ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹಿಸಿದರೂ ರಾಜ್ಯಕ್ಕೆ ಸಿಗುವ ಪಾಲಿನಲ್ಲಿ ಇಳಿಕೆಯಾಗುತ್ತಿರುವುದರಿಂದ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಇದರ ವಿರುದ್ಧ ದನಿಯೆತ್ತಲು ಅಣಿಯಾಗಿದೆ. 2025-26 ರಿಂದ ಚಟುವಟಿಕೆ ಆರಂಭಿಸಲಿರುವ 16ನೇ ಹಣಕಾಸು ಆಯೋಗದ ಮುಂದೆ ಪ್ರಬಲವಾದ ವಾದ ಮಂಡಿಸಲು “ಅಭಿವೃದ್ಧಿ ಹೊಂದಿದ” ರಾಜ್ಯಗಳನ್ನು ಒಟ್ಟಿಗೆ ತರಲು ಸರ್ಕಾರ ಬಯಸಿದ್ದು, ಅದಕ್ಕಾಗಿ ತನ್ನದೇ ಆದ ವಾದವನ್ನು ರೂಪಿಸಲು ”ವಿಶೇಷ ಕೋಶ”ವನ್ನು ರಚಿಸಲು ಮುಂದಾಗಿದೆ.
15ನೇ ಹಣಕಾಸು ಆಯೋಗದ ಅಧಿಕಾರಾವಧಿಯು 2025-26ರಲ್ಲಿ ಕೊನೆಗೊಳ್ಳಲಿದ್ದು, ಈ ಆಯೋಗದ ಅಡಿಯಲ್ಲಿ ಭಾರಿ ನಷ್ಟ ಅನುಭವಿಸಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ವಿಭಜಿಸಬಹುದಾದ ತೆರಿಗೆಗಳಲ್ಲಿ 4.71% ಪಾಲನ್ನು ನೀಡಿತ್ತು, ಆದರೆ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯದ ಪಾಲು 3.64% ಕ್ಕೆ ಇಳಿದಿದೆ. 15 ನೇ ಆಯೋಗದ ಅಡಿಯಲ್ಲಿ ರಾಜ್ಯದಕ್ಕೆ ಉಂಟಾದ ಪಾಲಿನ ಕಡಿತವು ಕಳೆದ ಮೂರು ವರ್ಷಗಳಲ್ಲಿ 26,140 ಕೋಟಿ ರೂಪಾಯಿಗಳಷ್ಟು ಕೊರತೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: ಇರಾನ್‌ನಲ್ಲಿ ಭಯೋತ್ಪಾದಕ ದಾಳಿ | 70 ಕ್ಕೂ ಹೆಚ್ಚು ಜನರ ಸಾವು
ಕೇಂದ್ರ ಸರ್ಕಾರವು ಮಾಜಿ ನೀತಿ ಆಯೋಗದ ಉಪಾಧ್ಯಕ್ಷ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಆಯೋಗವು 2026ರ ಏಪ್ರಿಲ್ 1 ರಿಂದ ಐದು ವರ್ಷಗಳ ಅವಧಿಯನ್ನು ಒಳಗೊಂಡಿರುತ್ತದೆ.
“16ನೇ ಆಯೋಗದಲ್ಲಿ ಹೆಚ್ಚಿನ ನ್ಯಾಯಾಯುತ ಪಾಲು ಪಡೆಯಲು ಬೇರೆ ರಾಜ್ಯಗಳ ಸಹಕಾರ ಪಡೆಯುತ್ತೇವೆ, ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರಾದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ ಎಂದು ಡೆಕ್ಕನ್‌ಹೆರಾಲ್ಡ್ ವರದಿ ಮಾಡಿದೆ. ಕೇರಳ, ತಮಿಳುನಾಡು ಮತ್ತು ಸ್ವಲ್ಪ ಮಟ್ಟಿಗೆ ಪಶ್ಚಿಮ ಬಂಗಾಳದಂತಹ ರಾಜ್ಯಗಳು ನಷ್ಟವನ್ನು ಅನುಭವಿಸಿದವು ಎಂದು ಅವರು ಹೇಳಿದ್ದಾರೆ.
“16ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಬಹಳ ಮುಖ್ಯವಾಗಿದೆ. ನಾವು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಬೇಕು. ತೆರಿಗೆಗಳ ವಿಕೇಂದ್ರೀಕರಣದಲ್ಲಿ ಈಗ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಯಾಗದ ರಾಜ್ಯಗಳ ನಡುವೆ ಅಸಮಾನತೆ ಇದೆ” ಎಂದು ರಾಯರೆಡ್ಡಿ ಹೇಳಿದ್ದಾರೆ. ಶೀಘ್ರದಲ್ಲೇ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ ವಾದದ ಮಂಡಿಸಲು ಕೆಲಸವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದ್ದಾರೆ.
“ಕರ್ನಾಟಕದಂತಹ ರಾಜ್ಯವು ಆರ್ಥಿಕ ಎಂಜಿನ್ ಆಗಿದ್ದರೆ ಉತ್ತರದ ರಾಜ್ಯಗಳು ರಾಜಕೀಯ ಎಂಜಿನ್‌ಗಳಾಗಿವೆ. ಈ ರಾಜಕೀಯ ಎಂಜಿನ್‌ಗಳನ್ನು ಚಲಾಯಿಸಲು ಆರ್ಥಿಕ ಎಂಜಿನ್‌ಗಳ ಇಂಧನವನ್ನು ಕಡಿತಗೊಳಿಸಲಾಗುತ್ತಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ. ತಮ್ಮ ಮೊದಲ ಅಧಿಕಾರಾವಧಿಯ 2018ರ ಮಾರ್ಚ್ ವೇಳೆ ಸಿದ್ದರಾಮಯ್ಯ ಅವರು ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ತೆರಿಗೆ ಕಡಿತ ಮಾಡುವ ಬಗ್ಗೆ ಮಾತನಾಡಿದ್ದರು. “ಐತಿಹಾಸಿಕವಾಗಿ, ದಕ್ಷಿಣ ಭಾರತವುವು ಉತ್ತರ ಭಾರತಕ್ಕೆ ಸಬ್ಸಿಡಿ ನೀಡುತ್ತಿದೆ.” ಎಂದು ಫೇಸ್‌ಬುಕ್‌ನಲ್ಲಿ ಬರೆದು ಗಮನಸೆಳೆದಿದ್ದರು.
16ನೇ ಹಣಕಾಸು ಆಯೋಗಕ್ಕೆ ತನ್ನ ವಾದವನ್ನು ಮಂಡಿಸಲು ಸರ್ಕಾರ ವಿಶೇಷ ಕೋಶವನ್ನು ರಚಿಸುತ್ತಿದೆ. ಇದು ಶುಕ್ರವಾರ ಸಚಿವ ಸಂಪುಟದ ಮುಂದೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಈ ಕೋಶದಲ್ಲಿ 14ನೇ ಹಣಕಾಸು ಆಯೋಗದ ಮಾಜಿ ಸದಸ್ಯ ಎಂ ಗೋವಿಂದ ರಾವ್, 6ನೇ ರಾಜ್ಯ ವೇತನ ಆಯೋಗದ ನೇತೃತ್ವ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ ಆರ್ ಶ್ರೀನಿವಾಸ ಮೂರ್ತಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ನರೇಂದರ್ ಪಾಣಿ ಅವರಂತಹ ಅರ್ಥಶಾಸ್ತ್ರಜ್ಞರನ್ನು ಹೊಂದಿರುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ.
ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ