ನವದೆಹಲಿ: ತೆಲಂಗಾಣದ ನಿಕಟಪೂರ್ವ ಆಡಳಿತಪಕ್ಷ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್)ಗೆ ಲೋಕಸಭೆ ಚುನಾವಣೆಗೆ ಮುನ್ನ ಭಾರಿ ಹಿನ್ನಡೆ ಅನುಭವಿಸಿದ್ದು, ಪೆದ್ದಪಲ್ಲಿ ಸಂಸದ ಬಿ. ವೆಂಕಟೇಶ್ ನೇತಾ ಅವರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಲು ರೇವಂತ್ ರೆಡ್ಡಿ ನೇತೃತ್ವದ ಪ್ರದೇಶ ಚುನಾವಣಾ ಸಮಿತಿ (ಪಿಇಸಿ) ಸಭೆಗೆ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ.
ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಮುಖ್ಯಮಂತ್ರಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ.ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ವೆಂಕಟೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಸಿಎಂನಿಂದ ಸೋನಿಯಾ ಗಾಂಧಿ ಭೇಟಿ | ರಾಜ್ಯದಿಂದ ಚುನಾವಣೆ ಸ್ಪರ್ಧಿಸುವಂತೆ ವಿನಂತಿಸಿದ ರೇವಂತ್ ರೆಡ್ಡಿ
ಟಿಕೆಟ್ ಆಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಲು ರೇವಂತ್ ರೆಡ್ಡಿ ನೇತೃತ್ವದ ಪ್ರದೇಶ ಚುನಾವಣಾ ಸಮಿತಿ (ಪಿಇಸಿ) ಸಭೆಗೆ ಮೊದಲು ವೆಂಕಟೇಶ್ ಅವರು ಕಾಂಗ್ರೆಸ್‌ಗೆ ಸೇರಿದ್ದಾರೆ. ರಾಜ್ಯದ ಎಲ್ಲಾ 17 ಲೋಕಸಭಾ ಕ್ಷೇತ್ರಗಳಿಂದ ಪಕ್ಷಕ್ಕೆ ಒಟ್ಟು 306 ಅರ್ಜಿಗಳು ಬಂದಿವೆ ಎಂದು ವರದಿಯಾಗಿದೆ.
ಈ ನಡುವೆ, ಚೆನ್ನೂರಿನ ಕಾಂಗ್ರೆಸ್ ಶಾಸಕ ಗದ್ದಂ ವಿವೇಕ್ ಪುತ್ರ ಗದ್ದಂ ವಂಶಿ ಪೆದ್ದಪಲ್ಲಿಯಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ಹೇಳಿವೆ. ವಿವೇಕ್ ಅವರು ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು ಮತ್ತು ಚೆನ್ನೂರಿನಿಂದ ಟಿಕೆಟ್ ಪಡೆದಿದ್ದರು.
2009ರಲ್ಲಿ ವಿವೇಕ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪೆದ್ದಪಲ್ಲಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ತಂದೆ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಜಿ. ವೆಂಕಟ್ ಸ್ವಾಮಿ ಪೆದ್ದಪಲ್ಲಿಯಿಂದ ನಾಲ್ಕು ಬಾರಿ ಸಂಸದರಾಗಿದ್ದರು. ಸಧ್ಯ ಕಾಂಗ್ರೆಸ್ ಸೇರಿರುವ ವೆಂಕಟೇಶ್ ಅವರು 2019 ರಲ್ಲಿ ಪೆದ್ದಪಲ್ಲಿ ಕ್ಷೇತ್ರದಿಂದ ಚುನಾಯಿತರಾಗಿದ್ದರು. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಗಮ ಚಂದ್ರಶೇಖರ್ ಅವರನ್ನು 95,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.
2019 ರಲ್ಲಿ ಬಿಆರ್‌ಎಸ್ ಒಂಬತ್ತು ಲೋಕಸಭಾ ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದಿತ್ತು. ಬಿಜೆಪಿ ನಾಲ್ಕು ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಗಳಿಸಿತ್ತು. ಜೊತೆಗೆ ಎಐಎಂಐಎಂ ಹೈದರಾಬಾದ್ ಅನ್ನು ಉಳಿಸಿಕೊಂಡಿತ್ತು.
ವಿಡಿಯೊ ನೋಡಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತ ತಿರುಚಿದ ಚುನಾವಣಾ ಅಧಿಕಾರಿ – ವಿಡಿಯೋ ಬಹಿರಂಗ! Janashakthi Media