ಬೀಜ ಮಸೂದೆ ಕುರಿತು ರೈತರಿಂದ ಕೇಂದ್ರ ಕೃಷಿ ಮಂತ್ರಿಗಳಿಗೆ ಹತ್ತು ಪ್ರಶ್ನೆಗಳು

ಮಂತ್ರಿಗಳ ಬಳಿ  ಉತ್ತರವಿಲ್ಲದಿದ್ದರೆ ಮಸೂದೆಯನ್ನು ಕೈಬಿಡಬೇಕು:ಎಸ್‍.ಕೆ.ಎಂ.

ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಸಂಸತ್ತಿನಲ್ಲಿ ಮಂಡಿಸಬೇಕೆಂದಿರುವ ಬೀಜ ಮಸೂದೆ, 2025 ಕುರಿತಂತೆ ಸಂಯುಕ್ತ ಕಿಸಾನ್‍ ಮೋರ್ಚಾ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಿ ಶಿವರಾಜ್ ಸಿಂಗ್‍ ಚೌಹಾಣ್‍ ರವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಈ ಪ್ರಶ್ನೆಗಳಿಗೆ ಉತ್ತರ ಕೊಡಿ, ನಿಮ್ಮ ಬಳಿ ಮನವರಿಕೆಯಾಗುವ ಉತ್ತರವಿಲ್ಲದಿದ್ದರೆ, ಸಂಸತ್ತಿನಲ್ಲಿ ಬೀಜ ಮಸೂದೆ 2025 ಅನ್ನು ಕೈಬಿಡಬೇಕು ಎಂದು ದೇಶಾದ್ಯಂತ ರೈತರು ಆಗ್ರಹಿಸುತ್ತಾರೆ ಎಂದು ಎಸ್‍ಕೆಎಂ ಹೇಳಿದೆ.

ಭಾರತದ ರೈತರು ಕೇಳುತ್ತಿರುವ ಹತ್ತು ಪ್ರಶ್ನೆಗಳು ಹೀಗಿವೆ:

  1. ಈ ಮಸೂದೆಯು ದೊಡ್ಡ ಬಹುರಾಷ್ಟ್ರೀಯ ಮತ್ತು ದೇಶೀಯ ಬೀಜ ಕಾರ್ಪೊರೇಟ್‍ಗಳ ಹಿತಾಸಕ್ತಿಗಳ ಕಡೆಗೆ ಬಲವಾದ ಪಕ್ಷಪಾತವನ್ನು ತೋರುತ್ತಿದೆ ಎಂದು ರೈತರು ದೇಶಾದ್ಯಂತ ಪ್ರತಿಭಟಿಸುತ್ತಿರುವಾಗ ಇದು ರೈತರು ಮತ್ತು ಭಾರತೀಯ ಕೃಷಿಯನ್ನು ರಕ್ಷಿಸುತ್ತದೆ ಎಂದು ನೀವು ಏಕೆ ಘೋಷಿಸಿದ್ದೀರಿ?
  2. ಕೃಷಿಯು ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿದ್ದಾಗ, ಕೇಂದ್ರ ಸರಕಾರ, ಅದೂ ರಾಜ್ಯಗಳೊಂದಿಗೆ ಸಮಾಲೋಚಿಸದೆ ಬೀಜ ಮಸೂದೆಯನ್ನು ತಂದಿರುವುದು ಏಕೆ ? ಬೀಜ ಮಸೂದೆ 2025 ಎಲ್ಲಾ ರಾಜ್ಯಗಳಿಂದ ಪ್ರಾತಿನಿಧ್ಯವಿಲ್ಲದೆ ಉತ್ಪಾದನೆಯಿಂದ ಪರೀಕ್ಷೆಯವರೆಗೆ ಬೀಜಗಳ ಎಲ್ಲಾ ಅಂಶಗಳನ್ನು ನಿಯಂತ್ರಿಸುವ ಕೇಂದ್ರ ಬೀಜ ಸಮಿತಿಯನ್ನು ರಚಿಸುತ್ತದೆ.
  3. ಉತ್ತಮ ಗುಣಮಟ್ಟದ ಬೀಜಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಬಗ್ಗೆ ಮಸೂದೆ ಏಕೆ ಮೌನವಾಗಿದೆ? ಯಾವುದೇ ರೈತ ಪರ ಬೀಜ ಮಸೂದೆಯಲ್ಲಿ ಇದು ಮೊದಲ ಷರತ್ತು ಆಗಿರಬೇಕಿತ್ತು.
  4. ರೈತರನ್ನು ಕಾರ್ಪೊರೇಟ್ ಕಂಪನಿಗಳೊಂದಿಗೆ ಸಮನಾಗಿ ಇರಿಸುವ ಮೂಲಕ ನೀವು ‘ಸಸಿ ವಿಧಗಳು ಮತ್ತು ರೈತರ ಹಕ್ಕುಗಳು (PPVFR )ಕಾಯ್ದೆ’ಯನ್ನು ಏಕೆ ಉಲ್ಲಂಘಿಸುತ್ತಿದ್ದೀರಿ? ಪ್ರಸ್ತುತ ಭಾರತೀಯ ಕಾನೂನಿನಡಿಯಲ್ಲಿ ರೈತರು ಬೀಜಗಳನ್ನು ಉತ್ಪಾದಿಸುವ, ಸಂರಕ್ಷಿಸುವ, ವಿನಿಮಯ ಮಾಡಿಕೊಳ್ಳುವ ಮತ್ತು ತಮ್ಮೊಳಗೆ ವರ್ಗಾಯಿಸುವ ಹಕ್ಕನ್ನು ಹೊಂದಿದ್ದಾರೆ. ಆದರೂ ಬೀಜ ಮಸೂದೆ 2025 ದೊಡ್ಡ ಬೀಜ ಕಾರ್ಪೊರೇಟ್ ಕಂಪನಿಗಳಂತೆ ಸಣ್ಣ ಸಾಂಪ್ರದಾಯಿಕ ಬೀಜ ಉತ್ಪಾದಕರು ಕೂಡ ನೋಂದಾಯಿಸಿಕೊಳ್ಳಬೇಕೆಂದು ವಿಧಿಸಿ ಈ ಹಕ್ಕನ್ನು ಉಲ್ಲಂಘಿಸುತ್ತದೆ,
  5. ಭಾರತದಲ್ಲಿ ಏಕೆ ವಿದೇಶಿ ಪರೀಕ್ಷಿತ ಬೀಜಗಳಿಗೆ ಅವಕಾಶ ಕೊಡುತ್ತಿದ್ದೀರಿ? ಭಾರತದಲ್ಲಿ ವೈವಿಧ್ಯಮಯ ಮಣ್ಣು ಮತ್ತು ಮಾನ್ಸೂನ್ ಮಾದರಿಗಳೊಂದಿಗೆ 15 ಕೃಷಿ-ಹವಾಮಾನ ವಲಯಗಳಿವೆ. ಕುಲಾಂತರಿ ಬೀಜಗಳು ಸೇರಿದಂತೆ ವಿದೇಶಿ ಪರೀಕ್ಷಿತ ಬೀಜಗಳು ಭಾರತೀಯ ಬೀಜಗಳನ್ನು ಕಲುಷಿತಗೊಳಿಸಬಹುದು, ನಮ್ಮ ಬೀಜ ಸಾರ್ವಭೌಮತ್ವವನ್ನು- ನಮ್ಮ ಬೀಜಗಳ ಜೆನೆಟಿಕ್ ದತ್ತಾಂಶದ ಮೇಲಿನ ನಮ್ಮ ಹಕ್ಕನ್ನು ಅಪಾಯಕ್ಕೆ ಸಿಲುಕಿಸಬಹುದು. ಕುಲಾಂತರಿ ಬೀಜಗಳಿಗೆ ಅನುಮತಿಯ ಬಗ್ಗೆ ಯಾವುದೇ ಒಮ್ಮತವಿಲ್ಲದಿರುವಾಗ ಕುಲಾಂತರಿ ಬೀಜಗಳ ಮೇಲೆ ಏಕೆ ನಿಷೇಧ ಹೇರಬಾರದು?
  6. ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ರೈತರ ಮೇಲೆ ಪ್ರಾಬಲ್ಯ ಸಾಧಿಸಲು ನೀವು ಏಕೆ ಬಿಡುತ್ತೀದ್ದೀರಿ? ಬೀಜ ಮಸೂದೆ 2025 GEAC ಮತ್ತು ಇತರ ಸರ್ಕಾರಿ ನಿಯಂತ್ರಕ ಸಂಸ್ಥೆಗಳನ್ನು ಬದಿಗೊತ್ತಿ ಭಾರತೀಯ ಕೃಷಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮುಕ್ತವಾಗಿ ಪ್ರವೇಶಿಸಲು ಅವಕಾಶ ಕೊಡುತ್ತದೆ. ಆಮದುಗಳನ್ನು ಭಾರತದ ಅಗತ್ಯಗಳಿಗೆ ಅನುಗುಣವಾಗಿ ಸೀಮಿತಗೊಳಿಸುವ 1996ರ ಬೀಜ ಮಸೂದೆಯನ್ನು ಏಕೆ ರದ್ದುಗೊಳಿಸಿದ್ದೀರಿ? ಎಲ್ಲಾ ಆಮದು ಮಾಡಿಕೊಂಡ ಬೀಜಗಳು, ಸಸ್ಯ ಮತ್ತು ನಿಸ್ಸಾರ ಪ್ರಭೇದಗಳನ್ನು ಮೊದಲು ಭಾರತೀಯ ಪ್ರಯೋಗಾಲಯಗಳು ಸ್ವತಂತ್ರವಾಗಿ ಪರೀಕ್ಷಿಸಿ ಮಂಜೂರು ಮಾಡುವುದಕ್ಕೆ ಅವಕಾಶ ಕೊಡುತ್ತಿಲ್ಲ ಏಕೆ?
  7. ಬೀಜಗಳ ಅತಿಯಾದ ಬೆಲೆಗಳನ್ನು ನೀವು ಏಕೆ ನಿಯಂತ್ರಿಸುತ್ತಿಲ್ಲ? ಪ್ರಸ್ತುತ, ತರಕಾರಿ ಬೀಜಗಳು ಮತ್ತು ಹೈಬ್ರಿಡ್ ಬೀಜಗಳು ರೈತರಿಂದ ಕೈಗೆಟುಕದಷ್ಟು ದೂರದಲ್ಲಿವೆ; ಆದರೂ, ಬೆಲೆಗಳನ್ನು ನಿಯಂತ್ರಿಸಲು ಬೀಜ ಮಸೂದೆ 2025 ರಲ್ಲಿ ಯಾವುದೇ ಅವಕಾಶವಿಲ್ಲ. ಬೀಜ ಬೆಲೆಗಳನ್ನು ನಿಯಮಿತವಾಗಿ ನಿಯಂತ್ರಿಸಲು ಯಾವುದೇ ನೀತಿ ಏಕೆ ಇಲ್ಲ? ಬೀಜಗಳ ಕಾಳಸಂತೆಯನ್ನು  ನಿಷೇಧಿಸಿದ 1983 ರ ಬೀಜ ನಿಯಮಗಳನ್ನು ಏಕೆ ರದ್ದುಗೊಳಿಸಲಾಗಿದೆ?
  8. ನೀವು ರೈತರ ಸಹಕಾರ ಸಂಘಗಳು ಮತ್ತು ಸಾರ್ವಜನಿಕ ಸಂಶೋಧನೆಯನ್ನು ಏಕೆ ಉತ್ತೇಜಿಸುತ್ತಿಲ್ಲ? ಐಸಿಎಆರ್, ಸಾರ್ವಜನಿಕ ಸಂಶೋಧನಾ ಸಂಸ್ಥೆಗಳು ಮತ್ತು ರೈತರ ಸಹಕಾರ ಸಂಘಗಳ ಬೀಜ ಗ್ರಾಮಗಳು ಸಣ್ಣ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಬೀಜಗಳನ್ನು ಒದಗಿಸಬಲ್ಲವು. ಆದರೂ, ಅವುಗಳನ್ನು ಬೀಜ ಮಸೂದೆ 2025 ಬೆಂಬಲಿಸುವುದಿಲ್ಲ, ಆದರೆ ದೊಡ್ಡ ಕಾರ್ಪೊರೇಟ್ ಕಂಪನಿಗಳ “ವ್ಯವಹಾರವನ್ನು ಸುಗಮ’ಗೊಳಿಸುತ್ತವೆ”.
  9. ನಕಲಿ ಬೀಜಗಳಿಂದಾಗಿ ಬೆಳೆ ವೈಫಲ್ಯಕ್ಕೆ ನೀವು ರೈತರಿಗೆ ಸುಲಭ ಪರಿಹಾರವನ್ನು ಏಕೆ ನೀಡುತ್ತಿಲ್ಲ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಏಕೆ ಕೈಗೊಳ್ಳುತ್ತಿಲ್ಲ? ನಕಲಿ ಬೀಜಗಳಿಂದಾಗಿ ಬೆಳೆ ವೈಫಲ್ಯದಿಂದಾಗಿ ಅನೇಕ ರೈತರ ಆತ್ಮಹತ್ಯೆಗಳು ಸಂಭವಿಸುತ್ತವೆ, ವಿಶೇಷವಾಗಿ ಹತ್ತಿ ಪ್ರದೇಶದಲ್ಲಿ. ಆದರೂ ಬೀಜ ಮಸೂದೆ 2025 ರೈತರು ಕಳಕೊಳ್ಳುವ ಲಾಭ, ಕೃಷಿ ವೆಚ್ಚಗಳು ಅಥವಾ ತಾಜಾ ಬೀಜ ಮತ್ತು ಬೀಜ ವಿಮೆಯ ವೆಚ್ಚಕ್ಕೆ ಪರಿಹಾರವನ್ನು ಕಡ್ಡಾಯಗೊಳಿಸುವುದಿಲ್ಲ. ರೈತರು ಬೆಳೆ ನಷ್ಟದ ದೂರುಗಳನ್ನು ಸಲ್ಲಿಸಲು ಏಕೆ ಬಿಡುತ್ತಿಲ್ಲ, ಬೀಜ ನಿರೀಕ್ಷಕರಿಗೆ ಮಾತ್ರ ಅವಕಾಶ ನೀಡುವುದು ಏಕೆ?
  10. QR ಕೋಡ್ ಸೌಲಭ್ಯವನ್ನು ಒತ್ತಾಯಿಸುವಾಗ ಮಸೂದೆಯು ಇಂಟರ್ನೆಟ್ ಲಭ್ಯತೆಯನ್ನು ಏಕೆ ಖಚಿತಪಡಿಸುವುದಿಲ್ಲ? ಅನೇಕ ಸಣ್ಣ ಉತ್ಪಾದಕರು ಸೀಮಿತ ಇಂಟರ್ನೆಟ್ ಲಭ್ಯತೆಯನ್ನು ಹೊಂದಿದ್ದಾರೆ, ಆದರೂ ಬೀಜ ಮಸೂದೆ 2025 ಅವರು ಪ್ರತಿ ಬೀಜ ಪ್ಯಾಕ್‌ಗೆ QR ಕೋಡ್‌ಗಳನ್ನು ಬಳಸುವುದನ್ನು ಕಡ್ಡಾಯಗೊಳಿಸುತ್ತದೆ.

ಮೇಲಿನ 10 ಪ್ರಶ್ನೆಗಳಿಗೆ ನಿಮ್ಮಲ್ಲಿ ಮನವರಿಕೆ ಮಾಡುವ ಉತ್ತರವಿಲ್ಲದಿದ್ದರೆ, ಭಾರತದಾದ್ಯಂತದ ರೈತರು ಸಂಸತ್ತಿನಲ್ಲಿ ಬೀಜ ಮಸೂದೆ 2025 ಅನ್ನು ತರುವುದನ್ನು, ಆ ಮೂಲಕ ಭಾರತೀಯ ಕೃಷಿ ಮತ್ತು ಜನರ ಬೀಜ ಸಾರ್ವಭೌಮತ್ವವನ್ನು ದೈತ್ಯ ಬಹುರಾಷ್ಟ್ರೀಯ ಕಂಪನಿಗಳು, ಹಣಕಾಸು ಬಂಡವಾಳ ಮತ್ತು ಡಬ್ಲ್ಯುಟಿಒ ಗೆ ಬಿಟ್ಟುಕೊಡುವುದನ್ನು ಕೈಬಿಡಬೇಕು ಎಂದು ಬಲವಾಗಿ ಒತ್ತಾಯಿಸುತ್ತಾರೆ ಎಂದು ಸಂಯುಕ್ತ ಕಿಸಾನ್‍ ಮೋರ್ಚಾ ಹೇಳಿದೆ.

ಇದನ್ನೂ ನೋಡಿ : “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್‌ | ಯು.ಎಸ್‌. ಸಾಮ್ರಾಜ್ಯಶಾಹಿ Janashakthi Media

 

Donate Janashakthi Media

Leave a Reply

Your email address will not be published. Required fields are marked *