ಏ.10ರೊಳಗೆ ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆ ಸಾಧ್ಯತೆ; ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಾದ ತಲ್ಲಣ

ಬೆಂಗಳೂರು : ಕರ್ನಾಟಕ ವಿಧಾನಸಭೆಯ ದಿನಾಂಕ ನಿಗದಿಯಾದ ಮೇಲೆ ಈಗ ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ವಿವಿಧ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತಿದೆ ಎಂದು ಒಂದಷ್ಟು ಮೂಲಗಳು ಹೇಳಿವೆ.

ಹೀಗಾಗಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ತಳಮಳ ಹೆಚ್ಚಾಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಟಿಕೆಟ್ ಗಾಗಿ ಹೆಚ್ಚು ಮುಗಿಬೀಳುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು 2ನೇ ಪಟ್ಟಿಯು ಶೀಘ್ರವೇ ಬಿಡುಗಡೆಯಾಗಲಿರುವುದರಿಂದ ಟಿಕೆಟ್ ಆಕಾಂಕ್ಷಿಗಳಂತೂ ನಾಯಕರ ಹೆಗಲೇರುತ್ತಿದ್ದಾರೆ. ಅತ್ತ, ಕಾಂಗ್ರೆಸ್ ನಾಯಕರು ಹೈಕಮಾಂಡ್ ನ ನಿಯಮಗಳು ಹಾಗೂ ಆಪ್ತರ ಟಿಕೆಟ್ ಪಟ್ಟಿನ ನಡುವೆ ಸಿಲುಕಿ ಒದ್ದಾಡುವಂತಾಗಿದೆ. ಇದೆಲ್ಲದರ ನಡುವೆ, ಏ. 10ರೊಳಗಾಗಿ ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದ್ದು, ಟಿಕೆಟ್ ಆಕಾಂಕ್ಷಿಗಳ ತಲ್ಲಣವಂತೂ ತಾರಕಕ್ಕೇರಿದೆ.

ಏಪ್ರಿಲ್ 10 ರೊಳಗಾಗಿ ಎರಡನೇ ಪಟ್ಟಿ ಬಿಡುಗಡೆ ಮಾಡುವ ಚಿಂತನೆಯನ್ನು ಕಾಂಗ್ರೆಸ್ ನಡೆಸುತ್ತಿದೆ. ಉಳಿದ 100 ಕ್ಷೇತ್ರಗಳ ಪೈಕಿ 70 ರಿಂದ 75 ಅಭ್ಯರ್ಥಿಗಳ ಹೆಸರುಗಳನ್ನು ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಉಳಿದ 25 ಅತ್ಯಂತ ಜಟಿಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕೊನೆಯ ಗಳಿಗೆಯಲ್ಲಿ ಮೂರನೇ ಹಂತದ ಪಟ್ಟಿಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಹುಲ್ ಬಂದ ನಂತರವೇ 2ನೇ ಪಟ್ಟಿ! : ಏಪ್ರಿಲ್ 5 ರಂದು ರಾಹುಲ್ ‌ಗಾಂಧಿ ಕೋಲಾರಕ್ಕೆ‌ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಭೇಟಿ ಬಳಿಕವಷ್ಟೇ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಿದ ಹೆಸರನ್ನು ಕೇಂದ್ರ ಚುನಾವಣಾ ಸಮಿತಿ ಸಭೆಗೆ ಕಳಿಸಿಕೊಡಲಾಗುತ್ತದೆ. ಅಲ್ಲಿ ಚರ್ಚೆ ಆದ ಬಳಿಕ ಹೆಸರು ಅಂತಿಮಗೊಳ್ಳಲಿದೆ.

ಗುರುವಾರ ಎರಡನೇ ಸುತ್ತಿನ ಸ್ಕ್ರೀನಿಂಗ್ ಕಮಿಟಿ‌ ಸಭೆ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಇದೀಗ ಎರಡನೇ ಹಂತದ ಪಟ್ಟಿ ಬಿಡುಗಡೆ ಕಸರತ್ತು ಶುರುವಾಗಿದೆ. ಈ ನಿಟ್ಟಿನಲ್ಲಿ ಗುರುವಾರ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಎರಡನೇ ಹಂತದ ಟಿಕೆಟ್ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಒಂದು ಸುತ್ತಿನ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ 34 ಮಂದಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಇನ್ನು‌ ಉಳಿದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಜಟಿಲವಾಗಿದೆ.
ಹಾಗಾಗಿ, ಬೆಂಗಳೂರಿನ ಹೊರವಲಯದಲ್ಲಿ ಗುರುವಾರ ನಡೆಯಲಿರುವ ಭಾರೀ ಮಹತ್ವದ್ದಾಗಿದ್ದು ತೀವ್ರ ಕುತೂಹಲಕಾರಿಯೂ ಆಗಿದೆ. ಅದೇ ಸಭೆಯಲ್ಲಿ, 2ನೇ ಪಟ್ಟಿಯಲ್ಲಿ ಘೋಷಣೆಯಾಗುವ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳ ಹೆಸರನ್ನು‌ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಮೊದಲ ಹಂತದಲ್ಲಿ 124 ಕ್ಷೇತ್ರಗಳ ಹೆಸರು ಘೋಷಣೆ ಆಗಿದ್ದು, ಉಳಿದ 100 ಕ್ಷೇತ್ರಗಳ ಅಭ್ಯರ್ಥಿ ಹೆಸರು ಅಂತಿಮಗೊಳ್ಳಬೇಕಾಗಿದೆ.

ಇದನ್ನೂ ಓದಿ : ವಿಧಾನಸಭಾ ಚುನಾವಣೆ; 124 ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ಬಿಡುಗಡೆ-ವರುಣದಿಂದ ಸಿದ್ದು, ಕನಕಪುರದಿಂದ ಡಿಕೆಶಿ ಸ್ಪರ್ಧೆ

ಎರಡನೇ ಪಟ್ಟಿಯಲ್ಲಿ ಸ್ಥಾನ ಪಡೆಯಲು ಲಾಬಿ : ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ಸಾಕಷ್ಟು ಲಾಬಿ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಲಾಬಿ ನಡೆಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *