ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

ಹೈದರಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದ ಮೇಲ್ಛಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಇನ್ನೂ 7 ಕಾರ್ಮಿಕರನ್ನು ಪತ್ತೆಹಚ್ಚಬೇಕಿದೆ.

ಮೃತ ಕಾರ್ಮಿಕನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಮೃತದೇಹ ಯಂತ್ರದೊಳಗೆ ಸಿಲುಕಿಕೊಂಡಾಗ ಪತ್ತೆಯಾಗಿದೆ. ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹಾಗೂ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇದನ್ನು ಓದಿ :-ಫ್ಯಾಸಿಸ್ಟ್ ಮತ್ತು ನವ-ಫ್ಯಾಸಿಸ್ಟ್ ಗುಣಲಕ್ಷಣಗಳು ಎಂಬುದರ ಚರ್ಚೆಯ ಸುತ್ತ

ದೋಮಲಪೆಂಟಾ ಬಳಿಯ ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ 56 ಕಾರ್ಮಿಕರು ಒಳಗೆ ಸಿಲುಕಿದ್ದರು. ಈ ಪೈಕಿ 48 ಜನರನ್ನು ಆರಂಭದಲ್ಲಿಯೇ ರಕ್ಷಿಸಲಾಗಿದ್ದು, 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಕಾರ್ಮಿಕರನ್ನು ಪತ್ತೆಹಚ್ಚಲು ಕಳೆದ 17 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಭಾನುವಾರ ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.

ಫೆ.22 ರಂದು ಸುರಂಗ ಕುಸಿತದ ಬಳಿಕ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಉತ್ತರಾಖಂಡದ ರ‍್ಯಾಟ್ ಮೈನರ್, ಸ್ನಿಫರ್ ನಾಯಿ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 17 ದಿನಗಳಿಂದ ಹಗಲು, ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ.

ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಓರ್ವನ ಮೃತದೇಹ ಪತ್ತೆಯಾದ ಬಳಿಕ ಇನ್ನುಳಿದವರ ರಕ್ಷಣೆಗಾಗಿ ರೋಬೋಟ್ ಬಳಸಲು ರಾಜ್ಯ ಸರ್ಕಾರ ಯೋಜಿಸಿದ್ದು, 4 ಕೋಟಿ ರೂ. ಖರ್ಚು ಮಾಡಲಿದೆ.

ಇನ್ನೂ ಘಟನಾ ಸ್ಥಳಕ್ಕೆ ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಮಾ.2 ರಂದು ಭೇಟಿ ನೀಡಿದ್ದರು. ಇದೀಗ ಮಾ.11 ರಂದು ಘಟನಾ ಸ್ಥಳಕ್ಕೆ ಇನ್ನೊಮ್ಮೆ ಭೇಟಿ ನೀಡುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *