ಮಡಿಕೇರಿ: ಟೋಕಿಯೋ ಒಲಿಂಪಿಕ್ ನಲ್ಲಿ ಭಾರತದ ಹಾಕಿ ತಂಡದ ಸಹಾಯಕ ಕೋಚ್ ಆಗಿದ್ದ ಕೊಡಗಿನ ಅಂಕಿತಾ ಸುರೇಶ್ ಅವರಿಗೆ ಅದ್ಧೂರಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಕೊಡಗು ಜಿಲ್ಲೆ ಕುಶಾಲನಗರ ಚೆಕ್‍ಪೋಸ್ಟ್ ಬಳಿ ಸ್ಥಳೀಯ ನಾಗರಿಕರು ಅತ್ಯಂತ ಅಭಿಮಾನದಿಂದ ಗೌರವಪೂರ್ವಕವಾಗಿ ಸ್ವಾಗತಿಸಿದರು.
ಅಂಕಿತಾ ಅವರಿಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಪುಸ್ತಕವನ್ನು ಉಡುಗರೆಯಾಗಿ ನೀಡುವುದರೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಸ್ಥಳದಲ್ಲಿದ್ದ ನೂರಾರು ಜನರು ಅಂಕಿತಾ ಮತ್ತು ಹಾಕಿ ತಂಡದ ಎಲ್ಲಾ ಆಟಗಾರರಿಗೆ ಜೈಕಾರ ಹಾಕುವ ಮೂಲಕ ಶುಭಕೋರಿದರು.
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿನ ನಾಗರಿಕರು ಮತ್ತು ಕ್ರೀಡಾ ಪ್ರೇಮಿಗಳು ಅಂಕಿತಾ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ಸುಂಟಿಕೊಪ್ಪದ ಕನ್ನಡ ವೃತ್ತದವರೆಗೆ ಮೆರವಣಿಗೆ ನಡೆಸಿದ ಕ್ರೀಡಾ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಜೊತೆಗೆ ಅವರ ಸ್ವಗ್ರಾಮ ಕಂಬಿಬಾಣೆಯಲ್ಲೂ ಅಂಕಿತಾಗೆ ಸಂಭ್ರಮ ಸಡಗರದಿಂದ ಸ್ವಾಗತಿಸಿದರು.
ಈ ಸಂಧರ್ಭ ಅಂಕಿತಾ ಮಾತನಾಡಿ ʻʻಹಾಕಿ ತಂಡಕ್ಕೆ ಆಯ್ಕೆಯಾಗಿದ್ದು ಒಮ್ಮೆಲೇ ಆಶ್ಚರ್ಯಗೊಂಡಿತ್ತು. ಹಾಕಿಯಲ್ಲಿ ಬಲಿಷ್ಠ ಎಂಬುದನ್ನು ಇಡೀ ಪ್ರಪಂಚಕ್ಕೆ ಭಾರತ ತೋರಿಸಿಕೊಟ್ಟಿದೆ. ಟೋಕಿಯೋದಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ರೋಚಕ ಆಟವನ್ನೇ ಆಡಿದೆವು. ಹೀಗಾಗಿ ಸೆಮಿಫೈನಲ್ ತಲುಪಿದೆವು. ನಮ್ಮ ಕಠಿಣವಾದ ಆಟ ನಮ್ಮ ಎದುರಾಳಿ ದೇಶಗಳ ತಂಡಗಳ ಮೇಲೆ ಕಠಿಣ ಸವಾಲು ನೀಡಲು ಸಾಧ್ಯವಾಯಿತು. ನಮ್ಮ ತಂಡದ ಪ್ರತೀ ಆಟಗಾರರು ಎದುರಾಳಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದರು. ಆದರು ನಾವು ಕಂಚಿಗೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಪದಕ ಗೆಲ್ಲಲು ಸಾಧ್ಯವಾಗದೇ ಇದ್ದರೂ ರಾಷ್ಟ್ರದ ಹೆಸರನ್ನು ಉಳಿಸಿದ ಹೆಮ್ಮೆ ನಮಗಿದೆ. ಪ್ರಧಾನಿಯವರು ಎರಡೆರಡು ಬಾರಿ ನಮಗೆ ಕರೆ ಮಾಡಿ ಪ್ರೋತ್ಸಾಹಿಸಿದರು. ಜೊತೆಗೆ ತಂಡದ ಆಟಗಾರ್ತಿ ವಂದನಾ ಕಠಾರಿಯಾ ಅವರನ್ನು ಜಾತಿ ಹೆಸರಿನಿಂದ ಹೀಯಾಳಿಸಿರುವವರ ಹೀನ ನಡವಳಿಕೆ ಸರಿಯಾದ ಕ್ರಮವಲ್ಲʼʼ ಎಂದು ಹೇಳಿದರು.