ಹೈದರಾಬಾದ್: ಕಾರು ಬಾಡಿಗೆ ಕಂಪನಿಯಾದ ಲಾಂಗ್ ಡ್ರೈವ್ ಕಾರ್ಸ್‌ನ ದಲಿತ ಸಮುದಾಯದ ಮಾಜಿ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ಎಂಟು ಆರೋಪಿಗಳ ಪೈಕಿ ಏಳು ಮಂದಿಯನ್ನು ಮೇಡಿಪಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಸಿ.ಎಚ್.ಮಹೇಶ್, ಶರತ್, ಪ್ರಸನ್ನ, ಅನುಷಾ, ಪೂಜಾ, ಕುಮಾರ್ ಮತ್ತು ರಾಜಾ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಮುಖ ಆರೋಪಿ ಲಾಂಗ್ ಡ್ರೈವ್ ಕಾರ್ಸ್ ನಿರ್ದೇಶಕ ಕೊಪುಲ ಹರಿದೀಪ್ ರೆಡ್ಡಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ತೆಲಂಗಾಣ
ಲಾಂಗ್ ಡ್ರೈವ್ ಕಾರ್ಸ್ ಕಂಪೆನಿಗೆ ರಾಜೀನಾಮೆ ನೀಡಿದ್ದ ಓಬೇಧ್, ರಿಷಿತಾ, ನಿತಿನ್, ಯೋಗಿ, ತರುಣ್, ಮಧುಮಿತಾ ಮತ್ತು ಸಮೀರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟವನ್ನು ಪ್ರಾರಂಭಿಸಲು ಫೆಬ್ರವರಿ 11 ರಂದು ಭೇಟಿಯಾಗಿದ್ದಾಗ, ಬೇರೆ ಕಂಪೆನಿಗೆ ಸೇರುತ್ತಿದ್ದಾರೆ ಎಂದು ಹೇಳಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು.
ತೆಲಂಗಾಣ
ಇದನ್ನೂ ಓದಿ: ಮಧ್ಯಪ್ರದೇಶ | ಬಿಜೆಪಿ ಸೇರುವ ಬಗ್ಗೆ ಸಂದಿಗ್ಧ ಸ್ಥಿತಿಯಲ್ಲಿರುವ ಕಾಂಗ್ರೆಸ್ ನಾಯಕ ಕಮಲ್ ನಾಥ್
“ಪಾವತಿಯ ಕೊರತೆಯಿಂದಾಗಿ ನಾವು ಲಾಂಗ್ ಡ್ರೈವ್ ಕಾರ್ಸ್ ಕಂಪೆನಿಯನ್ನು ತೊರೆದಿದ್ದೇವೆ. ಆದರೆ ನಾವು ಇನ್ನೊಂದು ವರ್ಷ ಕೆಲಸ ಮಾಡುವ ಒಪ್ಪಂದಕ್ಕೆ ಸಹಿ ಹಾಕಲು ಒತ್ತಾಯಿಸಲಾಗಿತ್ತು. ಆದಾಗ್ಯೂ, ನಮ್ಮ ತಂಡದ ಐದು ಸದಸ್ಯರು ವೀಡಿಯೊ ಕ್ರಿಯೇಟರ್ ಆಗಿ ಇನ್ಸ್‌ಟಾಗ್ರಾಂ ಪೇಜ್ ಮಾಡುವ ಬಗ್ಗೆ ಯೋಚಿಸಿದ್ದರು. ಇನ್ನಿಬ್ಬರು ಈಗಲೂ ಹೊಸ ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದಾರೆ” ಎಂದು ಸಂತ್ರಸ್ತರಲ್ಲಿ ಒಬ್ಬರಾದ ಓಬೇಧ್ ಹೇಳಿದ್ದಾರೆ.
“ಫೆಬ್ರವರಿ 11 ರಂದು, ನಮ್ಮ Instagram ಪುಟದ ಬಗ್ಗೆ ಕಾರ್ಯತಂತ್ರ ರೂಪಿಸಲು ನಾವು ಭೇಟಿಯಾಗಿದ್ದವು. ಕಾಕತಾಳೀಯವೆಂಬಂತೆ, ಲಾಂಗ್ ಡ್ರೈವ್ ಕಾರ್ಸ್ ಉದ್ಯೋಗಿ ಮತ್ತು ನಮ್ಮ ತಂಡದ ಮಾಜಿ ಉದ್ಯೋಗಿ ಶರತ್ ಕೂಡಾ ಅಲ್ಲಿದ್ದರು. ಅವರು ತಮ್ಮ ಕಂಪನಿಗೆ ಏನನ್ನೋ ಶೂಟಿಂಗ್ ಮಾಡುತ್ತಿದ್ದರು. ಸ್ನೇಹಿತರಾಗಿ, ನಾವು ಅವರೊಂದಿಗೆ ನಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದು, ಅವರೊಂದಿಗೆ ಮಾಹಿತಿಗಳನ್ನು ಕೇಳಿದ್ದೇವೆ. ಆದರೆ, ಶರತ್ ನಮ್ಮ ಉದ್ದೇಶವನ್ನು ತಪ್ಪಾಗಿ ನಿರೂಪಿಸಿ, ನಾವು ಬೇರೆ ಕಾರು ಕಂಪನಿಗೆ ಸೇರಲು ಯೋಜಿಸುತ್ತಿದ್ದೇವೆ ಎಂದು ಹೇಳಿಕೊಂಡು ಗಲಾಟಿ ಮಾಡಿದ್ದಾರೆ” ಎಂದು ಓಬೇಧ್ ಹೇಳಿದ್ದಾರೆ.
ಅವರು ಮತ್ತೊಂದು ಕಂಪನಿಗೆ ಸೇರಲು ಯೋಜಿಸಿರುವ ಬಗ್ಗೆ ತಿಳಿದು, ಲಾಂಗ್ ಡ್ರೈವ್ ಕಾರ್ಸ್‌ನ ಪ್ರಸ್ತುತ ಮ್ಯಾನೇಜ್‌ಮೆಂಟ್ ಸದಸ್ಯರು ಸ್ಥಳಕ್ಕೆ ಬಂದು ಅವರನ್ನು ಕಾರಿನಲ್ಲಿ ಎಳೆದುಕೊಂಡು ಕಚೇರಿಗೆ ಕರೆದೊಯ್ದು. ಅಲ್ಲಿ ಅವರನ್ನು ಬೆಲ್ಟ್‌ಗಳು ಮತ್ತು ಕಾರ್ ಟೈರ್ ಟ್ಯೂಬ್‌ಗಳಿಂದ ಕ್ರೂರವಾಗಿ ಥಳಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿದ ದೇವೇಗೌಡ – ಸಿದ್ದರಾಮಯ್ಯ ಆರೋಪ
“ನಮ್ಮ ಫೋನ್‌ಗಳು ಮತ್ತು ಕೀಗಳನ್ನು ವಶಪಡಿಸಿಕೊಳ್ಳಲಾಯಿತು. ನಮ್ಮನ್ನು ಬಲವಂತವಾಗಿ ಕಚೇರಿಗೆ ಕರೆದೊಯ್ಯಲಾಯಿತು. ನಮ್ಮ ಸ್ವಂತ ಇನ್‌ಸ್ಟಾಗ್ರಾಮ್ ಪುಟವನ್ನು ಪ್ರಾರಂಭಿಸಲು ನಾವು ಉದ್ದೇಶಿಸಿದ್ದರಿಂದ ಬೆಲ್ಟ್‌ಗಳು ಮತ್ತು ಟೈರ್ ಟ್ಯೂಬ್‌ಗಳಿಂದ ಥಳಿಸಲಾಗಿದೆ” ಎಂದು ಓಬೇಧ್ ಹೇಳಿದ್ದಾರೆ.
ಇದರ ನಂತರ ಸಂತ್ರಸ್ತರಲ್ಲಿ ಉದ್ಯೋಗದ ಹುಡುಕಾಟದಲ್ಲಿದ್ದ ಇತರ ಇಬ್ಬರು ತಂಡದ ಸದಸ್ಯರನ್ನು ಕರೆಸುವಂತೆ ಒತ್ತಾಯಿಸಲಾಯಿತು. ಅವರನ್ನೂ ಕ್ರೂರವಾಗಿ ಥಳಿಸಲಾಯಿತು. ಈ ಮಧ್ಯೆ ತರುಣ್ ಅವರಿಗೆ ಬೆತ್ತಲೆಯಾಗಿ ಥಳಿಸಲಾಯಿತು ಎಂದು ಓಬೇಧ್ ಹೇಳಿದ್ದಾರೆ. ಇಷ್ಟೆ ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂದು ಆರೋಪಿಗಳು ಸಂತ್ರಸ್ತರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಎಸ್‌ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯಿದೆ ಹಾಗೂ ಐಪಿಸಿ ಸೆಕ್ಷನ್ 365 (ಅಪಹರಣ), 342 (ತಪ್ಪಾದ ಬಂಧನ), 392 (ದರೋಡೆ) ಮತ್ತು 509 (ಮಹಿಳೆಯ ಘನತೆಗೆ ಅವಮಾನ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮೆಡಿಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಬ್ರಿಟಿಷರಿಗೆ ಸಹಾಯ ಮಾಡಿದ್ದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಆಗಲು ಹೇಗೆ ಸಾಧ್ಯ?