ಸಾಹಿತಿಗಳ ದೃಷ್ಟಿಯ ಬಗ್ಗೆ ಬರೆದಾಗ ಬಂದ ಹಲವು ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಒಂದು ಲೇಖನ
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಕರ್ನಾಟಕ ರಾಜ್ಯದ ನಾಲ್ಕು ದೊಡ್ಡ ಪ್ರದೇಶಗಳು ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಎಂಬ ನಾಲ್ಕು ಮುಖ್ಯ ಆಡಳಿತಗಳ ಅಡಿಯಲ್ಲಿದ್ದವು. ಸ್ವಾತಂತ್ರ್ಯ ಬಂದ ಕೂಡಲೇ ಬಾಂಬೆ, ಮದ್ರಾಸ್ ಮತ್ತು ಹೈದರಾಬಾದ್ ಆಡಳಿತಗಳಲ್ಲಿ ತೆಲಂಗಾಣ ಸಶಸ್ತ್ರ ಸಂಘರ್ಷದ ಭಯದಿಂದ ೧೯೪೮ ರಲ್ಲಿಯೇ ಬೇರೆ ಬೇರೆ ಕಾನೂನುಗಳು ಜಾರಿಗೆ ಬಂದವು.
-ಜಿ.ಎನ್. ನಾಗರಾಜ
ಮೈಸೂರು ಸಂಸ್ಥಾನದಲ್ಲಿ ಕೂಡಾ ಆ ಸಮಯದಲ್ಲಿ ಇನಾಂ ರದ್ದತಿ ಕಾನೂನು ತರಬೇಕೆಂದು ಯೋಚಿಸಲಾಯಿತು. ಆದರೆ ಕಾನೂನು ಮಾಡಿದ್ದು ಮಾತ್ರ 1954 ಹಾಗೂ 1955 ರಲ್ಲಿ. ಮೈಸೂರು ಸಂಸ್ಥಾನದಲ್ಲಿ ಹೈದರ್ ಮತ್ತು ಟಿಪ್ಪುಗಳು ಪಾಳೆಯಗಾರರನ್ನು ಸೋಲಿಸಿ ಏಕಾಕಾರದ ರಾಜಾಡಳಿತವನ್ನು ಸ್ಥಾಪಿಸಿದ್ದರು. ಆ ಮೂಲಕ ಭಾರತದ ಬೇರೆ ಸಂಸ್ಥಾನಗಳಲ್ಲಿದ್ದಂತೆ ಹೆಚ್ಚು ಮಧ್ಯವರ್ತಿಗಳು ಇರಲಿಲ್ಲ. ಮೈಸೂರು ರಾಜರು ಮಾಡಿದ್ದ ಭೂದಾನಗಳು, ಕೊಡಮಾಡಿದ್ದ ಕೆಲವು ಹಳ್ಳಿಗಳ ವ್ಯಾಪ್ತಿಯ ಜೋಡಿದಾರ ಜಮೀನುದಾರ ಇನಾಂಗಳು ಸ್ವಲ್ಪ ಮಾತ್ರ ಇದ್ದವು. ದೇವಾಲಯ ಮೊದಲಾದ ಧಾರ್ಮಿಕ ಸಂಸ್ಥೆಗಳಿಗೆ ಕೊಟ್ಟ ಇನಾಂಗಳು ಒಂದಷ್ಟು. ಇನ್ನುಳಿದವು ಹಳ್ಳಿಗಳ ಕಮ್ಮಾರ, ಕುಂಬಾರ ಮೊದಲಾದ ಆಯಗಾರರು ಮತ್ತಿತರ ಸೇವೆಗಳಿಗೆ ನೀಡುತ್ತಿದ್ದ ಸಣ್ಣ ಇನಾಂಗಳು. ಕರ್ನಾಟಕ
ಸಾಮಾನ್ಯವಾಗಿ ಜೋಡಿ ಇನಾಂಗಳ ಕುಟುಂಬದವರು ಸರ್ಕಾರದ ಉನ್ಬತ ಹುದ್ದೆಗಳಲ್ಲಿದ್ದುದರಿಂದ ಇನಾಂ ರದ್ದತಿ ಕಾನೂನು ಬಂದದ್ದೂ ನಿಧಾನವಾಗಿ. ಕೋಲಾರ, ಬೆಂಗಳೂರು ಮೊದಲಾದ ಕೆಲ ಜಿಲ್ಲೆಗಳ ಜೋಡಿ ಇನಾಂಗಳ ಗೇಣಿದಾರರು ಕಮ್ಯುನಿಸ್ಟ್ ಚಳುವಳಿಯ ಪ್ರಭಾವದಲ್ಲಿ ಹೋರಾಟ ಮಾಡಲಾರಂಭಿಸಿದರು. ಚಳುವಳಿ ಕೋಲಾರದ ಹಲವು ಹಳ್ಳಿಗಳಿಗೆ ಹಬ್ಬಿತು. ಇದೇ ಜಿಲ್ಲೆಗೆ ಸೇರಿದ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಅನಿವಾರ್ಯವಾಗಿ ಇನಾಂ ರದ್ದತಿ ಕಾನೂನು ತರಲೇಬೇಕಾಯಿತು. ಈ ಚಳುವಳಿಯ ನಾಯಕರಾದ ವೆಂಕಟಗಿರಿಯಪ್ಪನವರು ಕರ್ನಾಟಕ ಪ್ರಾಂತ ರೈತ ಸಂಘದ ಮೊದಲ ಅಧ್ಯಕ್ಷರಾದರು.
ಆದರೆ ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್ ಸಂಸ್ಥಾನಗಳಲ್ಲಿ ಬಹು ದೊಡ್ಡ ಪ್ರಮಾಣದಲ್ಲಿದ್ದ ಗೇಣಿದಾರರನ್ನು ಒಕ್ಕಲೆಬ್ಬಿಸಲಾಯಿತು. ಹೈದರಾಬಾದ್
ಇದನ್ನೂ ಓದಿ: ರಜೆ ವಿಸ್ತರಣೆ: ಜನರು ಸರ್ಕಾರಿ ಶಾಲೆಗಳಿಂದ ದೂರ ಹೋಗುತ್ತಾರೆ – ನಿರಂಜನಾರಾಧ್ಯ ವಿ ಪಿ ವಾಗ್ದಾಳಿ
ಸಂಸ್ಥಾನದಲ್ಲಿ 1891 ರ ವೇಳೆಗೆ
ಬೀದರಿನಲ್ಲಿ 3,49,302 ಗೇಣಿದಾರರು ಶೇ. 85.76,
ಗುಲ್ಬರ್ಗಾದಲ್ಲಿ 2,72,549 ಗೇಣಿದಾರರು ಶೇ.91.16
ರಾಯಚೂರು 2,43,312 ಗೇಣಿದಾರರು ಶೇ.81.11.
ಲಿಂಗಸುಗೂರು ಶೇ.94.99
ಸ್ವಾತಂತ್ರ್ಯಕ್ಕೂ ಮೊದಲೆ ಕಮ್ಯುನಿಸ್ಟ್ ಹಾಗೂ ಸಮಾಜವಾದಿ ನೇತೃತ್ವದಲ್ಲಿ ಕರ್ನಾಟಕದ ಉ.ಕ. ದ.ಕ , ಉಡುಪಿ ಜಿಲ್ಲೆಗಳಲ್ಲಿ ಭೂಮಿಗಾಗಿ ಗೇಣಿ ಹಕ್ಕಿಗಾಗಿ ಹೋರಾಟಗಳು ಆರಂಭವಾಗಿದ್ದವು. ಮುಂದೆ ಐವತ್ತರ ದಶಕದಲ್ಲಿ ಮುಂದುವರೆದು ಕಾಗೋಡು ಸತ್ಯಾಗ್ರಹವಾಗಿ, ತೀರ್ಥಹಳ್ಳಿ ಹೋರಾಟಗಳಾಗಿ ಶಿವಮೊಗ್ಗ ಜಿಲ್ಲೆಗೂ ಹಬ್ಬಿತು. ಈ ಹೋರಾಟಗಳ ಮುಖ್ಯ ಸಾಧನೆ ಎಂದರೆ ಗೇಣಿದಾರರಿಗೆ, ಭೂಹೀನ ಕೂಲಿಕಾರರಲ್ಲಿ ಹಲವರಿಗೆ ಭೂಮಾಲಿಕರನ್ನು ಎದುರು ಹಾಕಿಕೊಂಡು ಗೇಣಿ ಅರ್ಜಿ ಹಾಕುವ ದಿಟ್ಟತನ ಮೂಡಿಸಿತು. ಮಾತ್ರವಲ್ಲ, ಗೇಣಿ ಸಲ್ಲಿಸಿದುದಕ್ಕೆ ಗೇಣಿ ರಸಿತಿ ಸಿಗುವಂತೆ, ಗೇಣಿ ಚೀಟು ಸಿಗುವಂತೆ ಮಾಡಿತು. ಅಂತಹ ಪ್ರಬಲ ಸಾಕ್ಷಿ ಕರ್ನಾಟಕದ ಬೆರೆಲ್ಲೂ ಗೇಣಿದಾರರ ಬಳಿ ಇರಲಿಲ್ಲ .
ನಂತರ ಮೇಲೆ ವಿವರಿಸಿರುವ 1955 ರ ನೆಹರೂ ಘೋಷಣೆಯನ್ನು ಜಾರಿ ಮಾಡಲು ಅಂದಿನ ಮೈಸೂರು ರಾಜ್ಯದಲ್ಲಿ 1957 ರಲ್ಲಿ ಬಿಡಿ ಜತ್ತಿಯವರ ಅಧ್ಯಕ್ಷತೆಯಲ್ಲಿ ಭೂಸುಧಾರಣಾ ಸಮಿತಿ ನೇಮಕವಾಯಿತು. ಕುರಿ ಕಾಯಲು ತೋಳಕ್ಕೆ ವಹಿಸಿಕೊಟ್ಟಂತಾಯಿತು ಈ ಸಮಿತಿಯ ನೇಮಕ. ಈ ಸಮಿತಿಯ ಶಿಫಾರಸುಗಳ ಪ್ರಕಾರ ರೂಪಿಸಿದ ಭೂಸುಧಾರಣಾ ಕಾಯಿದೆ 1965 ರಲ್ಲಿ ಜಾರಿಗೆ ಬಂದಿತು.
ಈ ಕಾಯಿದೆಯ ಭೂಮಿತಿ ನಿಯಮಗಳ ಪ್ರಕಾರ ರಾಜ್ಯದ ಮೂರನೇ ಎರಡು ಭಾಗದಷ್ಟು ಪ್ರದೇಶವನ್ನು ಒಣ ಪ್ರದೇಶವೆಂದು ಪರಿಗಣಿಸಿ ಐದು ಜನರ ಒಂದು ಕುಟುಂಬ 216 ಎಕರೆ, ಹತ್ತು ಜನರ ಒಂದು ಕುಟುಂಬ 432 ಎಕರೆ ಮಾಲಿಕತ್ವ ಹೊಂದಬಹುದಾಗಿತ್ತು. ಹೀಗಾಗಿ ಹೆಚ್ಚುವರಿ ಭೂಮಿ ಘೋಷಣೆಯಾಗುವ , ಅದನ್ನು ಹಂಚುವ ಪ್ತಶ್ನೆ ಉದ್ಭವಿಸಲೇ ಇಲ್ಲ. ಈ ಕಾಯಿದೆಯ ಯಾವ ಅಂಶವೂ ಜಾರಿಯಾಗಲೇ ಇಲ್ಲ. ಆದರೆ ಈ ಕಾಯಿದೆಯಲ್ಲಿಯೂ ಕೂಡಾ ಭೂಮಾಲಕರು ಸ್ವಂತ ಸಾಗುವಳಿಗೆ ಮತ್ತು ಇತರ ಹಲವು ಕಾರಣಗಳಿಗೆ ಗೇಣೀದಾರರನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ವಶಪಡಿಸಿಕೊಳ್ಳಬಹುದಿತ್ತು. ಭೂಮಾಲಿಕರಿಗೆ ಗೇಣಿದಾರರನ್ನು ಒಕ್ಕಲೆಬ್ಬಿಸಲು ನೀಡಿದ ಸೂಚನೆಯಾಗಿ ಮಾತ್ರ ಕಾಯಿದೆ ಪರಿಣಾಮ ಬೀರಿತು.
1974 ರ ಕಾಯಿದೆ
ಇಂದಿರಾಗಾಂಧಿಯವರ ನಿರ್ದೇಶನದಲ್ಲಿ ದೇವರಾಜ ಅರಸುರವರು ಮುಖ್ಯಮಂತ್ರಿಅಗಿದ್ದ ಸಮಯದಲ್ಲಿ ರೂಪಿಸಿದ ಭೂಸುಧಾರಣಾ ಕಾಯಿದೆ ಬಹಳ ಕ್ರಾಂತಿಕಾರಕ ಎನ್ನುವ ಭಾವನೆಯನ್ನು ಸರ್ವಸಮ್ಮತಿ ಎಂಬಂತೆ ಅಭಿಪ್ರಾಯ ರೂಪಿಸಲಾಗಿದೆ. ಆದರೆ 1965 ರ ಕಾಯಿದೆಯನ್ನೂ ಬಹಳ ಒಳ್ಳೆಯ ಕಾಯಿದೆ ಎಂದು ಹೊಗಳಿದವರಿಗೇನೂ ಕಡಿಮೆ ಇರಲಿಲ್ಲ. ಆದರೆ ಯಾವುದೇ ಕಾಯಿದೆಯ ಉಪಯುಕ್ತತೆ, ಪ್ರಗತಿಪರತೆಯನ್ನು ಅದರ ಪರಿಣಾಮದಲ್ಲಿಯೇ ಅಳೆಯಬೇಕು.
1974ರ ಕಾಯಿದೆಯಲ್ಲಿ ಭೂಮಿತಿಯ ಪ್ರಮಾಣವನ್ನು ನೋಡೋಣ. ಕುಟುಂಬ, ಭೂ ಗುಣ ಮಟ್ಟ, ನೀರಾವರಿ ಅಥವಾ ಒಣ ಪ್ರದೇಶ ಇವೆಲ್ಲವನ್ನೂ ಪರಿಗಣಿಸಿದರೆ ಐದು ವಯಸ್ಕ ಮಕ್ಕಳು, ವಿಧವೆ ತಾಯಿ ಇರುವ ಒಂದು ಕುಟುಂಬಕ್ಕೆ 324 ಎಕರೆಯವರೆಗೂ ಒಣ ಭೂಮಿಯ ಒಡೆತನ ಇಟ್ಟುಕೊಳ್ಳಬಹುದು. 1965 ರ ಕಾಯಿದೆಯಲ್ಲಿ 432 ಎಕರೆಗಿಂತ ಇದೇನೂ ಬಹಳ ಕಡಿಮೆಯಾಗಲಿಲ್ಲ. ಅಷ್ಟೇ ಅಲ್ಲದೇ ಸ್ವಂತ ನೀರಾವರಿ ಮಾಡಿಕೊಂಡ ಭೂಮಾಲಕರು 65 ರ ಕಾಯಿದೆಯಲ್ಲಿ ಕೇವಲ 54 ಎಕರೆ ಭೂಮಿ ಇಟ್ಟುಕೊಳ್ಳಬಹುದಾಗಿದ್ದರೆ 74ರ ಕಾಯಿದೆಯ ಪ್ರಕಾರ 150 ಎಕರೆ ನೀರಾವರಿ ಭೂಮಿಯ ಒಡೆತನ ಹೊಂದಬಹುದು. ಇಂತಹಾ ಕಾಯಿದೆಯಿಂದ ಯಾವ ರೀತಿಯ ಹೆಚ್ಚುವರಿ ಭೂಮಿ ಸ್ವಾಧೀನ ಮತ್ತು ಭೂಹಂಚಿಕೆಯನ್ನು ನಿರೀಕ್ಷಿಸಬಹುದು ! ಭೂಮಿಯನ್ನು ಮುಚ್ಚಿಟ್ಟುಕೊಳ್ಳಲು ಕಾಯಿದೆ ಎಷ್ಟೊಂದು ಅನುಕೂಲ ಕಲ್ಪಿಸಿದೆ ಎಂದರೆ ಭೂಮಾಲಕ ಪರ ಪಟ್ಟಭದ್ರ ಹಿತಗಳ ಕೈವಾಡವನ್ನು ಕೆಳ ಅಧಿಕಾರಿಗಳಿಂದ ಮುಖ್ಯಮಂತ್ರಿಯವರೆಗೆ ಎಲ್ಲ ಹಂತದಲ್ಲಿಯೂ ಕಾಣಬಹುದು.
ಇಂತಹ ಭೂಮಿತಿ ಕಾಯಿದೆಯ ಪ್ರಕಾರ ಹೆಚ್ಚುವರಿ ಎಂದು ವಶಪಡಿಸಿಕೊಂಡದ್ದು ಕೇವಲ 1,54,293 ಎಕರೆ ಭೂಮಿ , ಅದರಲ್ಲಿಯೂ ಭೂಹೀನರಿಗೆ ಹಂಚಲಾದದ್ದು ಕೇವಲ 1,04,437 ಎಕರೆ ಭೂಮಿ. ಇದು ಸುಮಾರು ನಲವತ್ತು ಸಾವಿರ ಕುಟುಂಬಗಳಿಗೆ ನೀಡಲಾಗಿದೆ. ಈ ಭೂಮಿಯಲ್ಲಿ ಶೇ. 70 ರಷ್ಟು ಒಣಭೂಮಿ. ಇದರಿಂದ ಯಾವ ಜನರ ಉದ್ಧಾರ ಆಗಿರಬಹುದು ? ಹೀಗೆ ಹಂಚಿದ ಭೂಮಿಯಲ್ಲಿ ಗಣನೀಯ ಪ್ರಮಾಣದ ಭೂಮಿಯನ್ನು ಅದರ ಒಡೆತನ ಹೊಂದಿದ್ದ ಭೂಮಾಲಕರು ಹಂಚಲ್ಪಟ್ಟ ಭೂಹೀನ ದಲಿತರ ವಶಕ್ಕೆ ನೀಡದಿರುವ ಹಲವು ಪ್ರಕರಣಗಳಿವೆ.
ಉಳುವವನೇ ಹೊಲದೊಡೆಯ ಅಥವಾ ಗೇಣಿದಾರರಿಗೆ ಒಡೆತನ
74 ರ ಭೂಸುಧಾರಣಾ ಕಾನೂನಿನ ಈ ಅಂಶ ಇನ್ನಿಲ್ಲದಷ್ಟು ಪ್ರಚಾರ ಪಡೆದಿದೆ. ಆದರೆ ಇದರ ಪರಿಣಾಮವನ್ನು ಜನಪರ ದೃಷ್ಟಿಯಿಂದ ಗಮನಿಸಿದರೆ ಆಗ ತಿಳಿಯುತ್ತದೆ ಇದರ ನಿಜ ಹೂರಣ. 1957ರಲ್ಲಿ ಇದ್ದ ಗೇಣಿದಾರರಲ್ಲಿ ಕೇವಲ ಶೇ. 27ರಷ್ಟು ಜನರಿಗೆ ಮಾತ್ರ ಭೂಮಿಯ ಒಡೆತನ ದಕ್ಕಿದೆ. 1961 ರಲ್ಲಿ ಗೇಣಿದಾರರಾಗಿದ್ದವರಲ್ಲಿ 1974 ರ ವೇಳೆಗೆ ಗೇಣಿ ಅರ್ಜಿ ಸಲ್ಲಿಸಿದವರು ಕೇವಲ ಶೇ.22 ರಷ್ಟು ಮಾತ್ರ. 1961 ರಲ್ಲಿ 18,13,154 ಗೇಣಿದಾರರಿದ್ದರೆ 1971 ರ ವೇಳೆಗೆ ಕೇವಲ 3,97,402 ಮಾತ್ರ ಉಳಿದಿದ್ದರು. ಇದರಲ್ಲಿ ಹದಿನಾಲ್ಕು ಲಕ್ಷ ಗೇಣಿದಾರರು ಏನಾದರು ? ಉಳಿದುಕೊಂಡವರು ಯಾರು ? ಉಳಿದುಕೊಂಡವರಲ್ಲಿ ಗೇಣಿ ಭೂಮಿಯನ್ನು ಪಡೆದುಕೊಂಡವರು ಯಾರು ಎಂಬ ಬಗ್ಗೆ ಅಧ್ಯಯನಗಳು ನಡೆದಿವೆ. ಉಳುದುಕೊಂಡಿದ್ದ ಗೇಣಿದಾರರು ಬಹಳ ಮಟ್ಟಿಗೆ ಪ್ರಬಲ ಜಾತಿಗಳ ಬಲಾಢ್ಯ ಗೇಣಿದಾರರು.

ಹೈದರಾಬಾದ್ ಕರ್ನಾಟಕದಲ್ಲಿ ಮೇಲೆ ನೀಡಿದ ಗೇಣಿದಾರರ ಅಂಕಿ ಅಂಶಗಳೊಡನೆ 1974 ಕಾಯಿದೆಯ ಅಡಿಯಲ್ಲಿ ಅರ್ಜಿ ಹಾಕಿದವರ ಸಂಖ್ಯೆಯನ್ನು ಹೋಲಿಸಿ ನೋಡಿದರೆ ಈ ಪ್ರದೇಶದ ಭೂಸುಧಾರಣೆಯ ಕರಾಳ ಸತ್ಯ ಹೊರಬೀಳುತ್ತದೆ. ಬೀದರಿನಲ್ಲಿದ್ದ ಮೂರೂವರೆ ಲಕ್ಷ ಗೇಣೀದಾರರಲ್ಲಿ 1974 ರ ಕಾಯಿದೆ ಅಡಿಯಲ್ಲಿ ಅರ್ಜಿ ಹಾಕಿದವರು ಕೇವಲ 6,091 , ಈ ಅರ್ಜಿ ಗೇಣಿದಾರರ ಪರವಾಗಿ ಇತ್ಯರ್ಥವಾಗಿದ್ದು ಕೇವಲ 1947, ಗುಲಬರ್ಗಾದಲ್ಲಿ ಅಂದು ಇದ್ದ ಎರಡೂ ಮುಕ್ಕಾಲು ಲಕ್ಷ ಗೇಣಿದಾರರಲ್ಲಿ ಅರ್ಜಿ ಹಾಕಿದವರು 61,265, ಗೇಣಿದಾರರ ಪರವಾಗಿ ಇತ್ಯರ್ಥವಾಗಿದ್ದು ಕೇವಲ 10,993 ಇದೇ ಪ್ರಮಾಣವನ್ನು ರಾಯಚೂರು, ಬಳ್ಳಾರಿ, ಬಿಜಾಪುರ ಬೆಳಗಾಂ , ಧಾರವಾಢ ಮೊದಲಾದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಣಬಹುದು.
ಶೇ 80-90 ರವರೆಗೆ ಇದ್ದ ಗೇಣಿದಾರರ ಪ್ರಮಾಣದಲ್ಲಿ ಕೇವಲ 10 ಸಾವಿರ ಜನರಿಗೆ ಭೂಮಿ ದಕ್ಕಿದೆ. ಹೀಗೆ ಒಬ್ಬ ಗೇಣಿದಾರರಿಗೆ ಎಷ್ಟು ಭೂಮಿ ಸಿಕ್ಕಿದೆ ಎಂದು ಪರಿಶೀಲಿಸಿದರೆ ಕರ್ನಾಟಕದ ಬೇರೆಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಸರಾಸರಿ 12-16 ಎಕರೆ ಭೂಮಿ ಪಡೆದಿದ್ದಾರೆ. ಇದು ಸರಾಸರಿ ಎಂಬುದನ್ನು ಪರಿಗಣಿಸಿದರೆ ಐವತ್ತು ಅರವತ್ತು ಎಕರೆಗಳನ್ನು ಪಡೆದವರೂ ಇದ್ದಾರೆ ಎಂಬುದು ಸೂಚಿತವಾಗುತ್ತದೆ. ಅಂದರೆ ಶ್ರೀಮಂತ ರೈತರು, ಸಣ್ಣ ಭೂಮಾಲಿಕರೇ ಈ ಭೂಮಿ ಪಡೆದಿದ್ದಾರೆ ಎಂಬುದು ಗೇಣಿ ಸುಧಾರಣೆಯ ನಿಜ ಮುಖವನ್ನು ಸಾರುತ್ತದೆ. ಅಷ್ಟೇ ಕೊಪ್ಪಳ, ರಾಯಚೂರು ಜಿಲ್ಲೆಗಳ ತುಂಗಭದ್ರಾ ನೀರಾವರಿಯಲ್ಲಿ ಭೂಸುಧಾರಣೆಯ ನಂತರದ ೯೦ ರ ದಶಕದಲ್ಲಿ ಕೂಡಾ ಐದು ನೂರು ಎಕರೆ ನೀರಾವರಿ ಭೂಮಿ ಹೊಂದಿದವರು ಕೆಲವರು, ನೂರಾರು ಎಕರೆ ಭೂಮಿ ಹೊದಿದವರು ಹಲವರು ಇದ್ದರು. ಆ ಪ್ರದೇಶದ ರಾಜಕೀಯ ಮಾತ್ರವಲ್ಲ ಕೊಲೆ, ದೌರ್ಜನ್ಯ, ಬಡ್ಡಿ ಸಾಹುಕಾರಿಕೆ, ಸರ್ಕಾರದ ಅಧಿಕಾರಿಗಳ ಮೇಲೆ ದರ್ಪ ತೋರಿಸುತ್ತಿದ್ದರು. ದಲಿತರು, ದಲಿತೇತರ ಕೂಲಿಕಾರರು ಧಣಿ ಧಣಿ ಎಂದು ನಡುಬಾಗಿ ನಮಸ್ಕರಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಕಮ್ಯುನಿಸ್ಟ್ ಮತ್ತು ಸಮಾಜವಾದಿ ಗೇಣಿದಾರ ಚಳುವಳಿಯ ಪ್ರಭಾವ ಇದ್ದ ದ.ಕ., ಉಡುಪಿ, ಉ.ಕ. ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಗಣನೀಯ ಸಂಖ್ಯೆಯ ಸಣ್ಣ ಗೇಣಿದಾರರು ಭೂಮಿ ಕೃಷಿ ಮಾಡುತ್ತಾ ಉಳಿದಿದ್ದರು. ಗೇಣಿ ಅರ್ಜಿ ಹಾಕಿ ಭೂಮಿ ಪಡೆದರು. ಆದರೂ ಅವರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಅದರ ಕಡಿಮೆ ಸಂಖ್ಯೆಯೇ.
ಹೀಗೆ ಇಡೀ ಭೂಸುಧಾರಣಾ ಪ್ರಕ್ರಿಯೆಯಲ್ಲಿ ಹೊರಹಾಕಲಾದ ಗೇಣಿದಾರರೇ ಈಗ ಬೆಂಗಳೂರು, ಕರಾವಳಿ , ಪೂನಾ, ಗೋವಾ ಮೊದಲಾದ ಪ್ರದೇಶಗಳಲ್ಲಿ ಕೂಲಿಕಾರರಾಗಿ ದುಡಿಯುತ್ತಿರುವ ಲಕ್ಷಾಂತರ ವಲಸೆ ಕೂಲಿಕಾರರು.
ಈ ಕಾರಣದಿಂದ ಕಲ್ಯಾಣ ಕರ್ನಾಟಕದ ಈ ಪ್ರದೇಶ ಕರ್ನಾಟಕದ ಬಿಹಾರ ಎಂದು ಕರೆಸಿಕೊಳ್ಳುವಷ್ಟು ಹಿಂದುಳಿದಿದೆ. ಕೈಗಾರಿಕೆಯ ಹಿಂದುಳಿಕೆಯನ್ನು ಅಲ್ಲಿಯ ವಿದ್ಯುತ್ ಉಪಯೋಗ ಅತ್ಯಂತ ಕನಿಷ್ಠ ಪ್ರಮಾಣದಲ್ಲಿರುವುದನ್ನು ನೋಡಿದರೆ ತಿಳಿಯುತ್ತದೆ. ಸಾರಿಗೆ ಸೌಲಭ್ಯ, ನಗರೀಕರಣ , ಕೃಷಿ ಉತ್ಪಾದನೆ , ಬೆಳೆಗಳು ಮೊದಲಾದವನ್ನು ಗಮನಿಸಿದರೂ ಈ ಹಿಂದುಳಿಯುವಿಕೆ ಎದ್ದು ಕಾಣುತ್ತದೆ.
ಸಾಕ್ಷರತೆ, ಶಿಕ್ಷಣ, ದಲಿತರ, ಮಹಿಳೆಯರ ಶಿಕ್ಷಣ, ಬಾಲ್ಯ ವಿವಾಹ, ದೇವದಾಸಿ ಮೊದಲಾದ ಸಾಮಾಜಿಕ,ಧಾರ್ಮಿಕ ಪದ್ಧತಿಗಳ ಅಸ್ತಿತ್ವ, ಮೂಢ ನಂಬಿಕೆ, ಕಂದಾಚಾರಗಳು ಮೊದಲಾದವು ಈ ಪ್ರದೇಶಗಳ ಸಾಂಸ್ಕೃತಿಕ ಹಿಂದುಳಿಯುವಿಕೆಯ ಗುರುತುಗಳಾಗಿವೆ. ಬಿಜಾಪುರ ಬಾಗಲಕೋಟೆ, ಗದಗ ಜಿಲ್ಲೆ ಮತ್ತು ಇತರ ಕೆಲ ಪ್ರದೇಶಗಳಿಗೆ ಕೂಡಾ ಈ ಪ್ರಕ್ರಿಯೆ ಅನ್ವಯಿಸುತ್ತದೆ.
ಹೀಗೆ ಕರ್ನಾಟಕದ ಭೂಸುಧಾರಣೆ ಬಹಳಷ್ಟು ಮಟ್ಟಿಗೆ ಗೇಣಿದಾರರು ತಲೆ ತಲಾಂತರದಿಂದ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಭೂಮಾಲಕರಿಗೆ ವರ್ಗಾಯಿಸಿತು. ಗೇಣಿದಾರರಲ್ಲಿ ಬಹು ದೊಡ್ಡ ಪ್ರಮಾಣವನ್ನು ಕೂಲಿಕಾರರನ್ನಾಗಿ ಬೀದಿಗೆ ದಬ್ಬಿತು. ಜೀತಗಾರರಾಗಿದ್ದವರೂ ಕೂಲಿಕಾರರಾದರು. ಕೂಲಿಕಾರರ ನಡುವೆ ಕೆಲಸಕ್ಕಾಗಿ ಸ್ಪರ್ಧೆ ಕೂಲಿಕಾರರ ಕೂಲಿಯನ್ನು ಕುಗ್ಗಿಸಿ ಭೂಮಾಲಕರು, ಶ್ರೀಮಂತ ರೈತರು, ಗ್ರಾಮಾಂತರ ಮತ್ತು ನಗರಗಳ ಕಂಟ್ರಾಕ್ಟರ್‌ಗಳು , ಕೈಗಾರಿಕೆಗಳ ಮಾಲಿಕರಿಗೆ ಅಗ್ಗದ ಕೂಲಿಕಾರರನ್ನು ಒದಗಿಸಿ ಅವರನ್ನು ಮತ್ತಷ್ಟು ದೊಡ್ಡ ಶ್ರೀಮಂತರನ್ನಾಗಿಸಲು ಭೂಸುಧಾರಣಾ ಕಾನೂನು ಬಹು ದೊಡ್ಡ ಕಾಣಿಕೆ ನೀಡಿದೆ .
ಇದರ ಫಲ ಪಾಳೆಯಗಾರಿ ಮೌಲ್ಯಗಳು, ದೌರ್ಜನ್ಯ, ದಬ್ಬಾಳಿಕೆಗಳು ಪ್ರಜಾಪ್ರಭುತ್ವವನ್ನು ವಿರೂಪಗೊಳಿಸಿವೆ. ವಂಶಾನುಗತ ರಾಜಕೀಯ ರಾಜ್ಯದ ಮೂರೂ ಆಳುವ ವರ್ಗದ ರಾಜಕೀಯ ಪಕ್ಷಗಳಲ್ಲಿ ವಿಜೃಂಭಿಸಲು ಕಾರಣವಾಗಿದೆ.
ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ | ಕಾರ್ಯಕ್ರಮ ಅಡ್ಡಿಪಡಿಸುವ ಪೊಲೀಸರ ಮೇಲೆ ದೂರು ದಾಖಲಿಸಬೇಕು – ನವೀನ್ ಸೂರಿಂಜೆ
