ಗಜೇಂದ್ರಗಡ: ಉತ್ತಮ ವಿಟಮಿನ್ ಗಳಿರುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಉಪಯೋಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಿದೆ. ತಾಯಿ-ಮಗುವಿನ ಅಪೌಷ್ಟಿಕತೆ ನಿವಾರಣೆಗಾಗಿ ರಾಷ್ಟ್ರೀಯ ಪೋಷಣಾ ಅಭಿಯಾನ ನಡೆಯುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಮಾಬುಸಾಬ ಹವಾಲ್ದಾರ್ ಹೇಳಿದರು.
ನಗರದ ಶಿವಾಜಿಪೇಟೆಯ ಅಂಗನವಾಡಿ ಕೇಂದ್ರ 184 ಮತ್ತು ಶಿಶು ಅಭಿವೃದ್ದಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಖನಿಜಾಂಶ ಹೊಂದಿರುವ ಸೊಪ್ಪು, ತರಕಾರಿ ಜತೆ ಮೊಳಕೆ ಕಾಳು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯ ಎಂದರು.
ಅಂಗನವಾಡಿ ಕಾರ್ಯಕರ್ತೆ ಎಸ್.ಡಿ.ಸುಬೇದರ ಮಾತನಾಡಿ ಪೋಷಣೆ ಯೋಜನೆಯಲ್ಲಿ ಮುಖ್ಯವಾಗಿ ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿರುವವರ ಉತ್ತಮ ಆರೋಗ್ಯಕ್ಕಾಗಿ ಇಲಾಖೆ ನಾನಾ ಯೋಜನೆ ಜಾರಿಗೊಳಿಸಿದ್ದು, ಹಂತ ಹಂತವಾಗಿ ಅಪೌಷ್ಠಿಕತೆ ಮುಕ್ತ ಕರ್ನಾಟಕ ರೂಪಿಸಲು ಸನ್ನದ್ದವಾಗಿದೆ ಎಂದರು.
ಪತ್ರಕರ್ತ ದಾವಲಸಾಬ ತಾಳಿಕೋಟಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೈಕೆಗೆ ಸಂಬಂಧಿಸಿ ಮಾಹಿತಿ ಕೊರತೆ ಹೆಚ್ಚಿದೆ. ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಮಾಹಿತಿಯನ್ನು ತಲುಪಿಸುವ ಕಾರ್ಯ ಅಗತ್ಯ. ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅದನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಈ ವೇಳೆ ಶಿವಪ್ಪ ಹಾಳಕೇರಿ, ಸಹಾಯಕಿ ಬಸವ್ವ ಅಂಗಡಿ, ರೇಣುಕಾ ಹಾಳಕೇರಿ, ಕಲ್ಪನಾ ನಿಂಬೋಜಿ, ಈಶ್ವರಿ ಸಂಕನೂರ, ಅಂಬಿಕಾ ಅರಗಂಜಿ, ಇತರರು ಉಪಸ್ಥಿತರಿದ್ದರು.
ವರದಿ : ದಾವಲಸಾಬ್