮೂಡಿಸಿದರು… .. ..

(ಪ್ರಕಾಶಕರ ನುಡಿಯಿಂದ)

ಮೋರೆ ತಾನು ಕಮ್ಯುನಿಸ್ಟ್ ಪಾರ್ಟಿಯನ್ನು ಸೇರುವ ವಿಚಾರವನ್ನು ಇನ್ನೂ ಬಾಬಾಸಹೇಬರಿಗೆ ತಿಳಿಸಿರಲಿಲ್ಲ. ಅವರು ಏನೆಂದುಕೊಳ್ಳುವರೋ ಎಂದು ತುಸು
ಸಂಕೋಚವಿತ್ತು. ಕೊನೆಗೂ ಒಮ್ಮೆ ತಿಳಿಸಿದಾಗ ಬಾಬಾಸಾಹೇಬರು ಇವರು ಅಂದುಕೊಂಡಂತೆ ಕೋಪಿಸಿಕೊಳ್ಳಲಿಲ್ಲ: ಅದರ ಬದಲಿಗೆ ಅವರು ಮೋರೆಯವರನ್ನು
ಹೊಗಳಿದರು. ಮೋರೆಯವರ ಧೈರ್ಯ, ಪ್ರಾಮಾಣಿಕತೆಯನ್ನು ಮತ್ತು ಸಮರ್ಪಣೆಯನ್ನು ನೋಡಿ ನನ್ನಂತೆಯೇ ಇರುವ ಒಬ್ಬ ಶಿಷ್ಯ ನನಗಿದ್ದಾನೆ ಎಂದು ನನಗೆ
ನಿಜವಾಗಿಯೂ ಹೆಮ್ಮೆಯಾಗುತ್ತದೆ; ದಲಿತರನ್ನು ಒಳಗೊಂಡ ಹಾಗೆ ಇಡೀ ಮಾನವ ಕುಲದ ವಿಮೋಚನೆಗಾಗಿ ಹೋರಾಡಲು ನಿರ್ಧರಿಸಿದ್ದಕ್ಕೆ ನನಗೆ ಸಂತೋಷವೇ
ಆಗಿದೆ ಎಂದರು.

ಬಾಬಾಸಾಹೇಬರ ಭೇಟಿಯನ್ನು ಮುಗಿಸಿ ಹೊರಡುತ್ತಿರುವಾಗ ಮೋರೆಯವರು ಹೇಳಿದರು:

“ಮಾನವ ಜನಾಂಗವನ್ನು ಎಲ್ಲಾ ಬಗೆಯ ಶೋಷಣೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ತೊಡಗಲು ಹೊರಡುತರ‍್ತುವೆನಾದರೂ, ಬಂಡವಾಳಶಾಹಿ ಭೂಮಾಲಿಕತ್ವದ ಪ್ರಸ್ತುತ ವ್ಯವಸ್ಥೆಯಲ್ಲಿ ನೀವು ಆರಂಭಿಸಿರುವ, ದಲಿತರ ಸಾಮಾಜಿಕ ರಾಜಕೀಯ ಹಕ್ಕುಗಳ ಹೋರಾಟವೂ ಅಷ್ಟೇ ಮುಖ್ಯವಾದದು, ಕಮ್ಯುನಿಸ್ಟ್ ಚಿಂತನೆಯು ದಿಕ್ಕೂ ಅದೇ ಆಗಿದೆ…ದಲಿತರ ಸ್ವತಂತ್ರವಾದ ಹೋರಾಟ ಮತ್ತು ಆಮೂಲಾಗ್ರ ಕ್ರಾಂತಿಗಾಗಿ ಕಾರ್ಮಿಕರ ಹೋರಾಟವು ಜೊತೆಜೊತೆಗೇ ಸಾಗಬಹುದು ಎಂಬುದು ನನ್ನ ವಿಶ್ವಾಸವಾಗಿದೆ.”

(ಸತ್ಯೇಂದ್ರ ಮೋರೆ ಬರೆದ ಜೀವನ ಚರಿತ್ರೆಯ ಆಯ್ದ ಭಾಗ)

ಪುಸ್ತಕದ ಬ್ಲರ್ಬಿನಿಂದ

ಈ ವಿಶಿಷ್ಟವಾದ ಕೃತಿಯಲ್ಲಿ ಮೋರೆ ಅವರೇ ಬರೆದ ಆತ್ಮಕಥೆಯು 1924ರ ಸುಮಾರಿಗೆ ಬಂದು ನಿಲ್ಲುತ್ತದೆ. ಅಪೂರ್ಣವಾಗಿ ಉಳಿಯುತ್ತದೆ. ಆದರೆ ಆರ್. ಬಿ. ಮೋರೆಯವರ ಮಗನಾದ ಸತ್ಯೇಂದ್ರ ಮೋರೆ ತಮ್ಮ ತಂದೆಯ ಜೀವನದ ಕತೆಯನ್ನು ಅಲ್ಲಿಂದ ಮುಂದುವರೆಸುತ್ತಾರೆ. ಆರ್. ಬಿ. ಮೋರೆಯವರ ಆತ್ಮಕಥನವು (ಇದು ಕಾಕತಾಳೀಯವಾದರೂ) ಮೋರೆಯವರು ಅಂಬೇಡ್ಕರ್ ಅವರನ್ನು ಮಹಾಡ್ ಸಮಾವೇಶಕ್ಕೆ ಕರೆಯಲು ಬಂದಿದ್ದರೊಂದಿಗೆ ಈ ಕೃತಿಯ ಮೊದಲ ಭಾಗ ಮುಗಿಯುವುದು ಸಾಂಕೇತಿಕವಾಗಿದೆ. ಇನ್ನೊಂದು ರೀತಿಯಲ್ಲಿ ಮೋರೆಯವರ ರಾಜಕೀಯ ಕ್ರಿಯಾಶೀಲತೆ ನಿಜವಾಗಿ ಆರಂಭವಾಗುವುದು ಇಲ್ಲಿಂದಲೇ. ಇದಕ್ಕೆ ಪೂರಕವಾಗಿ ನಿರೂಪಣೆ, ಶೈಲಿ ಇವುಗಳೂ ಕೂಡ ಬದಲಾಗುತ್ತವೆ. ಮೊದಲ ಭಾಗವು ದಲಿತ ಆತ್ಮಕಥೆಗಳ ಸಂಪ್ರದಾಯಕ್ಕೆ ಒಂದು ಉಜ್ವಲ ಸೇರ್ಪಡೆಯಾಗಿದೆ. ಎರಡನೇ ಭಾಗವು ಬಹುಮುಖ್ಯ ಕಾಲಮಾನವೊಂದರ ಚರಿತ್ರೆಯಾಗಿದೆ.

ಸಹಜವಾಗಿಯೇ ಆತ್ಮಕಥೆಯ ಭಾಗವು ತನ್ನ ತೀವ್ರತೆ, ಅನಿರೀಕ್ಷಿತ ಘಟನೆಗಳು, ತಿರುವುಗಳು ಹಾಗೂ ಬರಹಗಾರನ ಅಪೂರ್ವವಾದ ಪ್ರಾಮಾಣಿಕತೆಯಿಂದ ಹೆಚ್ಚು ಪ್ರಭಾವಿಯಾಗಿದೆ. ದಲಿತ ಆತ್ಮಕಥೆಗಳಲ್ಲಿಯೇ ವಿಶಿಷ್ಟವಾಗಿದೆ. ನಮ್ಮ ಅನೇಕ ಪೂರ್ವಕಲ್ಪಿತ ನಿರೀಕ್ಷೆಗಳನ್ನು ಬುಡಮೇಲು ಮಾಡುವಷ್ಟು ಸಶಕ್ತವಾಗಿದೆ.

-ಪ್ರೊ. ರಾಜೆಂದ್ರ ಚೆನ್ನಿ

ಮೊದಲ  ದಲಿತರು ಮತ್ತು ಕಮ್ಯುನಿಸ್ಟರ ನಡುವೆ ಚಾರಿತ್ರಿಕವಾಗಿ ವಿಕಾಸಗೊಂಡಿರುವ ಸಕಾರಾತ್ಮಕ ಸಂಬಂಧಗಳನ್ನು ಭಾರತೀಯ ಎಡಪಂಥೀಯರು ನಿರ್ಲಕ್ಷಿಸಿದ್ದಾರೆ, ಮತ್ತು ಕೆಲವು ದಲಿತರು ಉದ್ದೇಶಪೂರ್ವಕವಾಗಿ ಬದಿಗೆ ತಳ್ಳಿದ್ದಾರೆ ಎಂಬ ಕಾರಣಕ್ಕೆ ಈ ಕೃತಿ ಅರ್ಥಪೂರ್ಣ ಮಹತ್ವವನ್ನು ಪಡೆಯುತ್ತದೆ. ಇಪ್ಪತ್ತನೇ ಶತಮಾನದ ಮಹಾರಾಷ್ಟ್ರದಲ್ಲಿ ದಲಿತರು ಮತ್ತು ಕಮ್ಯುನಿಸ್ಟರ ನಡುವಿನ ಸಂಬಂಧಗಳು ವಿಷಮಗೊಂಡಿರುವ ಪ್ರಶ್ನೆಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುವ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಕ್ರಿಯೆಗಳನ್ನು ಕುರಿತಂತೆ ಬಹು ಅಗತ್ಯವಾದ ಒಳನೋಟಗಳನ್ನು ಈ ಕೃತಿ ಕೊಡುತ್ತದೆ. ಮೊದಲ

-ಪ್ರೊ. ಗೋಪಾಲ ಗುರು

ಇದನ್ನೂ ನೋಡಿ: ಆರ್‌.ಬಿ. ಮೋರೆ | ಈ ಪುಸ್ತಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರಿಂದ ಸರಳವಾಗಿ ಅನುವಾದಿಸಿದೆ – ಅಬ್ದುಲ್ ರೆಹಮಾನ ಪಾಷಾ

Donate Janashakthi Media

Leave a Reply

Your email address will not be published. Required fields are marked *