ತೀಸ್ತಾ ಸೆಟಲ್ವಾಡ್‌ ಜಾಮೀನು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ನವದೆಹಲಿ : ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಶನಿವಾರ ತಡರಾತ್ರಿ ರಕ್ಷಣೆ ನೀಡಿದೆ. ಗುಜರಾತ್ ಸರ್ಕಾರದ ವಿರುದ್ಧ ನಕಲಿ ಸಾಕ್ಷಿ ಸೃಷ್ಟಿಸಿದ್ದಾರೆ ಎಂಬ ಪ್ರಕರಣದಲ್ಲಿ ಅವರು ಸಲ್ಲಿಸಿದ್ದ ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶಕ್ಕೆ ಒಂದು ವಾರ ತಡೆ ನೀಡಿದೆ.

ತಡರಾತ್ರಿಯ ವಿಶೇಷ ವಿಚಾರಣೆಯಲ್ಲಿ, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರ ಪೀಠವು ಸೆಟಲ್ವಾಡ್ ಅವರಿಗೆ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ನಿರಾಕರಿಸಿರುವುದನ್ನು ಪ್ರಶ್ನಿಸಿ, ಸಾಮಾನ್ಯ ಕ್ರಿಮಿನಲ್ ಕೂಡ ಕೆಲವು ರೀತಿಯ ಮಧ್ಯಂತರ ಪರಿಹಾರಕ್ಕೆ ಅರ್ಹರು ಎಂದು ಹೇಳಿದರು.

ಸೆಟಲ್ವಾಡ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವ ಕುರಿತು ದ್ವಿಸದಸ್ಯ ರಜಾಕಾಲದ ಪೀಠವು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಂತರ ತ್ರಿಸದಸ್ಯ ಪೀಠವು ವಿಶೇಷ ಅಧಿವೇಶನದಲ್ಲಿ ಈ ವಿಷಯವನ್ನು ಆಲಿಸಿತು.

ಏನಿದು ಪ್ರಕರಣ?: 2002ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸಲು ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪವನ್ನು ತೀಸ್ತಾ ಸೆಟಲ್ವಾಡ್ ಎದುರಿಸುತ್ತಿದ್ದಾರೆ. ಈ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡಿರುವ ಗುಜರಾತ್​ ಪೊಲೀಸರು ಕಳೆದ ವರ್ಷ ಜೂನ್ 25ರಂದು ಬಂಧಿಸಿದ್ದರು. ನಂತರ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯ ಹಾಗೂ ಹೈಕೋರ್ಟ್​ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಆಗ ಮಧ್ಯಂತರ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 2ರಂದು ಸುಪ್ರೀಂ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದರಿಂದ ಸೆಪ್ಟೆಂಬರ್​ 3ರಂದು ಸಬರಮತಿ ಜೈಲಿನಿಂದ ತೀಸ್ತಾ ಬಿಡುಗಡೆಗೊಂಡಿದ್ದರು. ಇಂದು ಮತ್ತೆ ತೀಸ್ತಾ ಸೆಟಲ್ವಾಡ್ ಅರ್ಜಿ ಗುಜರಾತ್​ ಹೈಕೋರ್ಟ್​ ಮುಂದೆ ಬಂದಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರ ಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್ ಮತ್ತೆ ಸುಪ್ರೀಂ ಮೊರೆ ಹೋಗಿದ್ದರು.

Donate Janashakthi Media

Leave a Reply

Your email address will not be published. Required fields are marked *