ತೆಲಂಗಾಣ | ಕಾಂಗ್ರೆಸ್‌ಗೆ ಕೇವಲ 20 ಸ್ಥಾನ ಎಂದ ಕೆಸಿಆರ್; 80 ಕ್ಕಿಂತ ಹೆಚ್ಚು ಎಂದ ಕಾಂಗ್ರೆಸ್‌ ಅಧ್ಯಕ್ಷ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ಒಂದು ವಾರ ಬಾಕಿ ಉಳಿದಿದ್ದು, ರಾಜ್ಯದ ಮುಖ್ಯಮಂತ್ರಿ, ಆಡಳಿತರೂಢ ಪಕ್ಷವಾದ ಬಿಆರ್‌ಎಸ್‌ನ ಅಧ್ಯಕ್ಷರೂ ಆಗಿರುವ ಕೆ. ಚಂದ್ರಶೇಖರ್ ರಾವ್(ಕೆಸಿಆರ್) ಅವರು, ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಬುಧವಾರ ಭವಿಷ್ಯ ನುಡಿದಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರು ಪಕ್ಷವು 80 ಸೀಟುಗಳಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಯಾವುದೇ ಶಿಕ್ಷೆಗೂ ಸಿದ್ಧ ಎಂದು ಹೇಳಿದ್ದಾರೆ.

ಕೆಸಿಆರ್ ಮತ್ತು ರೇವಂತ್ ರೆಡ್ಡಿ ಬುಧವಾರ ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಈ ಪ್ರತಿಪಾದನೆ ಮಾಡಿದ್ದಾರೆ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ರಾಜ್ಯದಾದ್ಯಂತ ಪ್ರಮುಖ ಸ್ಪರ್ಧಿಗಳು ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. 2018 ರಲ್ಲಿ ಟಿಆರ್‌ಎಸ್ (ಈಗ ಬಿಆರ್‌ಎಸ್) 88 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ

ರೇವಂತ್ ರೆಡ್ಡಿ ಅವರ ತವರು ಕ್ಷೇತ್ರವಾದ ಮಹಬೂಬ್‌ನಗರ ಜಿಲ್ಲೆಯ ಕೊಡಂಗಲ್‌ನಲ್ಲಿ ಮಾತನಾಡಿದ ಸಿಎಂ ಕೆಸಿಆರ್, ರೇವಂತ್ ರೆಡ್ಡಿ ಅವರಿಗೆ ಯಾವುದೇ ನೈತಿಕತೆ ಇಲ್ಲ, ಏಕೆಂದರೆ ಅವರನ್ನು “ಭೂಗಳ್ಳ” ಎಂದು ವಾಗ್ದಾಳಿ ನಡೆಸಿದ್ದಾರೆ. “ಶಾಸಕರೊಬ್ಬರಿಗೆ 50 ಲಕ್ಷ ಲಂಚ ನೀಡಿ ರೇವಂತ್ ರೆಡ್ಡಿ ಸಿಕ್ಕಿಬಿದ್ದಿದ್ದನ್ನು ನಾವೆಲ್ಲರೂ ದೂರದರ್ಶನದಲ್ಲಿ ವೀಕ್ಷಿಸಿದ್ದೇವೆ. ಈಗ ಅವರನ್ನು ಪ್ರಶ್ನಿಸಿದಾಗಲೆಲ್ಲಾ, ಹಾಗೆ ಸಿಕ್ಕಿಹಾಕಿಕೊಂಡಿರುವುದು ತನಗೆ ‘ಗರಿ’ ಇದ್ದ ಹಾಗೆ ಎಂದು ಅವರು ಹೇಳುತ್ತಿದ್ದಾರೆ” ” ಎಂದು ಕೆಸಿಆರ್ ಹೇಳಿದ್ದಾರೆ.

ಕೊಡಂಗಲ್ ಸಾಕಾಗಲ್ಲ ಎಂದು ನನ್ನ ವಿರುದ್ಧ ಕಾಮರೆಡ್ಡಿ ಕ್ಷೇತ್ರದಿಂದ ಕೂಡಾ ಸ್ಪರ್ಧಿಸುತ್ತಿದ್ದು, ಮತ್ತೊಮ್ಮೆ ಅವರನ್ನು ಹೀನಾಯವಾಗಿ ಸೋಲಿಸಿ ಎಂದು ಕೆಸಿಆರ್ ಅವರು ಕೊಡಂಗಲ್ ಜನತೆಗೆ ಕರೆ ನೀಡಿದ್ದು, “ಕಾಂಗ್ರೆಸ್‌ನಲ್ಲಿ 15 ಮಂದಿ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಗೆದ್ದರೆ ಮಾತ್ರ ರೇವಂತ್ ರೆಡ್ಡಿ ಸಿಎಂ ಆಗುತ್ತಾರೆ. ರೇವಂತ್ ರೆಡ್ಡಿ ಸಿಎಂ ಆಗುತ್ತಾರೆ ಎಂದು ಭಾವಿಸಿ ಮತ ಹಾಕಿದರೆ ಕೊಡಂಗಲ್ಲಿನ ಸ್ಥಿತಿ ಮೊದಲಿನ ಸ್ಥಿತಿಗೆ ಬರಲಿದೆ” ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಪರಗಿಯಲ್ಲಿ ನಡೆದ ಮತ್ತೊಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್, “ನಾನು ಸಿಎಂ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಜನರ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾದರೂ ತೆಲಂಗಾಣವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದೇ ನನ್ನ ಗುರಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ | ಲೂಟಿ ಮಾಡಿದ 4,000 ಶಸ್ತ್ರಾಸ್ತ್ರಗಳು ಇನ್ನೂ ಜನರ ಕೈಯ್ಯಲ್ಲಿ ಇವೆ: ಲೆಫ್ಟಿನೆಂಟ್ ಜನರಲ್ ಆರ್. ಪಿ. ಕಲಿತಾ

ತೆಲಂಗಾಣ ರಾಜ್ಯ ರಚನೆಯಾದಾಗ ಹಲವಾರು ಸಮಸ್ಯೆಗಳಿದ್ದವು ಎಂದು ಹೇಳಿದ ಅವರು, ಬಿಆರ್‌ಎಸ್ ಸರ್ಕಾರವು ಒಂದರ ನಂತರ ಒಂದರಂತೆ ಅವುಗಳನ್ನು ಪರಿಹರಿಸುತ್ತಲೇ ಇತ್ತು. ಅವರ ಸಲುವಾಗಿಯೇ ಬಿಆರ್‌ಎಸ್ ಅಸ್ತಿತ್ವಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಅಲ್ಲಿಂದ ಲೋಕಸಭೆಗೆ ಆಯ್ಕೆಯಾಗಿದ್ದನ್ನು ಮಹಬೂಬ್‌ನಗರದಲ್ಲಿ ಕೆಸಿಆರ್ ಸ್ಮರಿಸಿದ್ದಾರೆ.

ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ನ 55 ವರ್ಷಗಳ ಆಡಳಿತವೇ ಕಾರಣ ಎಂದು ಆರೋಪಿಸಿದ ಅವರು, “ಕೃಷಿಯಲ್ಲಿ ತೊಡಗಿರುವ ನನಗೆ ರೈತರ ಸಮಸ್ಯೆಗಳು ತಿಳಿದಿವೆ. ಈ ಹಿಂದೆ ಯಾವುದೇ ಸರ್ಕಾರ ರೈತರ ಕಲ್ಯಾಣಕ್ಕಾಗಿ ಇಷ್ಟು ಮಾಡಿಲ್ಲ. ರೈತರು ಬೆಳೆದ ಎಲ್ಲಾ ಆಹಾರ ಧಾನ್ಯಗಳನ್ನು ಸರ್ಕಾರವು ಸಂಗ್ರಹಿಸುತ್ತಿದೆ” ಎಂದು ಹೇಳಿರುವ ಕೆಸಿಆರ್, ರೈತ ಬಂಧು ಯೋಜನೆಯನ್ನು ಜನರಿಗೆ ಪರಿಚಯಿಸಿದ್ದಾರೆ.

ಈ ಮಧ್ಯೆ, ನಿಜಾಮಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ, ಕೆಸಿಆರ್‌ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುತ್ತಿರುವುದನ್ನು ನಾನು ಅರಿತುಕೊಂಡಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಆರೋಪಿಯನ್ನು ಮದುವೆಯಾಗಲು ಒಪ್ಪಿದ ಸಂತ್ರಸ್ತೆ; ಪೋಕ್ಸೋ ಮತ್ತು ಅತ್ಯಚಾರ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್

“ಕಾಂಗ್ರೆಸ್ 80ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 80ಕ್ಕಿಂತ ಕಡಿಮೆ ಸೀಟು ಗೆದ್ದರೆ ಕೆಸಿಆರ್ ನೀಡುವ ಯಾವುದೇ ಶಿಕ್ಷೆಗೆ ನಾನು ಸಿದ್ಧ. 2019 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರಿ ಕವಿತಾ ಅವರನ್ನು ಸೋಲಿಸಿದ್ದಕ್ಕಾಗಿ ನಿಜಾಮಾಬಾದ್ ಜನರ ಮೇಲೆ ಕೆಸಿಆರ್‌ಗೆ ದ್ವೇಷವಿದೆ. ಕೆಸಿಆರ್ ಕುಟುಂಬ ಲಕ್ಷಾಂತರ ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದೆ” ಎಂದು ರೇವಂತ್ ಆರೋಪಿಸಿದ್ದಾರೆ.

ಕಾಮರೆಡ್ಡಿ ಮತ್ತು ನಿಜಾಮಾಬಾದ್‌ನಲ್ಲಿ ರೈತರ ಜಮೀನು ಕಿತ್ತುಕೊಳ್ಳಲು ಕೆಸಿಆರ್ ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದ ರೇವಂತ್ ರೆಡ್ಡಿ, “100 ದಿನಗಳಲ್ಲಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವುದಾಗಿ ಕೆಸಿಆರ್ ಭರವಸೆ ನೀಡಿದ್ದರು. ಆದರೆ 10 ವರ್ಷಗಳು ಕಳೆದರೂ ಅವರು ಭರವಸೆಯನ್ನು ಈಡೇರಿಸಿಲ್ಲ. ತೆಲಂಗಾಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಆರ್‌ಟಿಸಿ ನೌಕರರಿಗೆ ಕಿರುಕುಳ ನೀಡಿ, ಎಂಎಸ್‌ಪಿ ಬೇಡಿಕೆಯ ಮೆಕ್ಕೆಜೋಳ ರೈತರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *