ಕೋವಿಡ್‌ ಲಸಿಕೆಗೆ ರೂ.900 ದರ ನಿಗದಿ: ಸಂಸದ ತೇಜಸ್ವಿ ಸೂರ್ಯನಿಂದ ಪ್ರಚಾರ

ಬೆಂಗಳೂರು: ಬಿಜೆಪಿಯಲ್ಲಿರುವವರು ಎಲ್ಲರೂ ಪ್ರಚಾರ ಪ್ರಿಯರೇ ಆಗಿದ್ದಾರೆ. ಆಗಬೇಕಾದ ತುರ್ತು ಕಾರ್ಯಗಳ ಕಡೆ ಗಮನ ಹರಿಸದ ಬಿಜಪಿ ಪಕ್ಷದ ಮುಖಂಡರು ಒಂದಲ್ಲ ಒಂದು ಪ್ರಚಾರ ಹಮ್ಮಿಕೊಳ್ಳಬೇಕು. ಚುನಾಯಿತ ಪ್ರತಿನಿಧಿಗಳಂತೂ ತಮ್ಮ ಕಾರ್ಯವ್ಯಾಪ್ತಿಯ ಕೆಲಸ ನಿರ್ವಹಿಸದಿದ್ದರೂ ಪ್ರಚಾರವಂತೂ ಪಡೆಯುತ್ತಿದ್ದಾರೆ.

ಈ ಸಾಲಿಗೆ ಪದೇ ಪದೇ ಕೇಳಿ ಬರುತ್ತಿರುವ ಹೆಸರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೆಸರು. ‘ಸಂಸದರ ಸಹಯೋಗದಲ್ಲಿ ನಡೆಯುತ್ತಿರುವ ಲಸಿಕೆ ವಿತರಣೆ ಅಭಿಯಾನದಲ್ಲಿ ಪ್ರತಿ ಡೋಸ್‌ಗೆ ₹ 900 ಪಾವತಿಸಬೇಕು ಎನ್ನಲಾಗಿದೆ ಎಂದು ಪ್ರಚಾರದ ಫಲಕವೊಂದು ಈಗ ಬಳಷ್ಟು ಸದ್ದು ಮಾಡುತ್ತಿದೆ.

ಇದನ್ನು ಓದಿ: ಬೆಡ್ ಬ್ಲಾಕಿಂಗ್ ಕೇಸ್ – ಸತೀಶ್ ರೆಡ್ಡಿ ಆಪ್ತ ಅರೆಸ್ಟ್

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಬೆಂಬಲಿತ ಖಾಸಗಿ ಒಡೆತನದ ವಾಸವಿ ಆಸ್ಪತ್ರೆಯವರು ಜಯನಗರ 5ನೇ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಲಸಿಕೆ ವಿತರಣೆ ಮಾಡಲಿದ್ದಾರೆ. ಇಲ್ಲಿ ₹ 900ಕ್ಕೆ ಕೋವಿಶೀಲ್ಡ್ ಲಸಿಕೆ ಲಭ್ಯವಾಗಲಿದೆ. ಎಂದು ತಮ್ಮ ಭಾವಚಿತ್ರವಿರುವ ಫಲಕವಿದೆ.

ಕೋವಿಡ್‌ ಸೋಂಕಿತರಿಗೆ ಉಚಿತವಾಗಿ ಲಸಿಕೆ ನೀಡುವ ಬದಲು ಬಿಜೆಪಿ ಸಂಸದರೇ ಲಸಿಕೆಯ ದುಬಾರಿ ಮಾರಾಟಕ್ಕೆ ಪ್ರಚಾರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಲಸಿಕೆ ಪೂರೈಕೆಯನ್ನು ಸಮಾನತೆಯ ಹಕ್ಕಿನಡಿ ಪರಿಗಣಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ

‘ಈಗಾಗಲೇ ನೋಂದಣಿ ಪ್ರಾರಂಭ ಮಾಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ನೀಡಲು 15 ಸಾವಿರ ಲಸಿಕೆ ಲಭ್ಯ ಇದೆ’ ಎಂದು ಆಸ್ಪತ್ರೆ ಹೇಳಿಕೊಂಡಿದೆ.

ಸಂಸದ ತೇಜಸ್ವಿ ಸೂರ್ಯ ನಡೆಗೆ ತೀವ್ರವಾದ ಆಕ್ರೋಶ ವ್ಯಕ್ತವಾಗಿದೆ.

ಜಯನಗರ ಶಾಸಕಿ  ಸೌಮ್ಯ ರೆಡ್ಡಿ ಅವರು ಪ್ರತಿಕ್ರಿಯಿಸಿ ರಾಜ್ಯ ಸರಕಾರ ಹಾಗೂ ಬಿಬಿಎಂಪಿ ಬಳಿ ಜನರಿಗೆ ನೀಡಲು ಲಸಿಕೆಗಳು ಲಭ್ಯವಿಲ್ಲ. ಆದರೆ, ಚುನಾಯಿತ ಪ್ರತಿನಿಧಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ರೂ.900/- ರಂತೆ ದುಬಾರಿ ಬೆಲೆಗೆ ಲಸಿಕೆ ಪಡೆಯಲು ಪ್ರಚಾರ ಕೈಗೊಂಡಿದ್ದಾರೆ. ಅಲ್ಲದೆ, ಹಿಂದಿನ ದಿನ ಲಸಿಕೆಗೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿ ಜಯನಗರ ವ್ಯಾಪ್ತಿಯಲ್ಲಿ ಲಸಿಕೆಗಳ ಕೊರತೆ ಇರುವುದನ್ನು ಸರಕಾರ ಸ್ಪಷ್ಟ ಪಡಿಸಿರುವುದರಿಂದ ಕೋವಿಡ್‌ ಲಸಿಕೆಗಳು ಲಭ್ಯವಿರುವುದಿಲ್ಲ. ದಯಮಾಡಿ ಸಹಕರಿಸಬೇಕೆಂದು ಟ್ವೀಟ್‌ ಮಾಡಿದ್ದರು. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳು ಲಭ್ಯವಿದೆ. ದುಬಾರಿ ಬೆಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದು ಫಲಕಗಳು ರಾರಾಜಿಸುತ್ತಿವೆ.

ಖಾಸಗಿ ಆಸ್ಪತ್ರೆಗಳಿಗೆ ಅಧಿಕ ಶುಲ್ಕ ಪಾವತಿಸಿ, ಎಲ್ಲರಿಗೂ ಲಸಿಕೆ ಪಡೆಯಲು ಸಾಧ್ಯವಾಗುವುದಿಲ್ಲ. ತಮ್ಮ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಉಚಿತವಾಗಿ ಲಸಿಕೆ ಒದಗಿಸಬೇಕು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ದೊರೆಯುತ್ತಿಲ್ಲ. ಆದರೆ, ಖಾಸಗಿ ಕೇಂದ್ರಗಳಿಗೆ ಲಸಿಕೆ ಪೂರೈಕೆಯಾಗುತ್ತಿದೆ. ಇದು ಹೇಗೆ ಸಾಧ್ಯ’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ್ ಅಯ್ಯರ್ ಪ್ರಶ್ನಿಸಿದರು.

’ಖಾಸಗಿ ಕ್ಷೇತ್ರದಲ್ಲಿ ಈ ರೀತಿ ಲಸಿಕೆಗಳನ್ನು ನೀಡುವುದು ಸಂವಿಧಾನದ ಅನುಚ್ಛೇದ 14ರ ಸ್ಪಷ್ಟ ಉಲ್ಲಂಘನೆ. ಸಮಾಜದಲ್ಲಿ ತಾರತಮ್ಯ ಇರಬಾರದು ಎಂದು 15ನೇ ಅನುಚ್ಚೇದ ಹೇಳುತ್ತದೆ. ಸಂಸದರ ಈ ನಡೆ ಸಂವಿಧಾನ ವಿರೋಧಿ‘ ಎಂದು ವಕೀಲ ವಿನಯ್‌ ಶ್ರೀನಿವಾಸ್‌ ಪ್ರತಿಪಾದಿಸಿದರು.

’ಪೋಲಿಯೊ ಲಸಿಕೆ ಸೇರಿದಂತೆ ಈ ಹಿಂದೆ ಯಾವುದೇ ಲಸಿಕೆಗೆ ಹಣ ವಸೂಲಿ ಮಾಡಿಲ್ಲ. ಸಚಿವರು ಕ್ಷೇತ್ರದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಆದ್ಯತೆ ನೀಡಬೇಕಿತ್ತು. ಅದರ ಬದಲು ದುಬಾರಿ ದರದಲ್ಲಿ ಶ್ರೀಮಂತರಿಗೆ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಕ್ಷೇತ್ರದ ಒಬ್ಬನೇ ಒಬ್ಬ ಕೊಳೆಗೇರಿ ನಿವಾಸಿಗೆ ಸಂಸದರು ಈವರೆಗೆ ಲಸಿಕೆ ಕೊಡಿಸಿಲ್ಲ. ಅದರ ಕೊರತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಂದೇ ಒಂದು ಪತ್ರ ಬರೆದಿಲ್ಲ. ಇದು ಸಂಸದರ ಘೋರ ವೈಫಲ್ಯ. ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

’ಜನರು ಜೀವ ಉಳಿಸಲು ಉಚಿತವಾಗಿ ಲಸಿಕೆ ನೀಡಬೇಕು ಎಂದು ಹೈಕೋರ್ಟ್‌ ಸಹ ಹೇಳಿದೆ. ಆದರೆ, ಸಂಸದರು ಖಾಸಗಿ ಆಸ್ಪತ್ರೆ ಜತೆಗೆ ಸಹಯೋಗ ಮಾಡಿ ಜನರ ಸುಲಿಗೆ ಮಾಡಲು ಅವಕಾಶ ಕಲ್ಪಿಸಿದ್ದಾರೆ‘ ಎಂದರು.

ತಮ್ಮದೇ ಸರಕಾರದ ಆಡಳಿತ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಗೆ ನೀಡುವಲ್ಲಿ ದೊಡ್ಡ ಅವ್ಯವಹಾರ ನಡೆಯುತ್ತಿದೆ ಎಂದು ಕೆಲವು ದಿನಗಳ ಹಿಂದೆ ಕೋವಿಡ್‌ ವಾರ್‌ರೂಂ ಗೆ ಕೆಲ ಬಿಜೆಪಿ ಶಾಸಕರ ಜೊತೆ ಧಾಳಿ ಮಾಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಈಗ ದುಬಾರಿ ಶುಲ್ಕ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮತ್ತೊಂದು ಪ್ರಚಾರದಲ್ಲಿ ತೊಡಗಿದ್ದಾರೆ.

“ಶಾಲಿನಿ ಮೈದಾನದಲ್ಲಿ ವಾಸವಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ 900 ರೂಪಾಯಿ ತೆಗೆದುಕೊಳ್ಳುವ ಮೂಲಕ ಲಸಿಕೆ ಹಾಕುತ್ತಾರೆ. ಸಂಪೂರ್ಣ ಕಾರ್ಯಕ್ರಮದ ಕ್ರೆಡಿಟ್ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೆಗೆದುಕೊಳ್ಳುತ್ತಾರೆ. ಬಿಬಿಎಂಪಿಯಲ್ಲಿ ಲಸಿಕೆ ಇಲ್ಲದಿದ್ದಾಗ ಖಾಸಗಿ ಆಸ್ಪತ್ರೆಯನ್ನು ಸಂಸದರು ಹೇಗೆ ಉತ್ತೇಜಿಸಬಹುದು..? ಈ ಕೆಲಸಕ್ಕೆ ಅವರು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ..? ವಾಸವಿ ಆಸ್ಪತ್ರೆ ಲಸಿಕೆ ಖರೀದಿ ಸರಕುಪಟ್ಟಿ ತೋರಿಸಬೇಕು” ಎಂದು ಭೂಷಣ್ ಎಂಬುವರು ಟ್ವೀಟ್ ಮಾಡಿದ್ದಾರೆ.

“ತೇಜಸ್ವಿ ಸೂರ್ಯನಂತಹ ಬಿಜೆಪಿ ಸಂಸದರು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಪ್ರತಿ ಡೋಸ್‌ಗೆ 900 ರೂಪಾಯಿ ಶುಲ್ಕ ವಿಧಿಸಬಹುದು. ಆದರೆ ಕಾಂಗ್ರೆಸ್ ಸಂಸದರು, ಶಾಸಕರು, ಸಂಸದರು, ಎಂಎಲ್‌ಎಡಿಎಸ್ ಮತ್ತು ಪಾರ್ಟಿ ಫಂಡ್‌ಗಳನ್ನು ಬಳಸಿಕೊಂಡು ಲಸಿಕೆ ಖರೀದಿಸಲು ಸರ್ಕಾರ ಏಕೆ ಅವಕಾಶ ನೀಡುತ್ತಿಲ್ಲ..? ಈ ಪಕ್ಷಪಾತ ಏಕೆ..?” ಎಂದು ಕಾಂಗ್ರೆಸ್ ಯುವ ನಾಯಕ ಶ್ರೀವತ್ಸಾ ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *