ಹೈದರಾಬಾದ್: ರಾಷ್ಟ್ರ ರಾಜಕಾರಣದಲ್ಲಿ ತಳವೂರುವ ನಿಟ್ಟಿನಲ್ಲಿ 2024ರ ಚುನಾವಣೆಗೂ ಮುನ್ನ ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಸ್ಥಾಪನೆಗೆ ಮುಂದಾಗಿರು ತೆಲಂಗಾಣ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಷ್ಟ್ರೀಯ ಪಕ್ಷವಾಗಿ ʻಭಾರತ್ ರಾಷ್ಟ್ರೀಯ ಸಮಿತಿ ಘೋಷಣೆ ಮಾಡಿದ್ದು ದಸರಾದಂದು ಲೋಕಾರ್ಪಣೆಯಾಗಲಿದೆ ಎಂದಿದ್ದಾರೆ.
ದೇಶದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಎದುರಿಸಲು ವಿರೋಧ ಪಕ್ಷಗಳ ಒಗ್ಗಟ್ಟಿನ ಬಣದ ಮುಖ್ಯಸ್ಥರಾಗುವರು ಎಂಬ ನಾಯಕರ ಪಟ್ಟಿಯಲ್ಲಿರುವ ಕೆ ಚಂದ್ರಶೇಖರ್ ರಾವ್ ತಮ್ಮದೇ ರಾಷ್ಟ್ರೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ಇದರೊಂದಿಗೆ, ಪ್ರತ್ಯೇಕ ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆಯೇ ಅಥವಾ ತೆಲಂಗಾಣ ರಾಷ್ಟ್ರ ಸಮಿತಿ ಅಥವಾ ಟಿಆರ್‌ಎಸ್ ಪಕ್ಷವನ್ನೇ ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸಿ ಅದಕ್ಕೆ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರು ನಾಮಕರಣ ಮಾಡಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಟಿಆರ್‌ಎಸ್ ಮೂಲಗಳು ತಿಳಿಸಿವೆ.
ಈ ಹಿಂದೆಯೇ, ಏಪ್ರಿಲ್ 27ರಂದು ನಡೆದ ಟಿಆರ್‌ಎಸ್ ಸಭೆಯಲ್ಲಿ ಕೆ ಚಂದ್ರಶೇಖರ್ ರಾವ್, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ನಿಟ್ಟಿನಲ್ಲಿ ಟಿಆರ್‌ಎಸ್ ಅನ್ನು ಬಿಆರ್‌ಎಸ್ ಆಗಿ ಪರಿವರ್ತಿಸುವ ಸುಳಿವು ನೀಡಿದ್ದರು. ಈ ಬಗ್ಗೆ ಜೂನ್ ಮೂರನೇ ವಾರದಲ್ಲಿ ಟಿಆರ್‌ಎಸ್ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುವ ಬಗ್ಗೆ ಕೆಸಿಆರ್ ಮಾತನಾಡಿದ್ದರು. ಆದರೆ ಇದುವರೆಗೂ ಅದರಲ್ಲಿ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಬಿಆರ್‌ಎಸ್ ಪಕ್ಷದ ವಿಚಾರವನ್ನು ಅವರು ಮತ್ತೆ ಮತ್ತೆ ಮುಂದೂಡುತ್ತಲೇ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ದಸರಾ ದಿನದಂದು ರಾಷ್ಟ್ರೀಯ ಪಕ್ಷ ಸ್ಥಾಪಿಸಿದ ಬಳಿಕ ಚಂದ್ರಶೇಖರ್ ರಾವ್ ಅವರು ಪಕ್ಷದ ಸಮಿತಿಗಳನ್ನು ರಚಿಸಲು ಹಾಗೂ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಲು ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಜತೆಗೂಡಿಸಲು ಅವುಗಳ ನಾಯಕರನ್ನು ಕೂಡ ಭೇಟಿ ಮಾಡಲಿದ್ದಾರೆ. ವಿವಿಧ ರಾಜ್ಯಗಳಲ್ಲಿನ ಬಿಜೆಪಿಯೇತರ ಪಕ್ಷಗಳ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.