ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವೂ ಆಡಳಿತರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಗೆ ಮತ್ತೆ ಬೆಂಬಲ ನೀಡಲಿದೆ ಎಂದು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದು, ಪಕ್ಷವೂ ಹೈದರಾಬಾದ್‌ನಲ್ಲಿ 9 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಶುಕ್ರವಾರ ತಿಳಿಸಿದ್ದಾರೆ.
ತಮ್ಮ ಪಕ್ಷವು ಹಿಂದಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಏಳು ಸ್ಥಾನಗಳನ್ನು ಹೊರತುಪಡಿಸಿ ರಾಜೇಂದ್ರನಗರ ಮತ್ತು ಜುಬಿಲಿ ಹಿಲ್ಸ್ ಸ್ಥಾನಗಳಲ್ಲಿ ಕೂಡಾ ಸ್ಪರ್ಧಿಸಲಿದೆ ಎಂದು ಒವೈಸಿ ಹೇಳಿದ್ದಾರೆ. ಪ್ರಸ್ತತ ಇಬ್ಬರು ಹಾಲಿ ಎಐಎಂಐಎಂ ಶಾಸಕರಾದ ಮುಮ್ತಾಜ್ ಅಹ್ಮದ್ ಖಾನ್ ಮತ್ತು ಸೈಯದ್ ಪಾಶಾ ಕಾದ್ರಿ ಅವರನ್ನು ಕೈಬಿಡಲಾಗಿದೆ. ಪಕ್ಷದ ಈ ತೀರ್ಮಾನವು ಕಿರಿಯ ಅಭ್ಯರ್ಥಿಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಇದನ್ನೂ ಓದಿ: ಛತ್ತೀಸ್‌ಘಡ | ಚುನಾವಣೆ ಚಿಹ್ನೆ ಕಳೆದುಕೊಂಡ 7 ಸಿಪಿಐ ಅಭ್ಯರ್ಥಿಗಳು!
ಒವೈಸಿ ಅವರು ಆರು ಎಐಎಂಐಎಂ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಉಳಿದ ಮೂರು ಕ್ಷೇತ್ರಗಳಾದ ಬಹದ್ದೂರ್‌ಪುರ, ಜುಬಿಲಿ ಹಿಲ್ಸ್ ಮತ್ತು ರಾಜೇಂದ್ರನಗರ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ, ನವೆಂಬರ್ 10ಕ್ಕೆ ಮುಕ್ತಾಯವಾಗಲಿದೆ. ಆಡಳಿತಾರೂಢ ಬಿಆರ್‌ಎಸ್ ಜೊತೆಗಿನ ಪಕ್ಷದ ಯಥಾಸ್ಥಿತಿ ಹಾಗೆಯೇ ಉಳಿದಿದೆ ಎಂದ ಅವರು, ಬಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರಿಗೆ ಮತ ನೀಡುವಂತೆ ಮುಸ್ಲಿಮರನ್ನು ಕೇಳುವುದನ್ನು ಎಐಎಂಐಎಂ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಕೆಸಿಆರ್ ಅವರನ್ನು ಒವೈಸಿ ಅವರು “ಮಾಮು” ಎಂದು ಉಲ್ಲೇಖಿಸಿದ್ದಾರೆ.
“ನಾನು ಮಾಮುಗೆ ಮತ ಹಾಕಿ ಎಂದು ಹೇಳುತ್ತಿದ್ದೇನೆ. ನಾವು ಎಲ್ಲಿ ಸ್ಪರ್ಧಿಸಿದರೂ ನಮ್ಮ ಗಾಳಿಪಟ ಹಾರುತ್ತದೆ. ಶೀಘ್ರದಲ್ಲೇ ಬಹದ್ದೂರ್‌ಪುರ ಅಭ್ಯರ್ಥಿಯ ಹೆಸರನ್ನು ಘೋಷಿಸಲಿರುವುದರಿಂದ ಕಾಯಲು ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಒವೈಸಿ ಹೈದರಾಬಾದ್‌ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಘಡ | ಚುನಾವಣೆ ಚಿಹ್ನೆ ಕಳೆದುಕೊಂಡ 7 ಸಿಪಿಐ ಅಭ್ಯರ್ಥಿಗಳು!
AIMIM ಪ್ರಸ್ತುತ ಚಾರ್ಮಿನಾರ್, ಯಾಕುತ್‌ಪುರ, ಬಹದ್ದೂರ್‌ಪುರ, ಕಾರ್ವಾನ್, ಮಲಕ್‌ಪೇಟ್, ಚಾರ್ಮಿನಾರ್ ಮತ್ತು ನಾಂಪಲ್ಲಿ ಸ್ಥಾನಗಳನ್ನು ಹೊಂದಿದೆ. ನಾಂಪಲ್ಲಿ ಹೊರತುಪಡಿಸಿ ಉಳಿದೆಲ್ಲವೂ ಹಳೆಯ ಹೈದರಾಬಾದ್ ನಗರದ ಪ್ರದೇಶದಲ್ಲಿ ಬರುತ್ತವೆ. 2018 ರ ಚುನಾವಣೆಯಲ್ಲಿ ಪಕ್ಷವು ರಾಜೇಂದ್ರನಗರ ಮತ್ತು 2014 ರ ರಾಜ್ಯ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು.
27% ಮುಸ್ಲಿಂ ಮತಗಳನ್ನು ಹೊಂದಿರುವ ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ AIMIM ಸ್ಪರ್ಧೆ ಮಾಡಲಿದೆಯೆ ಎಂದು ಕುತೂಹಲದಿಂದ ಕಾಯುತ್ತಿದ್ದರು. ಈ ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸುವುದಾಗಿ ಒವೈಸಿ ಘೋಷಿಸಿರುವುದರಿಂದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌ಗೆ ಕಠಿಣವಾಗುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಆಗಿದ್ದು, ಪ್ರಾದೇಶಿಕ ಪಕ್ಷ (ಬಿಆರ್‌ಎಸ್) ಇರುವುದರಿಂದ ಇಲ್ಲಿ ಅಧಿಕಾರದ ಸಮತೋಲನವಿದೆ ಎಂದು ಓವೈಸಿ ಪ್ರತಿಪಾದಿಸಿದ್ದಾರೆ.
2018 ರ ತೆಲಂಗಾಣ ಚುನಾವಣೆಯಲ್ಲಿ 119 ಸ್ಥಾನಗಳಲ್ಲಿ ಬಿಆರ್‌ಎಸ್ 88 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷವನ್ನು ಅಸಾದುದ್ದೀನ್ ಒವೈಸಿ ಬೆಂಬಲಿಸಿದ್ದರು. ಅಷ್ಟೆ ಅಲ್ಲದೆ ಕೆಸಿಆರ್ ಅವರನ್ನು ಬೆಂಬಲಿಸಿ ಹೈದರಾಬಾದ್‌ನ ಹೊರಗೆ ರ‍್ಯಾಲಿಗಳನ್ನು ನಡೆಸಿದ್ದರು.
ವಿಡಿಯೊ ನೋಡಿ: ವಿಸ್ಮಯಕಾರಿ ಗೆದ್ದಲು ಪ್ರಪಂಚ !! ಪ್ರಕ್ರತಿಗೆ ಸಾಕಷ್ಟು ಉಪಕಾರ ಮಾಡುವ ಗೆದ್ದಲು ಹುಳು