ರಥ ಎಳೆಯುವಾಗ ಭಾರೀ ದುರಂತ; ವಿದ್ಯುತ್ ಸ್ಪರ್ಶದಿಂದ 11 ಮಂದಿ ಸಾವು

ಚೆನ್ನೈ: ಕಾಳಿಮೇಡು ಗ್ರಾಮದಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ರಥಕ್ಕೆ ವಿದ್ಯುತ್‌ ಪಸರಿಸುವ ತಂತಿ ಸುತ್ತಿಕೊಂಡು ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ  ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 15 ಮಂದಿಯನ್ನು ತಂಜಾವೂರಿನ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.  ಪರಿಸ್ಥಿತಿ ಗಂಭೀರವಾಗಿದ್ದು, ಇನ್ನು ಹೆಚ್ಚು ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೃತರನ್ನು ಎಂ ಮೋಹನ್ (22), ಕೆ ಪ್ರತಾಪ್ (36), ಎ ಅನ್ಬಳಗನ್ (60), ಅವರ ಪುತ್ರ ರಾಘವನ್ (24), ಆರ್ ಸಂತೋಷ್ (15), ಟಿ ಸೆಲ್ವಂ (56), ಎಂ ರಾಜ್‌ಕುಮಾರ್ (14), ಆರ್ ಸ್ವಾಮಿನಾಥನ್ (56), ಎ ಗೋವಿಂದರಾಜ್, ಎಸ್ ಭರಣಿ (13), ನಾಗರಾಜ್ (60) ಎಂದು ಗುರ್ತಿಸಲಾಗಿದೆ. ಎಲ್ಲರೂ ಕಾಳಿಮೇಡು ಗ್ರಾಮದವರಾಗಿದ್ದಾರೆಂದು ತಿಳಿಸಿದ್ದಾರೆ.

ದೇವರ ರಥೋತ್ಸವ ಮುಗಿಸಿ ದೇವಸ್ಥಾನಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ತಂಜಾವೂರು ಜಿಲ್ಲೆಯ ಕಾಳಿಮೇಡುವಿನ ಅಪ್ಪಾರ್ ಮಡಂ ದೇವಸ್ಥಾನದ ರಥೋತ್ಸವದ ವೇಳೆ ಈ ದುರ್ಘಟನೆ ನಡೆದಿದ್ದು, 94ನೇ ಅಪ್ಪರ್ ಗುರುಪೂಜೈ ಅಂದರೆ ಭಗವಾನ್ ಅಯ್ಯಪ್ಪನ ಉತ್ಸವ ಆಚರಿಸಲಾಗುತಿತ್ತು. ಭಕ್ತರು ದೇವಸ್ಥಾನದ ರಥವನ್ನು ಬೀದಿಗಳಲ್ಲಿ ಎಳೆಯುತ್ತಿದ್ದ ವೇಳೆ ರಥವನ್ನು ತಿರುಗಿಸುತ್ತಿದ್ದಾಗ ವಿದ್ಯುತ್ ತಂತಿ ಸಿಲುಕಿಕೊಂಡಿತು.

ಘಟನೆಯಿಂದ ಅಘಾತಕ್ಕೆ ಒಳಗಾದ  50ಕ್ಕೂ ಹೆಚ್ಚು ಮಂದಿ ದೇವಾಲಯದ ರಥದಿಂದ ದೂರ ಸರಿದಿದ್ದರಿಂದ ಪ್ರಾಣಾಹಾನಿಯಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಐಜಿಪಿ ವಿ. ಬಾಲಕೃಷ್ಣನ್ ಹೇಳಿದ್ದಾರೆ.

ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮೃತರಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ದಿನೇಶ್ ಪೊನ್ರಾಜ್ ಆಲಿವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ ಸಂತಾಪ

ತಂಜಾವೂರು ಜಿಲ್ಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡ ಕುರಿತು ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ‍್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿಗಳ ರಾಷ್ಟ್ಗರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರವನ್ನು ಘೋಷಿಸಿದೆ.

Donate Janashakthi Media

Leave a Reply

Your email address will not be published. Required fields are marked *