ಕಲ್ಯಾಣ-ಪ್ರಭುತ್ವದ ಕ್ರಮಗಳು ʻʻಜನರಂಜನೆʼʼಗಾಗಿ ಎಂದು ಹೀನಾಯಗೊಳಿಸುವ ನವ-ಉದಾರವಾದ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ, ನಾಗರಾಜ್

ಈಗ ನವ ಉದಾರವಾದಿ ಶಬ್ದಕೋಶದಲ್ಲಿರುವ ಒಂದು ಪ್ರಮುಖ ಪರಿಕಲ್ಪನೆಪೊಪ್ಯುಲಿಸಂ’.  ಅಂದರೆ ಜನರಂಜನೆಗಾಗಿಯಷ್ಟೇ ಕೈಗೊಳ್ಳುವ ಜನಮರುಳು ಕಮ್ರಗಳು ಎಂದು ಹೀನಾಯಗೊಳಿಸುವ ಮೂಲಕ, ನವ ಉದಾರವಾದದ ಪ್ರಮುಖ ಕಥನವು ಜನರಿಗೆ ಎಲ್ಲಾ ಆರ್ಥಿಕ ವರ್ಗಾವಣೆಗಳನ್ನು ಸಾರಭೂತವಾಗಿ ನಿರಾಕರಿಸುತ್ತದೆ. ಆದ್ದರಿಂದ, ಜನರಿಗೆ ನೀಡುವ ಯಾವುದೇ ಆರ್ಥಿಕ ರಿಯಾಯಿತಿಗಳನ್ನು ನಿಲ್ಲಿಸಬೇಕು ಮತ್ತು ಸರ್ಕಾರದ ಗಮನವು ಸಂಪೂರ್ಣವಾಗಿ ಜಿಡಿಪಿಯ ಬೆಳವಣಿಗೆಯ ಮೇಲೆ ಹರಿಯಬೇಕು ಎಂಬುದಾಗಿ ನವ ಉದಾರವಾದ ಬಯಸುತ್ತದೆ. ಅಂತಹ ಕ್ರಮಗಳು, ಹಣ ವರ್ಗಾವಣೆಗಳು ಕೇವಲ ಚುನಾವಣಾ ಒತ್ತಡದಿಂದಾಗಿ ಮಾಡುವ ಅವಿವೇಕದ ಕ್ರಮಗಳಾಗುತ್ತವೆ ಎಂಬುದು ನವ ಉದಾರವಾದ ತರ್ಕ. ತರ್ಕವನ್ನು ಸ್ವಲ್ಪ ವಿಸ್ತರಿಸಿ ನೋಡಿದಾಗ, ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಸರ್ಕಾರದ ಕಡೆಯಿಂದ ನಡೆಯುವ ಎಲ್ಲ ಪ್ರಯತ್ನಗಳೂ ಅವಿವೇಕದ ಕ್ರಮಗಳೇ ಎಂಬ ನಿಲುವು ಅದರಲ್ಲಿ ಕಂಡುಬರುತ್ತದೆ. ಕಥನವು ಪೂರ್ಣವಾಗಿ ನವಉದಾರವಾದಿ ಆಳ್ವಿಕೆಗೆ ಅನುಗುಣವಾಗಿದೆ.

ವರ್ಗ ವೈಷಮ್ಯವನ್ನು ಆಧರಿಸಿದ ಎಲ್ಲಾ ಆಳ್ವಿಕೆಗಳಿಗೂ ತಮ್ಮ ವರ್ಗ ದಬ್ಬಾಳಿಕೆಯನ್ನು ಸಮರ್ಥಿಸುವ ಒಂದು ಕಥನದ ಅಗತ್ಯವಿರುತ್ತದೆ ಮತ್ತು ಈ ಕಥನವು ತನ್ನದೇ ಒಂದು ಶಬ್ದಸಂಪತ್ತನ್ನು ಹೊಂದಿರಬೇಕಾಗುತ್ತದೆ. ನವ ಉದಾರವಾದಿ ಆಳ್ವಿಕೆಯೂ ಸಹ ತನ್ನದೇ ಕಥನವನ್ನು ಮತ್ತು ಶಬ್ದಸಂಪತ್ತನ್ನು ಅಭಿವೃದ್ಧಿಪಡಿಸಿಕೊಂಡಿದೆ. ನವ ಉದಾರವಾದಿ ಶಬ್ದಕೋಶದಲ್ಲಿರುವ ಒಂದು ಪ್ರಮುಖ ಪರಿಕಲ್ಪನೆಯೆಂದರೆ populism(ಪೊಪ್ಯುಲಿಸಂ) ಅಂದರೆ ಅಗ್ಗದ ಜನಪ್ರಿಯತೆ  ಅಥವ “ಜನ ರಂಜನೆ” ಎಂಬುದು. ಈ ಪರಿಕಲ್ಪನೆಯನ್ನು ಮಾಧ್ಯಮಗಳು ಬಹಳವಾಗಿ ಚಲಾವಣೆಯಲ್ಲಿಟ್ಟಿವೆ. ಈ ಮಾಧ್ಯಮಗಳಲ್ಲಿ ಇರುವವರೆಲ್ಲರೂ ಮೇಲು-ಮಧ್ಯಮ ವರ್ಗಕ್ಕೆ ಸೇರಿದ ಜನರೇ. ಈ ಮೇಲು-ಮಧ್ಯಮ ವರ್ಗದ ಜನರೇ ನವ-ಉದಾರವಾದಿ ಆಳ್ವಿಕೆಯ ಬಹು ದೊಡ್ಡ ಫಲಾನುಭವಿಗಳು. ಆದ್ದರಿಂದ, ನವ-ಉದಾರವಾದದ ಮುಂದುವರಿಕೆಯಲ್ಲಿ ಈ ಮೇಲು-ಮಧ್ಯಮ ವರ್ಗದ ಜನರು ಒಂದು ಪಟ್ಟಭದ್ರ ಹಿತಾಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಹಾಗಾಗಿ, ಈ ಪರಿಕಲ್ಪನೆಯು ಮಾಧ್ಯಮಗಳಲ್ಲಿ ಹೆಚ್ಚಿನ ಚಲಾವಣೆಯಲ್ಲಿದೆ. ಈ ಪರಿಕಲ್ಪನೆಯ ಹರವು ಎಷ್ಟು ವ್ಯಾಪಕವಾಗಿದೆಯೆಂದರೆ, ಸದುದ್ದೇಶ ಹೊಂದಿದ ಪ್ರಗತಿಪರ ವಿದ್ವಜ್ಜನರೂ ಸಹ ಈ ಪದವನ್ನು ಅದು ಹೊಮ್ಮಿಸುವ ತಿರಸ್ಕಾರ-ಕುಹಕದ ಭಾವನೆಗಳಿಗೆ ಬಲಿಯಾಗಿದ್ದಾರೆ ಮತ್ತು ಆ ಪದವನ್ನು ಕಾರ್ಪೊರೇಟ್ ಒಡೆತನದ ಮಾಧ್ಯಮಗಳು ಬಳಸುವ ಹೀನಾರ್ಥದಲ್ಲೇ ಬಳಸುತ್ತಾರೆ.

ಇದನ್ನು ಓದಿ: “ಬರುತಿದೆ ಬರುತಿದೆ ವಿಶ್ವ ಆರ್ಥಿಕ ಹಿಂಜರಿತ”

ಈ ಪದವು ನವ-ಉದಾರವಾದಿ ಬುದ್ಧಿಜೀವಿಗಳ ಆವಿಷ್ಕಾರವೇನಲ್ಲ. ಈ ಪದ ಬಹಳ ಹಿಂದೆಯೇ ಬಳಕೆಯಾಗಿದೆ. ಹಿಂದೆ ಅದು ಹೊಂದಿದ್ದ ಅರ್ಥವು ಈಗ ಬಳಕೆಯಾಗುತ್ತಿರುವ ಅರ್ಥಕ್ಕಿಂತ ಬಹಳ ಭಿನ್ನವಾಗಿತ್ತು. ಉದಾಹರಣೆಗೆ, ಲೆನಿನ್ ಸೇರಿದಂತೆ ರಷ್ಯಾದ ಮಾರ್ಕ್ಸ್ವಾದಿಗಳು ರಷ್ಯಾದ ನರೋಡ್ನಿಕ್‌ರನ್ನು ‘ಪೊಪ್ಯುಲಿಸ್ಟ್’ಎಂದು ಕರೆದರು. ಜನಸಮೂಹದೊಳಗೆ ಯಾವ ವರ್ಗ ಭೇದಗಳನ್ನೂ ಗುರುತಿಸದ ಅವರು ಮನಸೊ ಇಚ್ಛೆಯಾಗಿ ಎಲ್ಲರನ್ನೂ “ಜನರು” ಎಂದು ಕರೆಯುತ್ತಿದ್ದರು ಎಂಬ ಅಂಶವನ್ನು ಸೂಚಿಸಲು ನರೋಡ್ನಿಕ್‌ರನ್ನು ಹಾಗೆಂದು ಕರೆದರೇ ವಿನಃ, “ಜನರು” ಎಂಬ ಪದ ಬಳಕೆಯನ್ನೇ ಅಪಖ್ಯಾತಿಗೊಳಿಸುವುದು ಅವರ ಉದ್ದೇಶವಾಗಿರಲಿಲ್ಲ. ಏಕೆಂದರೆ, ಕಾರ್ಮಿಕರು ಮತ್ತು ರೈತರನ್ನು ಸೂಚಿಸಲು “ದುಡಿಯುವ ಜನರು” ಎಂಬ ಪದವನ್ನು ಸ್ವತಃ ಲೆನಿನ್ ಬಳಸುತ್ತಿದ್ದರು ಮತ್ತು ಜನರ ನಡುವಿನ ವ್ಯತ್ಯಾಸಗಳನ್ನು ಅಳಿಸಿಹಾಕುವುದನ್ನು ತಪ್ಪಿಸುವ ಉದ್ದೇಶದಿಂದ ಈ ಪದ-ಬಳಕೆಯನ್ನು ಸೈದ್ಧಾಂತಿಕವಾಗಿ ನಿರೂಪಿಸಲಾಯಿತು. ಅದೇನೇ ಇರಲಿ, ನವ-ಉದಾರವಾದದ ಅಡಿಯಲ್ಲಿ, ಯಾವುದೇ ವಿಭಾಗದ ದುಡಿಯುವ ಜನರಿಗೆ ಹಣ ವರ್ಗಾವಣೆ ಮಾಡುವ ಆಶ್ವಾಸನೆಗಳಿಗಾಗಲಿ ಅಥವಾ ಧಾರ್ಮಿಕ ದ್ವೇಷದ ಆಧಾರದ ಮೇಲೆ ಜನರನ್ನು ಸಜ್ಜುಗೊಳಿಸುವ ಪ್ರಯತ್ನಗಳಿಗಾಗಲಿ ಈ ಪದವನ್ನು ಬಳಸಲಾಗುತ್ತಿದೆ.

ವ್ಯಂಗ್ಯಚಿತ್ರ: ಸತೀಶ ಆಚಾರ್ಯ

“ಜನರಂಜನೆ” ಎಂಬ ಪದವು ಅದರ ಇಂದಿನ ಬಳಕೆಯಲ್ಲಿ, ಫ್ಯಾಸಿಸ್ಟ್ ಮತ್ತು ಅರೆ-ಫ್ಯಾಸಿಸ್ಟ್ ಆಶ್ವಾಸನೆಗಳನ್ನು ಒಳಗೊಳ್ಳುತ್ತದೆ ಮತ್ತು ಜನರ ಮೇಲಿನ ದಬ್ಬಾಳಿಕೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಅವರ ಪ್ರಯತ್ನಗಳನ್ನು ಒಳಗೊಳ್ಳುತ್ತದೆ. ಅಂತಹ ದಬ್ಬಾಳಿಕೆಯನ್ನು ಹಗುರಗೊಳಿಸುವ ಕೆಲವು ಅನುಕೂಲಗಳನ್ನು ಜನರಿಗಾಗಿ ಪಡೆಯುವ ಪ್ರಯತ್ನಗಳನ್ನೂ ಸಹ ಒಳಗೊಳ್ಳುತ್ತದೆ. ಮೊದಲನೆಯದನ್ನು ಕೆಲವೊಮ್ಮೆ “ಬಲಪಂಥೀಯ ಪೊಪ್ಯುಲಿಸಂ” ಎಂದು ಮತ್ತು ಎರಡನೆಯದನ್ನು “ಎಡಪಂಥೀಯ ಪೊಪ್ಯುಲಿಸಂ” ಎಂದು ಕರೆಯಲಾಗುತ್ತದೆ. ಜನಪ್ರಿಯವಾದ ಕ್ರಮಗಳನ್ನು ಈ ರೀತಿಯಲ್ಲಿ ಬಣ್ಣಿಸುವ ಕ್ರಮದಲ್ಲಿ ಸೈದ್ಧಾಂತಿಕವಾಗಿ ದಿಕ್ಕು ತಪ್ಪಿಸುವ ಅಂಶವಿದೆ: ಈ ಪದವನ್ನು ಬಳಕೆಮಾಡುವಾಗ ಅದರಲ್ಲಿ ವರ್ಗ ದೃಷ್ಟಿಕೋನವಿಲ್ಲ ಎಂಬುದಷ್ಟೆ ಅಲ್ಲ, “ಎಡಪಂಥೀಯ” ಮತ್ತು “ಬಲಪಂಥೀಯ” ಜನಪ್ರಿಯತೆ ಎಂಬ ಎರಡನ್ನೂ ನೈತಿಕ-ಅನಾರೋಗ್ಯಕರ ಪ್ರವೃತ್ತಿಗಳು ಎಂಬುದಾಗಿ ಪರಿಗಣಿಸುವ ಮೂಲಕ, “ಮಧ್ಯಮ” ಅಂದರೆ ಉದಾರವಾದಿ ಬಂಡವಾಳಶಾಹಿಯ ನಿಲುವು ಮಾತ್ರವೇ “ಕಾರ್ಯಸಾಧ್ಯ” ನಿಲುವು ಎಂದು ಬಿಂಬಿಸಲಾಗಿದೆ. ಜನರನ್ನು ಇಡಿಯಾಗಿ ಗ್ರಹಿಸುವ ಸಂಬAಧವಾಗಿ ರಷ್ಯಾದ ಮಾರ್ಕ್ಸ್ ವಾದಿಗಳು ಬಳಸಿದ ಕಠಿಣ ಸೈದ್ಧಾಂತಿಕ ವಿಮರ್ಶಾ ಪರಿಕಲ್ಪನೆಯನ್ನು ಈಗ ಉದಾರವಾದಿ ಬೂರ್ಜ್ವಾಗಳ ಪರಮ ಆದರ್ಶವಾಗಿ ಪರಿವರ್ತಿಸಲಾಗಿದೆ.

ಇದನ್ನು ಓದಿ: ಆರ್ಥಿಕ ಬೆಳವಣಿಗೆಯಿರಲಿ, ಸ್ಥಗಿತತೆಯಿರಲಿ ಬಡತನ ಮಾತ್ರ ಬೆಳೆಯುತ್ತಲೇ ಹೋಗುತ್ತದೆ

ಇದು ಕೇವಲ ಸೈದ್ಧಾಂತಿಕವಾಗಿ ತಿಪ್ಪೆಸಾರಿಸುವ ಪ್ರಕರಣ ಮಾತ್ರವಲ್ಲ; ನಿಸ್ಸಂದೇಹವಾಗಿ ಇದು ತಪ್ಪುದಾರಿಗೆಳೆಯುವ ಕೆಲಸವೂ ಅಗುತ್ತದೆ. “ಬಲಪಂಥೀಯ” ಪೊಪ್ಯುಲಿಸಂ ಎಂದು ಹಣೆಪಟ್ಟಿ ಹಚ್ಚಲ್ಪಟ್ಟ ಫ್ಯಾಸಿಸ್ಟ್, ನವ-ಫ್ಯಾಸಿಸ್ಟ್ ಮತ್ತು ಅರೆ-ಫ್ಯಾಸಿಸ್ಟ್ ನಿಲುವುಗಳ ಹೆಗ್ಗುರುತು ಏನೆಂದರೆ, ಜನಸಾಮಾನ್ಯರಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸಲು ಅವರ ಬಳಿ ಏನೂ ಇಲ್ಲ, ಅಂದರೆ. ಯಾವ ಯೋಜನೆಯೂ ಇಲ್ಲ, ಯಾವ ಕಾರ್ಯಕ್ರಮವೂ ಇಲ್ಲ ಎಂಬುದು. ಇದಕ್ಕೆ ವ್ಯತಿರಿಕ್ತವಾಗಿ, “ಎಡಪಂಥೀಯ” ಪೊಪ್ಯುಲಿಸಂ ಎಂದು ಕರೆಯಲ್ಪಡುವ ಎಡಪಂಥೀಯರ ನಿಲುವು, ಪ್ರಭುತ್ವವು ಕಲ್ಯಾಣ-ರಾಜ್ಯ ಕ್ರಮಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತದೆ, ಮತ್ತು, ಕನಿಷ್ಠ ಪಕ್ಷ, ಜನರಿಗೆ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತದೆ. ಈ ಎರಡೂ ನಿಲುವುಗಳನ್ನು ಸಮನಾಗಿ ಪರಿಗಣಿಸುವ ಮೂಲಕ ಮತ್ತು ಸಾಮಾನ್ಯವಾಗಿ “ಪೊಪ್ಯುಲಿಸಂ” ಅಥವ ಜನಪ್ರಿರಂಜನೆಗಾಗಿಯಷ್ಟೇ ಎಂದು ಹೀನಾಯಗೊಳಿಸುವ ಮೂಲಕ, ನವ ಉದಾರವಾದದ ಈ ಪ್ರಮುಖ ಕಥನವು ಸಾರಭೂತವಾಗಿ ಜನರಿಗೆ ಎಲ್ಲಾ ಆರ್ಥಿಕ ವರ್ಗಾವಣೆಗಳನ್ನು ನಿರಾಕರಿಸುತ್ತದೆ. ಆದ್ದರಿಂದ, ಜನರಿಗೆ ನೀಡುವ ಯಾವುದೇ ಆರ್ಥಿಕ ರಿಯಾಯಿತಿಗಳನ್ನು ನಿಲ್ಲಿಸಬೇಕು ಮತ್ತು ಸರ್ಕಾರದ ಗಮನವು ಸಂಪೂರ್ಣವಾಗಿ ಜಿಡಿಪಿಯ ಬೆಳವಣಿಗೆಯ ಮೇಲೆ ಹರಿಯಬೇಕು ಎಂಬುದಾಗಿ ನವ ಉದಾರವಾದ ಬಯಸುತ್ತದೆ. ಜನರಿಗೆ ಮಾಡುವ ವರ್ಗಾವಣೆಗಳು ಬೆಳವಣಿಗೆಯನ್ನು ವೇಗಗೊಳಿಸುವ ಹೂಡಿಕೆಗಳನ್ನು ಕೊರೆ ಮಾಡುತ್ತವೆ; ಆದ್ದರಿಂದ ಅಂತಹ ವರ್ಗಾವಣೆಗಳು ವ್ಯರ್ಥವೇ; ಕೇವಲ ಚುನಾವಣಾ ಒತ್ತಡದಿಂದಾಗಿ ಮಾಡುವ ಈ ಹಣ ವರ್ಗಾವಣೆಗಳು ಅವಿವೇಕದ ಕ್ರಮಗಳಾಗುತ್ತವೆ ಎಂಬುದು ನವ ಉದಾರವಾದ ತರ್ಕ. ಈ ತರ್ಕವನ್ನು ಸ್ವಲ್ಪ ವಿಸ್ತರಿಸಿ ನೋಡಿದಾಗ, ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಸರ್ಕಾರದ ಕಡೆಯಿಂದ ನಡೆಯುವ ಎಲ್ಲ ಪ್ರಯತ್ನಗಳೂ ಅವಿವೇಕದ ಕ್ರಮಗಳೇ ಎಂಬ ನಿಲುವು ಅದರಲ್ಲಿ ಕಂಡುಬರುತ್ತದೆ.

ಈ ಕಥನವು ಪೂರ್ಣವಾಗಿ ನವ-ಉದಾರವಾದಿ ಆಳ್ವಿಕೆಗೆ ಅನುಗುಣವಾಗಿದೆ. ನವ-ಉದಾರವಾದಿ ನೀತಿಗಳನ್ನು ಜಾರಿಗೊಳಿಸುವ ಮೊದಲು, ಅಸಮಾನತೆಯನ್ನು ಕಡಿಮೆ ಮಾಡುವ ಮತ್ತು ಬಡತನವನ್ನು ತೊಡೆದುಹಾಕುವ ಕಾರ್ಯಕ್ರಮಗಳನ್ನು ಮುಂದುವರೆಸಿದ್ದರೆ ಯಾರೂ ಟೀಕಿಸುತ್ತಿರಲಿಲ್ಲ. ವಾಸ್ತವವಾಗಿ, ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ ಘೋಷಣೆಯ ಮೇಲೆ ಚುನಾವಣೆಯನ್ನು ಗೆದ್ದರು. ಅವರ ಮೇಲೆ ಮಾಡುತ್ತಿದ್ದ ಟೀಕೆ-ಟಿಪ್ಪಣಿಗಳು ಅವರು ಗರೀಬಿ ಹಟಾವೋ ಘೋಷಣೆ ಮಾಡಿದ ಕಾರಣದ ಮೇಲಲ್ಲ. ಬದಲಿಗೆ, ಅವರು ಗರೀಬಿ ಹಟಾವೋ ಘೋಷಣೆಯನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂಬುದು. ಜಿಡಿಪಿಯ ಕೇವಲ ಶೇ. 5ರಷ್ಟನ್ನು ಮೀಸಲಿಟ್ಟರೆ ಅದು ಭಾರತದಲ್ಲಿ ಬಡತನವನ್ನು ತೊಡೆದುಹಾಕುತ್ತದೆ ಮತ್ತು ಕೇವಲ ಒಂದು ವರ್ಷದ ಜಿಡಿಪಿ ಬೆಳವಣಿಗೆಗೆ (ಆಗ ವಾರ್ಷಿಕ ಸುಮಾರು ಶೇ. 5ರಷ್ಟು) ಸಮನಾದ ಮೊತ್ತದ ಒಟ್ಟು ಬಳಕೆಯನ್ನು ತ್ಯಜಿಸುವ ಮೂಲಕ ದೇಶವು ಈ ಕೆಲಸವನ್ನು ಮಾಡಬೇಕು ಎಂದು ಅಮರ್ತ್ಯ ಸೇನ್ ಬಹಳ ಹಿಂದೆಯೇ ಆಗ್ರಹಿಸಿದ್ದರು. ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ಬಡತನವನ್ನು ನಿರ್ಮೂಲನೆ ಮಾಡುವುದೇ ನಿಯಂತ್ರಣ ನೀತಿಗಳ (dirigiste) ಅವಧಿಯಲ್ಲಿ ಅರ್ಥವ್ಯವಸ್ಥೆಯ ಮುಂದಿದ್ದ ಪ್ರಮುಖ ಕಾರ್ಯವೆಂದು ಪರಿಗಣಿಸಲಾಗುತ್ತಿತ್ತು. ಈಗ ಹಾಗಿಲ್ಲ. ನವ-ಉದಾರವಾದಿ ಆಳ್ವಿಕೆಯಲ್ಲಿ ವರಮಾನ ಮತ್ತು ಸಂಪತ್ತಿನ ಅಸಮಾನತೆಗಳು ವಿಪರೀತವಾಗಿ ಏರಿಕೆಯಾಗುತ್ತಿದ್ದರೂ ಸಹ, “ಜನಪ್ರಿಯತೆ” ಎಂಬ ಪದವನ್ನು ಕೀಳಾಗಿ ಬಳಸುವ ಕ್ರಮವು ಸಮಾನತೆ-ಪರ ಬೇಡಿಕೆಗಳನ್ನು ತಳ್ಳಿಹಾಕುವ ಒಂದು ಸಾಧನವಾಗಿದೆ. ಮತ್ತು, ಕಾರ್ಪೊರೇಟ್ ಬಂಡವಾಳ ಮತ್ತು ಶೀಘ್ರವಾಗಿ ಬೆಳೆಯುತ್ತಿರುವ ಮೇಲು-ಮಧ್ಯಮ ವರ್ಗದವರ ಕೈಯಲ್ಲಿ ಇದು ಒಂದು ಸೈದ್ಧಾಂತಿಕ ಅಸ್ತ್ರವಾಗಿದೆ.

ಇದನ್ನು ಓದಿ: ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ

ಆರ್ಥಿಕ ಬೆಳವಣಿಗೆಗೆ ಸದಾ ಆದ್ಯತೆ ನೀಡುವ ಅಂಶವು ಬೂರ್ಜ್ವಾ ಅರ್ಥಶಾಸ್ತ್ರದ ಒಂದು ಲಕ್ಷಣವೇ. ಆದರೆ, ಅದರಲ್ಲೊಂದು ವ್ಯತ್ಯಾಸವಿದೆ. ಆರ್ಥಿಕ ಬೆಳವಣಿಗೆಯ ಪ್ರಯೋಜನಗಳು ಕಾರ್ಮಿಕ ವರ್ಗಕ್ಕೆ ಲಭಿಸುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಸಹ, ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿರುವ ಸರ್ಕಾರದ ಹಸ್ತಕ್ಷೇಪವನ್ನು ತೆಗೆದುಹಾಕಬೇಕೆಂದು ಆಡಮ್ ಸ್ಮಿತ್ ವಾದಿಸಿದ್ದರು. ಅವರ ದೃಷ್ಟಿಯಲ್ಲಿ ರಾಷ್ಟ್ರದ ಸಂಪತ್ತಿನ ಹೆಚ್ಚಳವೇ ಒಂದು ಪ್ರಮುಖ ಗುರಿಯಾಗಿತ್ತು. ಚಿನ್ನ, ಬೆಳ್ಳಿ ರೂಪದ ಸಂಪತ್ತು ಗಳಿಸುವುದಕ್ಕಿಂತ ಸರಕುಗಳನ್ನು ಉತ್ಪಾದಿಸಲು ಬಳಸಬಹುದಾದ ಬಂಡವಾಳದ ದಾಸ್ತಾನನ್ನು ಸಂಗ್ರಹಿಸುವುದೇ ಮುಖ್ಯವಾದ ಅಂಶ ಎಂದು ವಾದಿಸುವಲ್ಲಿ ಅವರು ತಮ್ಮ ಪೂರ್ವಜರಿಗಿಂತ ಭಿನ್ನರಾಗಿದ್ದರು. ಡೇವಿಡ್ ರಿಕಾರ್ಡೊ ಕೂಡ ಬಂಡವಾಳ ಸಂಗ್ರಹಣೆಯ ಪರವಾಗಿದ್ದರಾದರೂ ಅಂತಹ ಸಂಗ್ರಹಣೆಗೆ ಒಂದು ಮಿತಿ ಇದೆ ಎಂಬುದನ್ನು ಅವರು ಅರಿತಿದ್ದರು. (ವಾಸ್ತವವಾಗಿ, ಉತ್ಪಾದನೆಯ ಬೆಳವಣಿಗೆಗೆ ಕಾರಣವಾಗಿದ್ದರೂ ಬಂಡವಾಳವು ಒಂದು ಸ್ಥಿರ ಸ್ಥಿತಿ ಎಂದು ಕರೆಯಲ್ಪಡುವ ಸ್ಥಿತಿಯನ್ನು ತಲುಪಿದಾಗ ಅಂತಹ ಸಂಗ್ರಹವು ಮುಂದುವರಿಯಲಾರದ ಪರಿಸ್ಥಿತಿಗೆ ಹೋಗುತ್ತದೆ ಎಂದು ರಿಕಾರ್ಡೊ ನಂಬಿದ್ದರೂ ಸಹ, ಬಂಡವಾಳದ ಕ್ರೋಢೀಕರಣವನ್ನು ಪ್ರತಿಪಾದಿಸಿದ್ದಕ್ಕಾಗಿ ಕಾರ್ಲ್ ಮಾರ್ಕ್ಸ್ ಅವರನ್ನು ಶ್ಲಾಘಿಸಿದ್ದರು). ಬಂಡವಾಳದ ಈ ರೀತಿಯ ಸಂಗ್ರಹಣೆಯಿAದ ಕಾರ್ಮಿಕ ವರ್ಗಕ್ಕೆ ಪ್ರಯೋಜನವಾಗುವುದಿಲ್ಲ ಎಂಬುದನ್ನು ರಿಕಾರ್ಡೊ ನಂಬಿದ್ದರು.

ಬಂಡವಾಳದ ಸಂಗ್ರಹಣೆಯಿಂದ ದುಡಿಯುವ ವರ್ಗಕ್ಕೆ ಪ್ರಯೋಜನವಾಗುವುದಿಲ್ಲ ಎಂದು ಸ್ಮಿತ್ ಮತ್ತು ರಿಕಾರ್ಡೊ ಇಬ್ಬರೂ ಭಾವಿಸಲು ಕಾರಣವೇನೆಂದರೆ, ಕಾರ್ಮಿಕರ ಪರಿಸ್ಥಿತಿಯಲ್ಲಿ ಸುಧಾರಣೆಯಾದಾಗ ಅದು ಅವರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕಾರ್ಮಿಕರು ತಮ್ಮ ಸಂತಾನೋತ್ಪತ್ತಿಯ ಪ್ರವೃತ್ತಿಯನ್ನು ನಿರ್ಬಂಧಿಸಿದರೆ ಮಾತ್ರ ಬಂಡವಾಳ ಕ್ರೋಢೀಕರಣದಿಂದ ಅವರು ಪ್ರಯೋಜನ ಪಡೆಯಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ, ಜನಸಂಖ್ಯಾ ಬೆಳವಣಿಗೆಯನ್ನು ನಿರ್ಬಂಧಿಸುವ ಮೂಲಕ ಕಾರ್ಮಿಕರ ಸ್ಥಿತಿ-ಗತಿಗಳು ಉತ್ತಮಗೊಳ್ಳುವುದರ ಪರವಾಗಿದ್ದ ಶಾಸ್ತ್ರೀಯ ಅರ್ಥಶಾಸ್ತ್ರಜ್ಞರು, ತಮ್ಮ ಸಂತಾನೋತ್ಪತ್ತಿಯ ಪ್ರವೃತ್ತಿಯ ಬಗ್ಗೆ ಕಾರ್ಮಿಕರು ಮಾತ್ರ ಪ್ರಭಾವ ಬೀರಬಲ್ಲರು; ಅದು ಅವರಿಗೆ ಸಂಬAಧಿಸಿದ ವಿಷಯ ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಬೆಳವಣಿಗೆಯಿಂದ ಕಾರ್ಮಿಕರು ಪ್ರಯೋಜನ ಪಡೆಯುತ್ತಾರೋ ಇಲ್ಲವೋ ಎಂಬುದಕ್ಕಿAತಲೂ ಬೆಳವಣಿಗೆಯನ್ನು ಸಮರ್ಥಿಸುವುದು ಶಾಸ್ತ್ರೀಯ ಅರ್ಥಶಾಸ್ತ್ರಜ್ಞರಿಗೆ ಮುಖ್ಯವಾಗಿತ್ತು.

ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ

ಬೆಳವಣಿಗೆಯ ಬಗ್ಗೆ ಇಂದಿನ ಪ್ರತಿಪಾದನೆಯು ಭಿನ್ನವಾಗಿದೆ. ಸಂತಾನೋತ್ಪತ್ತಿಯನ್ನು ಹೆಚ್ಚು ಮಾಡುವ ಕಾರಣದಿಂದಾಗಿ ದುಡಿಯುವ ಜನರ ಸ್ಥಿತಿ-ಗತಿಗಳು ಶೋಚನೀಯವಾಗಿವೆ ಎಂಬುದನ್ನು ಮತ್ತು ದುಡಿಯುವ ಜನರ ಪರವಾಗಿ ಆದಾಯ ವರ್ಗಾವಣೆ ಮಾಡುವ ಪ್ರಭುತ್ವದ ಪ್ರಯತ್ನಗಳ ಮೂಲಕ ಅವರ ಸ್ಥಿತಿ-ಗತಿಗಳು ಸುಧಾರಿಸಲು ಸಾಧ್ಯವಿಲ್ಲ ಎಂಬುದನ್ನು ಯಾರೂ ಇಂದು ನಂಬುವುದಿಲ್ಲ. ಆದರೂ, ಹಣ ವರ್ಗಾವಣೆಗಳು ಆರ್ಥಿಕ ಬೆಳವಣಿಗೆಗೆ ಅಪಾಯವನ್ನುಂಟುಮಾಡುತ್ತವೆ ಎಂಬ ನೆಲೆಯಲ್ಲಿ ಅಂತಹ ವರ್ಗಾವಣೆಗಳನ್ನು ತಪ್ಪಿಸಲು ನವ-ಉದಾರವಾದಿ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಪ್ರಯತ್ನಿಸುತ್ತಾರೆ. ಬೆಳವಣಿಗೆಯ ಬಗ್ಗೆ ಶಾಸ್ತ್ರೀಯ ಅರ್ಥಶಾಸ್ತ್ರಜ್ಞರು ಮಾಡುತ್ತಿದ್ದ ಸಮರ್ಥನೆಯನ್ನು ಇಂದು ಆಧುನಿಕ ನವ-ಉದಾರವಾದಿಗಳು ಮಾಡುತ್ತಿದ್ದಾರೆ. ಆದರೆ, ಕಾರ್ಮಿಕ ವರ್ಗದ ಬಗ್ಗೆ ಶಾಸ್ತ್ರೀಯ ಅರ್ಥಶಾಸ್ತ್ರಜ್ಞರು ಹೊದಿದ್ದ ಸಹಾನುಭೂತಿಯು ಇವರಲ್ಲಿ ಇಲ್ಲ. ಹೀಗಾಗಿ, ದುಡಿಯುವ ವರ್ಗದ ವಿರುದ್ಧ ಬಂಡವಾಳಶಾಹಿ ವರ್ಗವು ಹೊಂದಿರುವ ಕಡು ಹಗೆತನವು ಈಗ ಅರ್ಥಶಾಸ್ತ್ರಜ್ಞರ ವರ್ತನೆಗಳಲ್ಲಿ ಪ್ರತಿಬಿಂಬಿತವಾಗುತ್ತಿದೆ.

“ಜನಪ್ರಿರಂಜನೆಗಾಗಿ ಕ್ರಮಗಳು” ಎಂಬ ಅವಹೇಳನಕಾರಿ ಹಣೆಪಟ್ಟಿಯನ್ನು ಕಟ್ಟಿ, ಬಡವರಿಗೆ ಮಾಡಬಹುದಾದ ಹಣ ವರ್ಗಾವಣೆಗಳನ್ನು ನಿಲ್ಲಿಸಿ ಬೆಳವಣಿಗೆಗೆ ಒತ್ತು ನೀಡುವ ಕ್ರಮವು ದುಪ್ಪಟ್ಟು ಆಕ್ರಮಣಕಾರಿಯಾಗುತ್ತದೆ. ಒಂದು ಕಡೆಯಲ್ಲಿ ಹಣ ವರ್ಗಾವಣೆಗಳು ಸಂಭವಿಸಿದ್ದರೆ ಅದರಿಂದ ಸಾಧಿಸಬಹುದಾಗಿದ್ದ ಬಡವರ ಜೀವನಮಟ್ಟದ ಸುಧಾರಣೆಯನ್ನು ಇದು ತಡೆಯುತ್ತದೆ. ಮತ್ತೊಂದೆಡೆಯಲ್ಲಿ, ಬೆಳವಣಿಗೆಯ ಇಂದಿನ ಹಪಾಹಪಿಯು ರೈತರು ಮತ್ತು ಕೂಲಿಕಾರರನ್ನು ಅವರು ಕೃಷಿ ಮಾಡುವ ಭೂಮಿಯಿಂದ ಹೊರಹಾಕುವ ಮತ್ತು ಜನರನ್ನು ಅವರ ಮನೆ-ಮಠಗಳಿಂದ ಹೊರಹಾಕುವ ಹಲವಾರು ಯೋಜನೆಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಗಳಿಂದಾಗಿ ರೈತರ ಮತ್ತು ಕೂಲಿಕಾರರ ಸ್ಥಿತಿ-ಗತಿಗಳು ಮೊದಲು ಇದ್ದುದಕ್ಕಿಂತಲೂ ಕೆಟ್ಟದಾಗುತ್ತವೆ. ಈ ಯೋಜನೆಗಳಲ್ಲಿ ಮತ್ತು ಅವುಗಳಿಂದ ಹೊಮ್ಮುವ ಉಪ-ಚಟುವಟಿಕೆಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ, ನಿಜ. ಆದರೆ, ತಮ್ಮ ಭೂಮಿಯಿಂದ ಮತ್ತು ಮನೆ-ಮಠಗಳಿಂದ ಹೊರಹಾಕಲ್ಪಟ್ಟವರು ಈ ಯೋಜನೆಗಳು ಸೃಷ್ಟಿಸುವ ಉದ್ಯೋಗಗಳ ಫಲಾನುಭವಿಗಳಾಗುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿ ಸೃಷ್ಟಿಯಾದ ಉದ್ಯೋಗಗಳು, ಇಲ್ಲಿ ನಾಶಗೊಂಡ ಉದ್ಯೋಗಗಳಿಗಿಂತಲೂ ಕಡಿಮೆ ಇರುತ್ತವೆ. ಮತ್ತು, ಯೋಜನೆಯನ್ನು ಕೈಗೆತ್ತಿಕೊಂಡಾಗ ಸ್ಥಳಾಂತರಗೊAಡ ಜನರ ಪುನರ್ವಸತಿಯ ಭರವಸೆಯು ಎಂದಿಗೂ ಸಾಕಾರಗೊಳ್ಳುವುದಿಲ್ಲ. ಒಂದು ವೇಳೆ, ಜನರ ಕೂಡು ಹಿಡುವಳಿಗಳ ಆಶ್ರಯದಲ್ಲಿ (ಸಾಮುದಾಯಿಕ ರೀತಿಯಲ್ಲಿ), ಉದಾಹರಣೆಗೆ, ಸ್ವತಃ ರೈತ ಸಂಘಗಳೇ ಕೈಗಾರಿಕಾ ಯೋಜನೆಗಳನ್ನು ಆರಂಭಿಸುವ ಮೂಲಕ ಬೆಳವಣಿಗೆಯನ್ನು ಸಾಧಿಸಿದರೆ, ಆಗ ವಿಷಯ ಬೇರೆಯೇ ಆಗುತ್ತದೆ. ಆದರೆ, ಬಂಡವಾಳಶಾಹಿಯ ಅಡಿಯಲ್ಲಿ ಬೆಳವಣಿಗೆಯು ಸಂಭವಿಸುವ ರೀತಿ ಇದಲ್ಲ.

ಪ್ರಭುತ್ವದ ಕಲ್ಯಾಣ-ರಾಜ್ಯ ಕ್ರಮಗಳನ್ನು ಕೇವಲ  “ಜನರಂಜನೆ”ಯ ಕ್ರಮಗಳು ಎಂದು ಅಪಹಾಸ್ಯ ಮಾಡುವ ಮೂಲಕ ಮತ್ತು ಜಿಡಿಪಿ ಬೆಳವಣಿಗೆಯೇ ಪ್ರಭುತ್ವದ ನೀತಿಯ ಉದ್ದೇಶವೆಂದು ಒತ್ತಿಹೇಳುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ತೆಗೆದುಹಾಕುವ ಕ್ರಮವು ಸಿನಿಕತನದಿಂದ ಕೂಡಿದ ಜನವಿರೋಧಿ ಕಾರ್ಯವಾಗುತ್ತದೆ. ಆದರೆ, ಅದುವೇ ನವ-ಉದಾರವಾದದ ಹೆಗ್ಗುರುತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *