ಗದಗ: ತಾಲ್ಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದ್ದು, ಇಲ್ಲಿ ಸವರ್ಣೀಯರು ದಲಿತ ಕುಟುಂಬಗಳನ್ನು ಬಹಿಷ್ಕಾರ ಹಾಕಿರುವಂತಹ ಘಟನೆ ನಡೆದಿದೆ. ದಲಿತರು ದೇವಸ್ಥಾನ, ಕಿರಾಣಿ ಅಂಗಡಿ, ಹೊಟೇಲಿಗೆ ಹೋಗುವಂತಿಲ್ಲ. ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡಿದರೆ, ಅಂಗಡಿ ಮಾಲೀಕನಿಗೆ ದಂಡ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಜನವರಿ 21ರಂದು ದಲಿತರ ಮೇಲಿನ ಬಹಿಷ್ಕಾರ ಪ್ರಕರಣ ಹಲವು ದಿನಗಳಿಂದ ಜಾರಿಯಲ್ಲಿದೆ ಎಂದು ವರದಿಯಾಗಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ನಿಮಿತ್ತ ದಲಿತ ಯುವಕರು ಬಹಿಷ್ಕಾರದ ಬಗ್ಗೆ ತಹಶೀಲ್ದಾರ ಗಮನಕ್ಕೆ ತಂದಿದ್ದಾರೆ. ದುಡಿಮೆಯೂ ಇಲ್ಲ, ರೇಷನ್ ಕೂಡ ನೀಡುತ್ತಿಲ್ಲ ಅಂತ ದೂರು ನೀಡಿದ್ದಾರೆ.
ಇದನ್ನು ಓದಿ: ದಲಿತ ಬಾಲಕ ದೇವರ ಕೋಲು ಮುಟ್ಟಿದ್ದಕ್ಕೆ : ಬಹಿಷ್ಕಾರ, 60 ಸಾವಿರ ರೂ ದಂಡ
ಮಾದಿಗ ಸಮಯದಾಯದವರೊಬ್ಬರ ಮನೆಯಲ್ಲಿ ಮದುವೆ ಸಮಾರಂಭದ ವೇಳೆ ದ್ಯಾಮಮ್ಮ ಗುಡಿಗೆ ಹಾಲುಗಂಬ, ಹಸಿರುಗಂಬ ಪೂಜೆಗೆ ಅವಕಾಶ ನೀಡಲಿಲ್ಲ ಮತ್ತು ಊರಿನ ಇತರೆ ಸಮುದಾಯಗಳ ಮುಖಂಡರು ಗುಡಿಗೆ ಬೀಗ ಹಾಕಿದ್ದಾರೆ. ಮದುಮಗನಾಗಿದ್ದ ರೈತ ಶರಣು ಮಾದರ ಮತ್ತು ಆತನ ಕುಟುಂಬಸ್ಥರು ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದಾರಿಯುದ್ದಕ್ಕೂ ಎಲ್ಲಾ ಅಂಗಡಿಗಳು ಮತ್ತು ಅವರು ಆಚರಣೆ ಮಾಡಲು ಹೊರಟಿದ್ದ ದ್ಯಾಮವ್ವ ದೇವಸ್ಥಾನವನ್ನು ಮುಚ್ಚಲಾಗಿದೆ. ಮೇಲ್ಜಾತಿಗೆ ಸೇರಿದ ಕೆಲವರ ಆದೇಶದ ಮೇರೆಗೆ ಅಂಗಡಿಗಳು ಮತ್ತು ದೇವಸ್ಥಾನವನ್ನು ಮುಚ್ಚಲಾಗಿದೆ.
ಕಿರಾಣಿ ಅಂಗಡಿಯಲ್ಲಿ ದಲಿತ ಕುಟುಂಬಗಳಿಗೆ ಏನಾದರೂ ಪದಾರ್ಥಗಳನ್ನು ನೀಡಿದರೆ, 2500 ರೂ. ದಂಡ ಹಾಕುತ್ತಾರೆ ಎಂದು ಅಂಗಡಿಕಾರರು ಆರೋಪಿಸಿದ್ದಾರೆ. ಇದರ ಒಂದು ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ: ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಏಕೆ?
ಗ್ರಾಮದಲ್ಲಿ ಮಾದಿಗ ಸಮುದಾಯದ 14 ಮನೆಗಳು ಮಾತ್ರ ಇವೆ. ಊರಿನಲ್ಲಿರುವ ಎಲ್ಲರಂತೆ ನಮ್ಮ 70 ಮಂದಿಗೂ ಸಮಾನವಾಗಿ ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಗ್ರಾಮದ ಯುವಕ ಹೇಳಿರುವುದು ವರದಿಯಾಗಿದೆ.
ಶ್ಯಾಗೋಟಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದ್ದು, ಸಮಾನತೆ ನೀಡುವಂತೆ ದಲಿತ ಕುಟುಂಬಗಳು ಒತ್ತಾಯಿಸುತ್ತಿದ್ದಾರೆ. ತಹಶೀಲ್ದಾರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸುವುದಾಗಿ ನಿರ್ಧಾರವಾಗಿದೆ. ಸದ್ಯ ಗ್ರಾಮದಲ್ಲಿ ಪೊಲೀಸರು ಬಿಡುಬಿಟ್ಟಿದ್ದಾರೆ. ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಠಿಣ ನಿಯಮಗಳನ್ನು ತರಲು ನಾವು ಯೋಚಿಸುತ್ತಿದ್ದೇವೆ ಎಂದು ಗದಗ ತಹಶೀಲ್ದಾರ್ ಕಿಶನ್ ಕಲಾಲ್ ಹೇಳಿದ್ದಾರೆ.
ತಹಶೀಲ್ದಾರ್ ಹಾಗೂ ಅಧಿಕಾರಿಗಳು ಈ ಹಿಂದೆ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಮೇಲ್ಜಾತಿಯ ಜನರು ಸಭೆಯಲ್ಲಿ ನಿಯಮಗಳನ್ನು ಪಾಲಿಸಲು ಒಪ್ಪುತ್ತಾರೆ ಆದರೆ, ನಂತರ ಪಾಲಿಸುವುದಿಲ್ಲ. ಈ ಪದ್ಧತಿ ಹೊಸದಲ್ಲ, ದಶಕಗಳಿಂದ ಗುಟ್ಟಾಗಿ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಇಷ್ಟೆಲ್ಲಾ ಆದರೂ ದಲಿತರು ದೇವಸ್ಥಾನ,ದೇವಸ್ಥಾನ ಅಂತಾ ಸಾಯೋದು ನೋಡಿದರೆ ಇವರಿಗೆ ಇನ್ನೂ ಶತಮಾನಗಳು ಕಳೆದರು ಬುದ್ದಿ ಬರೋದಿಲ್ಲ ಅನ್ನಿಸತ್ತೆ,ಭಾಭಾಸಾಹೇಬರ ಮಾರ್ಗದಲ್ಲಿ ನಡೆಯಿರಿ,ಈ ಹಿಂದೂಗಳ ಮೌಢ್ಯ ದೇವರುಗಳ ಅವಶ್ಯಕತೆ ನಮಗಿಲ್ಲ ಅಂತಾ ಸ್ವಾಭಿಮಾನ ದಿಂದ ಬದುಕೋದನ್ನ ಕಲಿತು ಭುದ್ದರ ಸರಳ ಮಾರ್ಗದಲ್ಲಿ ಬದುಕು ರೂಢಿಸಿಕೊಳ್ಳಿ, ಅದರ ಅರ್ಥ ಅವರು ದೌರ್ಜನ್ಯ ಮಾಡಿದರೆ ಸಹಿಸಿಕೊಳ್ಳೋದು ಅಂತ ಅಲ್ಲ ,ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಆಗಲೇ ಈ ಅಯ್ಯೊಗ್ಯ ಅನಾಗರಿಕ ,ಜಾತಿ ಕುಷ್ಠರೋಗ ಪೀಡಿತರು ಅರ್ಥ ಮಾಡಿಕೊಳ್ಳುವುದು.
ನೀವು ಈ ವರದಿಯಲ್ಲಿ ಸ್ಯಾಗೋಟಿ ಗದಗ ಜಿಲ್ಲೆ ದಳಿತರ ಬಹಿಕ್ಷಾರ ಕುರಿತು ವರದಿ ಇದೆ. ಹೀಗೆ ಮಾಡಿದ ಜನರು ಯಾವ ಜಾತಿಯವರು.ಊರಲ್ಲಿ ಯಾವ ಜಾತಿ ಜನರು ಹೆಚ್ಚಿದ್ದಾರೆ. ಇಲ್ಲಿನ ಪ್ರಭಲ ಜಾತಿಗಳ ಕೈವಾಡ,ಪಾಳೇಗಾರಿಕೆ ನಡವಳಿಕೆ……ಇತ್ಯಾದಿ ವಿವರಗಳು ವರದಿಯಲ್ಲಿ ಇದ್ದರೇ ಚೆನ್ನಾಗಿತ್ತು.