ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ವಿವಾದಿತ ಮತಾಂತರ ನಿಷೇಧ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಹಾಗೂ ಕೇಸರೀಕರಣದ ಆಪಾದನೆಗೆ ಗುರಿಯಾಗಿದ್ದ ಪಠ್ಯಪುಸ್ತಕಗಳನ್ನು ಕೈಬಿಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತಿರ್ಥ ನೇತೃತ್ವದಲ್ಲಿ ಸಮಿತಿ ನಡೆಸಿದ್ದ ಪಠ್ಯ ಪುಸ್ತಕ ಪರಿಸ್ಕರಣೆಯನ್ನು ಕೈ ಬಿಟ್ಟು, ಅದಕ್ಕೂ ಹಿಂದೆ ಇದ್ದಂತಹ ಪಠ್ಯಗಳನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷ, ಪಠ್ಯಪುಸ್ತಕಗಳಲ್ಲಿ ವಿಶೇಷವಾಗಿ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿತ್ತು. ಹಿಂದಿನ ಸರ್ಕಾರ ಅವಧಿಯಲ್ಲಿ ಸೇರ್ಪಡೆಯಾಗಿದ್ದ ಆರ್’ಎಸ್ಎಸ್ ಸಂಸ್ಥಾಪಕ ಕೇಶವಬಲಿರಾಮ್ ಹೆಡಗೇವಾರ್, ಬರಹಗಾರ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಗದ್ಯ, ಸಾವರ್ಕರ್ ಕುರಿತ ಪಠ್ಯ ಹಾಗೂ ಲೇಖಕ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಕನ್ನಡರಿಗರ ಮನಸ್ಸಿಗೆ ಘಾಸಿಗೊಳಿಸದಿರಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿಂದೆ ಪಠ್ಯದಲ್ಲಿ ಇದ್ದ ಸಾವಿತ್ರಿಬಾಯಿ ಫುಲೆ,ಡಾ,ಅಂಬೇಡ್ಕರ್ ಕುರಿತ ಕವನ ಹಾಗೂ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು ʼಮಗಳಿಗೆ ಬರೆದ ಪತ್ರʼದ ಪಾಠ ಸೇರಿದಂತೆ ಹಲವನ್ನು ಮತ್ತೆ ಸೇರಿಸಲಾಗುವುದು ಎಂದು ಹೇಳಿದರು. ಈ ಮೂರು ವಿಷಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ವಿವಾದಾತ್ಮಕವಾಗಿರುವ ಕಾಯ್ದೆಗಳನ್ನು ಮತ್ತು ಪಠ್ಯಪುಸ್ತಕ ಪರಿಸ್ಕರಣೆಯನ್ನು ಕೈ ಬಿಡುವುದಾಗಿ ಭರವಸೆ ನೀಡಿತ್ತು ಎಂದರು. ʼಸುಮಾರು 45 ಬದಲಾವಣೆಗಳನ್ನು ಮಾಡಿದ್ದು, ಅದಕ್ಕೆ ಸಂಭಂಧಿಸಿದಂತೆ 15 ಪುಟಗಳ ಪೂರಕ ಪಠ್ಯವನ್ನು ರೂಪಿಸಿ ಶಾಲೆಗಳಿಗೆ ಕಳುಹಿಸಲು ತೀರ್ಮಾನಿಸಲಾಗಿದೆʼಎಂದರು. ʼಯಾವುದನ್ನೂ ಬೋಧಿಸಬೇಕು, ಯಾವುದನ್ನು ಬೋಧಿಸಬಾರದು ಎಂಬುವುದನ್ನು ಶಿಕ್ಷಕರಿಗೆ ತಿಳಿಸಲಾಗುವುದು. ಸೇತುಬಂಧ ಕಾರ್ಯಕ್ರಮ ಮುಗಿಯುವುದರೊಳಗೆ ಪೂರಕ ಪಠ್ಯದ ಭಾಗವನ್ನು ಕಳುಹಿಸಲಾಗುವುದುʼ ಎಂದು ಹೇಳಿದರು.
ಹಿಂದೆ ಹಾಳು ಮಾಡಿದನ್ನು ಸರಿಪಡಿಸಲು ರಾಜಪ್ಪ ದಳವಾಯಿ,ಚಂದ್ರಶೇಖರ್,ರಾಜೇಶ್ ಮತ್ತು ಅಶ್ವತ್ಥನಾರಯಣ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಅವರಿಂದ 45 ಬದಲಾವಣೆಗಳ ಸಲಹೆ ಬಂದಿತ್ತು. ಕೆಲವು ಪದಗಳು,ವಾಕ್ಯಗಳು ಮತ್ತು ಪಠ್ಯ ಬದಲಿಸಲು ಸೂಚಿಸಿದ್ದಾರೆ. 6ರಂದ 10 ತರಗತಿಯವರೆಗಿನ ಕನ್ನಡ ಮತ್ತುಸಮಾಜ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದೆʼ ಎಂದು ಮಧು ಬಂಗಾರಪ್ಪ ತಿಳಿಸಿದರು.
ʼಈಗಾಗಲೇ ಪಠ್ಯಪುಸ್ತಕಗಳು ಮುದ್ರಣವಾಗಿ ಮಕ್ಕಳ ಕೈಗೆ ತಲುಪಿವೆ. ಈ ಹಂತದಲ್ಲಿ ಪಠ್ಯಪುಸ್ತಕಗಳನ್ನು ಮರು ಮುದ್ರಿಸಲು ಸಾಧ್ಯವಿಲ್ಲ. ಹಿಂದಿನ ಸರ್ಕಾರ ಮಾಡಿದ ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರಿಂದ ಹೆದರಿದ ಬಿಜೆಪಿಯವರು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲʼ ಎಂದು ಹೇಳಿದರು. ʼಪಠ್ಯ ಪುಸ್ತಕಗಳ ಸಮಗ್ರ ಬದಲಾವಣೆ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮುಖ್ಯಮಂತ್ರಿಯವರ ಮಾರ್ಗದರ್ಶನದಂತೆ ಪಠ್ಯವನ್ನು ಸಮಗ್ರವಾಗಿ ಬದಲಾವಣೆ ಮಾಡಲಾಗುವುದುʼಎಂದರು.