ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ

ಮಂಡ್ಯ: ಶಾಲೆಗೆ ಮೊಬೈಲ್​ ತಂದ ವಿದ್ಯಾರ್ಥಿನಿಗೆ ಮುಖ್ಯಶಿಕ್ಷಕಿ ಬಟ್ಟೆ ಬಿಚ್ಚಿಸಿ ಶಿಕ್ಷೆ ಕೊಟ್ಟಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಒಂದು ವಾರದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಣಂಗೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಸ್ನೇಹಲತಾ, ತರಗತಿಗೆ ಮೊಬೈಲ್ ತಂದಿದ್ದ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಬೇರೆ ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಆರೋಪ ಕೇಳಿ ಬಂದಿದೆ.

ಮುಖ್ಯ ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದೂರು ನೀಡಲು ವಿದ್ಯಾರ್ಥಿನಿ ಪೋಷಕರು ನಿರ್ಧರಿಸಿದ್ದಾರೆ.

ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸೆ : ಈ ಅಮಾನವೀಯ ಘಟನೆ ಗಣಂಗೂರು ಶಾಲೆಯಲ್ಲಿ ಕಳೆದ ಒಂದು ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತರಗತಿಗೆ ಮೊಬೈಲ್ ತಂದಿದ್ದಕ್ಕೆ ಕುಪಿತರಾದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನ ಬೇರೆ ಕೊಠಡಿಗೆ ಕರೆದೋಯ್ದು ಈ ರೀತಿ ಅಮಾನವೀಯವಾಗಿ ಹಿಂಸಿಸಿದರು ಎಂದು ಬಾಲಕಿ ಹೇಳಿದ್ದಾಳೆ.

” ಮರೆತು ಶಾಲೆಗೆ ಮೊಬೈಲ್​ ತಂದಿದ್ದೆ. ಮಧ್ಯಾಹ್ನ ಊಟದ ಸಂದರ್ಭದಲ್ಲಿ ಟೀಚರ್​ ಫೋನ್​ ತಂದಿರುವವರೆಲ್ಲಾ ನೀಡಿ ಎಂದು ಕೇಳಿದರು. ಹುಡುಗರನ್ನೆಲ್ಲಾ ಹೊರ ಕಳುಹಿಸಿ, ಬಾಲಕಿಯರ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿಸಿದರು. ಕೊಠಡಿಗೆ ಕರೆದೊಯ್ದುರು. ನನ್ನ ಸ್ನೇಹಿತೆಯ ಬಟ್ಟೆಗಳನ್ನೆಲ್ಲಾ ಹರಿದು ಹಾಕಿದರು. ಚೆನ್ನಾಗಿ ಹೊಡೆದರು. ಫೋನ್​ ಕೊಡಲಿಲ್ಲ ಎಂದರೆ ಮತ್ತೆ ಬಟ್ಟೆ ಬಿಚ್ಚಿಸಿ ಹುಡುಗರಿಂದ ಚೆಕ್​ ಮಾಡಿಸುತ್ತೇನ ಎಂದು ಬೆದರಿಸಿದರು” ಎಂದು ಬಾಲಕಿ ಹೇಳಿದ್ದಾಳೆ.

ಊಟದ ಸಮಯವಾದರೂ ನಮ್ಮನ್ನು ಬಟ್ಟೆಯಿಲ್ಲದೆ ನೆಲದ ಮೇಲೆ ಕೂರಿಸಿ, ಜೋರಾಗಿ ಫ್ಯಾನ್​ ಹಾಕಿದ್ದರು. ಚಳಿಯಾಗುತ್ತಿದೆ ಎಂದು ಎಷ್ಟೂ ಕೇಳಿಕೊಂಡರೂ ಬಿಡಲಿಲ್ಲ. ನೀರು ಕುಡಿಯಲೂ ಸಹಾ ಬಿಡಲಿಲ್ಲ. ಶಾಲೆಯ ಆಯಾ ಬಂದು ಫ್ಯಾನ್ ಆಫ್​ ಮಾಡಿದ್ರು. 4:30ಕ್ಕೆ ನಮ್ಮನ್ನೆಲ್ಲಾ ಊಟಕ್ಕೆ ಕಳುಹಿಸಿದ್ರು, 5 ಗಂಟೆಗೆ ಮನೆಗೆ ಹೋದೆವು ಎಂದು ಕಿರುಕುಳಕ್ಕೆ ಒಳಗಾದ ಬಾಲಕಿ ಮಾಧ್ಯಮದ ಮುಂದೆ ನೋವು ತೋಡಿಕೊಂಡಿದ್ದಾಳೆ.

ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಶಾಲೆಗೆ ಭೇಟಿ ನೀಡಿ ಬಾಲಕಿಯಿಂದ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ, ಮಂಡ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಡಿಡಿಪಿಐ ಜವರೇಗೌಡ ಮಾತನಾಡಿದ್ದು, ಅವರು ಕ್ಲಾಸ್ ಒನ್ ಶಿಕ್ಷಕಿ ಆಗಿದ್ದಾರೆ. ಮೇಲ್ನೋಟಕ್ಕೆ ಪ್ರಕರಣ ತಪ್ಪು ಎಂದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆಯುತ್ತಿದ್ದೇವೆ ಎಂದಿದ್ದಾರೆ.

ಇವರು ಶಿಕ್ಷಕಿಯಾಗಲು ಅರ್ಹರಲ್ಲ, ಮಕ್ಕಳಿಗೆ ಹಿಂಸಿ ನೀಡಿ ಆನಂದಿಸುವ ಕ್ರೂರ ಗುಣ, ಮಾನವೀಯತೆ ಇಲ್ಲದಿರುವ ಈ ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡಿ, ಕಾನೂನು ಕ್ರಮ ಜರುಗಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *