ಹೈದರಾಬಾದ್: ತೆಲಂಗಾಣದ ಆಡಳಿತರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಮಿರ್ಯಾಲಗುಡ ಶಾಸಕ ಎನ್. ಭಾಸ್ಕರ ರಾವ್ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಗುರುವಾರ ಶೋಧ ನಡೆಸಿದೆ ಎಂದು ವರದಿಗಳು ಹೇಳಿವೆ. ಐಟಿ ಅಧಿಕಾರಿಗಳ ಹಲವು ತಂಡಗಳು ಹೈದರಾಬಾದ್, ನಲ್ಗೊಂಡ ಮತ್ತು ಮಿರ್ಯಾಲಗುಡಾದಲ್ಲಿ ಮುಂಜಾನೆಯಿಂದಲೇ ಏಕಕಾಲದಲ್ಲಿ ಶೋಧ ನಡೆಸಿವೆ ಎಂದು ತಿಳಿದುಬಂದಿವೆ.
ಕನಿಷ್ಠ 30 ತಂಡಗಳು ಮಿರ್ಯಾಲಗುಡದಲ್ಲಿ ಭಾಸ್ಕರ ರಾವ್ ಅವರ ಸಂಬಂಧಿಕರು, ಸಹಾಯಕರು ಮತ್ತು ಅವರ ವ್ಯಾಪಾರ ವಹಿವಾಟು ಹೊಂದಿರುವ ಶಂಕಿತರ ಮನೆಗಳಲ್ಲಿ ಶೋಧ ನಡೆಸುತ್ತಿವೆ ಎಂದು ವರದಿಯಾಗಿದೆ. ಶಾಸಕ ಭಾಸ್ಕರ ಅವರು ಮತದಾರರಿಗೆ ಹಂಚಲು ಹಣ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹುಡುಕಾಟ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನ್ಯೂಸ್ಕ್ಲಿಕ್ ಪ್ರಕರಣ: ನೆವಿಲ್ಲೆ ರಾಯ್ ಸಿಂಘಮ್ಗೆ ಹೊಸ ಸಮನ್ಸ್ ಜಾರಿ ಮಾಡಿದ ಇಡಿ
ಐ-ಟಿ ಅಧಿಕಾರಿಗಳು ಕೆಲವು ಅಕ್ಕಿ ಗಿರಣಿ ಮಾಲೀಕರ ಆವರಣದಲ್ಲಿ ಶೋಧ ನಡೆಸಿದ್ದು, ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಆದರೆ ಶಾಸಕ ಭಾಸ್ಕರ ರಾವ್ ತಮ್ಮ ಮೇಲಿನ ಐಟಿ ದಾಳಿಯ ವರದಿಗಳನ್ನು ಅಲ್ಲಗಳೆದಿದ್ದಾರೆ. ಚುನಾವಣೆಯಲ್ಲಿ ಅವರನ್ನು ಎದುರಿಸಲು ಸಾಧ್ಯವಾಗದ ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಭಾಸ್ಕರ ರಾವ್ ಅವರು ಸತತ ಮೂರನೇ ಅವಧಿಗೆ ಮಿರ್ಯಾಲಗುಡದಿಂದ ಆಡಳಿತ ಪಕ್ಷದ ಟಿಕೆಟ್ನಲ್ಲಿ ಮರು ಆಯ್ಕೆ ಬಯಸಿದ್ದಾರೆ.
ಖಮ್ಮಂನ ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಸೇರಿದಂತೆ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳ ಮನೆಗಳಲ್ಲಿ ಐಟಿ ಇಲಾಖೆ ಇತ್ತೀಚೆಗೆ ಶೋಧ ನಡೆಸಿತ್ತು. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಡಿಯೊ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media