ಏ.1ರಿಂದ 16ನೇ ಜನಗಣತಿ ಪ್ರಕ್ರಿಯೆ ಆರಂಭ

ವದೆಹಲಿ: ಏಪ್ರಿಲ್‌ 1ರಿಂದ ದೇಶದ 16ನೇ ಜನಗಣತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಹಂತವು ಸೆಪ್ಟೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಮೊದಲ ಹಂತದ ಜನಗಣತಿಯನ್ನು ಮುಗಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ.

15 ವರ್ಷಗಳ ಬಳಿಕ ನಡೆಯುತ್ತಿರುವ ಜನಗಣತಿ ಇದಾಗಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ.

ಜತೆಗೆ ಮೊದಲ ಬಾರಿಗೆ ಸ್ವಯಂ ಎಣಿಕೆ(ಸ್ವಯಂ ಗಣತಿ) ಮಾಡಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿದೆ. ಅದರಂತೆ ಅಂಡಮಾನ್‌ ಮತ್ತು ನಿಕೋಬಾರ್‌, ದೆಹಲಿ, ಗೋವಾ, ಕರ್ನಾಟಕ, ಲಕ್ಷದ್ವೀಪ, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂನಲ್ಲಿ ಏ.1ರಿಂದ 15ರವರೆಗೆ ಸ್ವಯಂ ಗಣತಿ ಹಾಗೂ ಏ.16 ರಿಂದ ಮೇ 15ರವರೆಗೆ ಮನೆ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ.

ಇದನ್ನೂ ಓದಿ: ಜುಬಾ| ಚಿನ್ನದ ಗಣಿ ಪ್ರದೇಶದಲ್ಲಿ ಹತ್ಯಾಕಾಂಡ; 70ಕ್ಕೂ ಹೆಚ್ಚು ಜನರು ಸಾವು

ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಸಲಾಗುತ್ತದೆ. ಒಟ್ಟು 33 ಪ್ರಶ್ನೆಗಳನ್ನು ಈ ಹಂತದಲ್ಲಿ ಕೇಳಲಾಗುತ್ತದೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಬಿಟ್ಟು ಬೇರೆ ರಾಜ್ಯಗಳು ಸೇರಿದಂತೆ ಇನ್ನುಳಿದ ರಾಜ್ಯಗಳಲ್ಲಿ ಹಂತ ಹಂತವಾಗಿ ಜನಗಣತಿ ನಡೆಯಲಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ ಮೊದಲ ಹಂತ ಮುಕ್ತಾಯಗೊಳ್ಳಲಿದೆ. ಜತೆಗೆ ಸಾರ್ವಜನಿಕರು ಆನ್‌ಲೈನ್ ಪೋರ್ಟಲ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ದತ್ತಾಂಶ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಈಗಾಗಲೇ ಹೇಳಿದೆ.

ದೇಶಾದ್ಯಂತ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆಯಲ್ಲಿ 30 ಲಕ್ಷಕ್ಕೂ ಹೆಚ್ಚು ಗಣತಿದಾರರು, ಮೇಲ್ವಿಚಾರಕರು ಮತ್ತು ಇತರ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
2011ರಲ್ಲಿ ನಡೆದ ಜನಗಣತಿಯಲ್ಲಿ 121.08 ಕೋಟಿಯಷ್ಟು ಜನಸಂಖ್ಯೆಯಿದ್ದು, ಇದರಲ್ಲಿ ಪುರುಷರ ಸಂಖ್ಯೆ 62.32 ಕೋಟಿ ಹಾಗೂ ಮಹಿಳೆಯರ ಸಂಖ್ಯೆ 58.75 ಕೋಟಿ ಇತ್ತು.

ಗಣತಿಯ ಹಂತಗಳು

1. ಸ್ವಯಂ ಗಣತಿ – ಗಣತಿದಾರರು ಮನೆ-ಮನೆಗೆ ಭೇಟಿ ನೀಡುವ 30 ದಿನಗಳ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಸ್ವಯಂ ನೋಂದಣಿಗೆ 15 ದಿನಗಳ ಕಾಲಾವಕಾಶವಿದೆ.

– ಕರ್ನಾಟಕ ಸೇರಿ 7 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಏ.1ರಿಂದ ಏ.15ರವರೆಗೆ ಸ್ವಯಂ ನೋಂದಣಿಗೆ ಅವಕಾಶ.

2. ಮೊದಲ ಹಂತ – ಏಪ್ರಿಲ್‌ 15ರಿಂದ ಸೆಪ್ಟೆಂಬರ್‌ವರೆಗೆ

– ಈ ಹಂತದಲ್ಲಿ ಮುಖ್ಯವಾಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ

– ಮನೆಯಲ್ಲಿರುವ ಸೌಕರ್ಯಗಳು(ನೀರು ವಿದ್ಯುತ್ ಇತರೆ), ಆಸ್ತಿ ಮತ್ತು ಕಟ್ಟಡದ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

3. ಎರಡನೇ ಹಂತ – 2027ರ ಫೆಬ್ರವರಿಯಿಂದ ಆರಂಭ

– ಇದು ವೈಯಕ್ತಿಕ ವಿವರಗಳ ಗಣತಿಯ ಹಂತ.

– ವ್ಯಕ್ತಿಯ ಶಿಕ್ಷಣ, ಉದ್ಯೋಗ, ವಲಸೆ ಮತ್ತು ಇತರ ಪ್ರಮುಖ ವೈಯಕ್ತಿಕ ಮಾಹಿತಿಗಳನ್ನು ಈ ಹಂತದಲ್ಲಿ ಕಲೆಹಾಕಲಾಗುತ್ತದೆ.

ಸ್ವಯಂ ನೋಂದಣಿ ಹೇಗೆ?

– ಈ ಬಾರಿ ಜನಗಣತಿ ಡಿಜಿಟಲ್ ರೂಪದಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರು ತಾವಾಗಿಯೇ ಮಾಹಿತಿ ಸಲ್ಲಿಸಲು ಅವಕಾಶವಿದೆ

– ಮೊದಲಿಗೆ http://se.census.gov.in ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

– ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್‌ಗೆ ಲಾಗ್ ಇನ್ ಆಗಬೇಕು.

– ನಿಮ್ಮ ಕುಟುಂಬದ ಸದಸ್ಯರ ಹೆಸರು, ಉದ್ಯೋಗ ಮತ್ತು ಕೇಳಲಾದ ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

– ಮಾಹಿತಿ ಸಲ್ಲಿಕೆ ಪೂರ್ಣಗೊಂಡ ನಂತರ ನಿಮಗೆ ಒಂದು ವಿಶೇಷ ಗುರುತಿನ ಸಂಖ್ಯೆ ದೊರೆಯುತ್ತದೆ.

– ಸರ್ಕಾರ ನೇಮಿಸಿದ ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ, ಅವರಿಗೆ ಈ ಗುರುತಿನ ಸಂಖ್ಯೆಯನ್ನು ತೋರಿಸಿದರೆ ಸಾಕು.

– ಈ ಮೂಲಕ ನಿಮ್ಮ ಸ್ವಯಂ ಗಣತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ನಿಮ್ಮ ಸಮಯವೂ ಉಳಿತಾಯವಾಗುತ್ತದೆ.

ಇದನ್ನೂ ನೋಡಿ: ಬಿಜೆಪಿ–ಸಂಘಪರಿವಾರದಿಂದ ಇತಿಹಾಸ ವಿರೂಪಗೊಳಿಸುವ ಪ್ರಯತ್ನ – ಪ್ರಿಯಾಂಕ್ ಖರ್ಗೆ Janashakthi Media

Donate Janashakthi Media

Leave a Reply

Your email address will not be published. Required fields are marked *