ಬೋರಗಿ, ಪುರದಾಳದಲ್ಲಿ ತತ್ವಪದಗಳ ಸತ್ಸಂಗ

ಮಲ್ಲಿಕಾರ್ಜುನ ಕಡಕೋಳ

ಯಾದಗಿರಿ ಬಳಿಯ ಅಬ್ಬೆ ತುಮಕೂರಿನ ಅನುಭಾವಿ ವಿಶ್ವಾರಾಧ್ಯರ ಶಿಷ್ಯ ಸಿಂದಗಿ ತಾಲೂಕಿನ ಬೋರಗಿಯ ಭೀಮಾಶಂಕರ ಅವಧೂತರು. ಅವರ ಗುರುಮಾರ್ಗ ಪರಂಪರೆಗೆ ಸೇರಿದ ಅವರ ಪಟ್ಟದ ಶಿಷ್ಯರಾದ ಯಮನೂರೇಶ ಮತ್ತು ಇಮಾಂಬಿ ಎಂಬ ಅಣ್ಣ ತಂಗಿ. ಹುಟ್ಟಿನ ಜಾತಿಯಿಂದ ವಿಶ್ವಾರಾಧ್ಯರು ಲಿಂಗಾಯತ. ಭೀಮಾಶಂಕರ ವಿಶ್ವಕರ್ಮ. ತತ್ವಪದ

ಇಮಾಂಬಿ ಅತ್ತೆ , ಈಗ ಬೋರಗಿ ಭೀಮಾಶಂಕರ ಅವಧೂತರ ತತ್ವಪದಗಳನ್ನು ಹಾಡುತ್ತಾರೆ. ಹಾಗಂತ ವೇದಿಕೆ ಮೇಲೆ ಹೇಳುತ್ತಲೇ ಸಾಹೇಬಗೌಡ ಮಾಸ್ತರ ಮಾತು ಮುಂದುವರೆಸಿದರು. ” ನನ್ನ ಅಪ್ಪ ಯಮನೂರಪ್ಪಗೆ ಅಣ್ಣ ಅಂತಲೇ ಕರೆಯುತ್ತಿದ್ದ ಅಪ್ಪನ ತಂಗಿ ಇಮಾಂಬೀ. ಅಂದರೆ ಸಂಬಂಧದಲ್ಲಿ ನನಗೆ ಅತ್ತೆಯಾಗಬೇಕು.” ಭರಪೂರ ಕಕುಲಾತಿ ತುಂಬಿದ ಹೃದಯದ ಅಂತರಾಳದಿಂದ ಆಡಿದ ಈ ಮಾತುಗಳನ್ನು ಕೇಳುತ್ತಿದ್ದಂತೆ ನೆರೆದ ಸಭೆಯಲ್ಲಿ ಅಂತಃಕರಣ ಧುಮ್ಮಿಕ್ಕುವ ಚಪ್ಪಳಿಗೆಗಳು ಸಂಭ್ರಮಿಸಿದವು.

ನಮ್ಮ ಗ್ರಾಮಭಾರತದ  ಹಳ್ಳಿಗಳಲ್ಲಿ ಇವತ್ತಿಗೂ ಮನುಷ್ಯ ಸಂಬಂಧಗಳು ಪೂರ್ತಿಯಾಗಿ ನಿಕಾಲೆಯಾಗಿಲ್ಲ. ಸಾಹೇಬಗೌಡನ ಮನುಷ್ಯ ಪ್ರೀತಿಯ ಈ ಮಾತುಗಳು ಅದನ್ನು ಸಾಬೀತು ಪಡಿಸಿದವು. ಮಾಸ್ತರ ಸಾಹೇಬಗೌಡನ “ಇಮಾಂಬಿ ಅತ್ತೆ” ಎಂಬ ಭಾವ ಮತ್ತು ಬಾಯಿ ತುಂಬಿ ಕರೆಯುವ ಸಹೃದಯತೆಯು ನನ್ನ ಭಾವ ಸುದೀಪ್ತದ ಕ್ಷಿತಿಜ ವಿಸ್ತರಿಸಿದವು. ಪ್ರಾಯಶಃ ಅನುಭಾವ ಎಂದರೆ, ಅಧ್ಯಾತ್ಮ ಎಂದರೆ, ತತ್ವದ ಹುಡುಕಾಟವೆಂದರೆ ಇಂತಹ ಮನುಷ್ಯ ಸಂಬಂಧಗಳು. ಆರೋಗ್ಯ ಪೂರ್ಣವಾಗಿ ಬದುಕ ಬೇಕಾದ ಮನುಷ್ಯ ಪ್ರೇಮದ ಒಳಗೊಳ್ಳುವಿಕೆಯ ಸಮಾಜ ಜ್ಞಾನದ ಪಾಠವೇ ಇದಾಗಿದೆ ಎಂದುಕೊಳ್ಳ ಬೇಕಿದೆ. ಒಬ್ಬ ಹಿಂದು, ಇನ್ನೊಬ್ಬ ಮುಸ್ಲಿಂ, ಮತ್ತೊಬ್ಬ ಕ್ರಿಶ್ಚಿಯನ್ ಹೀಗೆ ಧರ್ಮ ಗುರುಗಳನ್ನು ಕೂರಿಸಿ ಏರ್ಪಡಿಸುವ ಸರ್ಕಾರಿ ಲೆಕ್ಕದ ಕೋಮು ಸೌಹಾರ್ದ ಸಭೆ ಅದಾಗಿರಲಿಲ್ಲ.

ಅಷ್ಟಕ್ಕೂ ಫಿಲಾಸಫಿ ಎಂಬುದು ಅಪರಿಚಿತವಾದ ಪದಪುಂಜಗಳನ್ನು ಬಳಸಿ ಬರೆಯುವ ಇಲ್ಲವೇ ಕೊರೆಯುವ ಶುಷ್ಕ ಪಾಂಡಿತ್ಯವಲ್ಲ. ಅಂತೆಯೇ ತತ್ವಪದಕಾರರು ಪಂಡಿತರಾದವರಲ್ಲ ಖಂಡಿತರಾದವರು. ಬೇರು ಬೀಜಗಳಂತಹ ನೆಲಮಕ್ಕಳ ಶ್ರಮ ಬಳಸಿಕೊಂಡು ಪಂಡಿತ, ವಿದ್ವಾಂಸರೆನಿಸಿದ ಕೀರ್ತಿವಂತರ ಕುರಿತು ಕಡಕೋಳ ಮಡಿವಾಳಪ್ಪ ಹಾಡಿರುವ ” ಕೊಂಬು‌ ಹೊಲೆಯಂದು ಏಕಾಂತ ಬಿರುದು ನಿಮ್ಮದು ಶ್ರೀಮಹಾಂತ ” ಎಂದು ಗುರು ಪದವಿಯನ್ನೇ ಗೇಲಿ ಮಾಡುವಂತಹ ಚುರುಕು ಮುಟ್ಟಿಸುವ ತತ್ವಪದ ಎಚ್ಚರಿಸುತ್ತದೆ. ಅದಕ್ಕೆಂದೇ ನಮ್ಮ ನೆರೆ ಹೊರೆಯವರ ಆಚಾರ, ವಿಚಾರಗಳನ್ನು ಪ್ರೀತಿಸುವ ಮತ್ತು ನಿತ್ಯ ಬದುಕಿನ ಸಂಬಂಧಗಳನ್ನು ಮಧುರವಾಗಿಸುವ ಇಂತಹ ಸಣ್ಣಪುಟ್ಟ ಸರಳ ಸಂಗತಿಗಳು, ವರ್ತಮಾನ ಭಾರತದ ಆದ್ಯತೆಯ ವಿಷಯಗಳಾಗಬೇಕಿದೆ ಎಂಬುದನ್ನು ನೆನಪಿಡಬೇಕಿದೆ.

ಯಾದಗಿರಿ ಬಳಿಯ ಅಬ್ಬೆ ತುಮಕೂರಿನ ಅನುಭಾವಿ ವಿಶ್ವಾರಾಧ್ಯರ ಶಿಷ್ಯ ಸಿಂದಗಿ ತಾಲೂಕಿನ ಬೋರಗಿಯ ಭೀಮಾಶಂಕರ ಅವಧೂತರು. ಅವರ ಗುರುಮಾರ್ಗ ಪರಂಪರೆಗೆ ಸೇರಿದ ಅವರ ಪಟ್ಟದ ಶಿಷ್ಯರಾದ ಯಮನೂರೇಶ ಮತ್ತು ಇಮಾಂಬಿ ಎಂಬ ಅಣ್ಣ ತಂಗಿ. ಹುಟ್ಟಿನ ಜಾತಿಯಿಂದ ವಿಶ್ವಾರಾಧ್ಯರು ಲಿಂಗಾಯತ. ಭೀಮಾಶಂಕರ ವಿಶ್ವಕರ್ಮ. ಇಮಾಂಬಿ ಮುಸ್ಲಿಂ ಮಹಿಳೆ. ಇವೆಲ್ಲಾ ಸಾಮಾಜಿಕ ಎಚ್ಚರಗಳನ್ನು ನಿಕಷಕ್ಕೊಡ್ಡಿದಂತೆ ಒತ್ತಟ್ಟಿಗಿಟ್ಟು ನೋಡುವುದಾದರೆ ಈ ಮೂವರ ನಡುವಿನ ಮಾನವ ಧರ್ಮದ ತಾಯ್ತನಕ್ಕೆ ಸಾವಿರದ ಶರಣು ಸಲಾಮುಗಳು ಸಲ್ಲಬೇಕು. ಇಂತಹ ಜೀವಪ್ರಜ್ಞೆಯ ಪ್ರೀತಿಯೊಂದು ಸಿಂದಗಿ ಸನಿಹದ ಪುರದಾಳ ಗ್ರಾಮದ ಅವತ್ತಿನ ಕಾರ್ಯಕ್ರಮದಲ್ಲಿ ನಮಗೆಲ್ಲ ಪ್ರಜ್ಞೆಯ ರೂಪಕವಾಗಿ ಕಂಡು ಬಂತು.

ಇದನ್ನೂ ಓದಿ: ರಾಜ್ಯದಲ್ಲಿ ಜನಪರ ಶಿಕ್ಷಣ ನೀತಿ ರಚಿಸಬೇಕು – ನಾ ದಿವಾಕರ್

ಪಂಡಿತರ ಎಲ್ಲ ಪ್ರಾಜ್ಞ ಮೀಮಾಂಸೆಗಳನ್ನು ಮೀರಿ ಇವತ್ತಿಗೂ ಅವಧೂತ ಸಂವೇದನೆಗಳನ್ನು ಕುರಿ ಕಾಯುವ ಕಾಯಕದ ಇಮಾಂಬಿಯಂತಹ ನೂರಾರು ಮಂದಿ ಸಾಧಕರು ನಮ್ಮ ನಡುವೆಯೇ ಸರಳಾರೂಢರಂತೆ ಬದುಕಿದ್ದಾರೆ. ಅದನ್ನು ಗುರುತಿಸಿದ ಸಾಹೇಬಗೌಡ ಮಾಸ್ತರನ ಅಂತರಾಳ ಅವನಿಂದ ಅಂದು ಮಾತಾಡಿಸಿತು ಅಷ್ಟೇ. ಎಷ್ಟೋ ಸಲ ನಾವು ಬದುಕುತ್ತಿರುವ ಸಂದರ್ಭಗಳಲ್ಲಿ ಇಂತಹ ಅನೇಕ ಘಟನೆಗಳು ಸಾಮಾಜಿಕ ಮಹತ್ವ ಪಡೆಯದೇ ಹೋಗಿರುತ್ತವೆ. ಇಲ್ಲವೇ ಅವು ತೋರಿಕೆಯ ಲೋಕ ಸಂಗತಿಗಳಾಗಿ ರೂಪಿತಗೊಳ್ಳುವುದೇ ರೂಢಿಯಾಗಿರುತ್ತದೆ.

ಹಂದಿಗನೂರು, ಕೋರವಾರ, ಕಲಕೇರಿ, ಯಲಗೋಡ, ಬೋರಗಿ ಮೊದಲಾದ ಇಂಗರೇಜಿ ಸೀಮೆಗಳಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳ ಹಾಡುಗಬ್ಬದ ಹೊಳೆ. ಅಲ್ಲಿನ ಪರಿಸರ ಅನುಭಾವ ಶಾಸ್ತ್ರ, ಕೈವಲ್ಯ ನವನೀತದ ಚಿಂತನಗೋಷ್ಠಿ, ತತ್ವ ಪದಾರ್ಥ ಪ್ರವಚನಗಳು ಜರುಗುವ ಶಿವ ಜಿಜ್ಞಾಸುಗಳ ನೆಲೆಬೀಡು. ಮುರುಗೇಂದ್ರ ಶಿವಯೋಗಿಗಳು, ಗುರುಪಾದೇಶ್ವರ ಪರಂಪರೆಯ ಹೋಳಗಿ ರಾಚಪ್ಪ, ವೈದ್ಯರಾಜ ವೀ.ಸಿ.ಹಳ್ಳೆ, ಕಲಕೇರಿ ಗುರುಸ್ವಾಮಿ, ಕಲ್ಲಪ್ಪ ಶರಣರು, ಹಾಗೆಯೇ ಇತ್ತ ಸ್ವಲ್ಪ ಸರಿದರೆ ಬೋರಗಿ ಭೀಮಾಶಂಕರ ಪರಂಪರೆಯ ಖಾದರಸಾಬ, ಕುಂಬಾರ ಶರಣಮ್ಮ, ಅಮೋಘಸಿದ್ಧ ಶಾಸ್ತ್ರಿಗಳವರೆಗೆ ನಿಜಗುಣರ ಮಾದರಿಯ ಮುಕ್ತಿಕಾಂಡದ ಗುರುಮಾರ್ಗ ವಿವೇಚನೆ – ವಿವೇಕ, ಚಿಂತನ – ಮಂಥನ ಉಳ್ಳವರ ಊರುಗಳೇ. ನೆನಪಿರಲಿ ತೀರಾ ಇತ್ತೀಚಿನ ಸ್ಥಳೀಯ ಈ ಪರಂಪರೆಗಳು ಜಾತಿ, ಮತ, ಧರ್ಮ ನಿರಸನ ಪರಂಪರೆಗಳಾಗಿವೆ.

ಮಣ್ಣೇತ್ತಿನ ಜೊತೆ ಇಮಾಂಬಿ

ಅಂದಹಾಗೆ ಅವತ್ತು ಇಮಾಂಬಿ ಜತೆ ಜೋಡಿಯಾಗಿ ಸಂತ ಭೀಮಾಶಂಕರ ಮತ್ತು ಅವರ ಶಿಷ್ಯ ಯಮನೂರೇಶರ ತತ್ವಪದಗಳನ್ನು ಭೀಂಬಾಯಿ ಗೌಡ್ತಿ ಸಹಿತ ಸಹಜ ಸುಂದರವಾಗಿ ಹಾಡಿದರು. ಕಾಯಕದಲ್ಲಿ ಕಾಷ್ಠಶಿಲ್ಪಿ ಆಗಿರುವ ಭೀಮಾಶಂಕರರು ಸಮರ್ಥ ಸದ್ಗುರು. ಬೋರಗಿಯಲ್ಲಿ ದಲಿತ, ದಮನಿತ, ಹಿಂದುಳಿದ, ಮುಸ್ಲಿಂ ಹೀಗೆ ಎಲ್ಲಾ ಜಾತಿಯ ಸಮರ್ಥ ಶಿಷ್ಯ ಸಂಕುಲವೇ ಅಲ್ಲಿದೆ. ದೊಡ್ಡಮನಿ ಎಂಬ ಅಡ್ಡ ಹೆಸರಿನ ಇಮಾಂಬಿಯ ಅಪ್ಪ, ಅಮ್ಮ, ಅಣ್ಣ ಎಲ್ಲರೂ ಭೀಮಾಶಂಕರರ ಗುರುಹಸ್ತದ ಬೋಧೆ ಪಡೆದವರು. ಇವತ್ತಿನ ತನಕ ಯಾವ ಅಭ್ಯಂತರಗಳಿಲ್ಲದೇ ಅದನ್ನು ಬಾಳಿ ಬದುಕುತ್ತಲೇ ಬಂದವರು. ಬೋರಗಿ ಭೀಮಾಶಂಕರರಿಂದ ಉಪದೇಶ ಪಡೆದು ಅನುಭಾವದ ಸಾರ್ಥಕ‌ ಬಾಳು ಬದುಕಿದ ಅವರ ಖಾಸಾಶಿಷ್ಯ ಖಾದರಸಾಬನ ಗೋರಿ ಗುರು ಭೀಮಾಶಂಕರರ ಮಠದಲ್ಲೇ ಇರುವುದನ್ನು ಕಾಣ ಬಹುದಾಗಿದೆ.

ಅದಕ್ಕೆಲ್ಲ ಬೇರು ಬುನಾದಿ ಹಾಕಿದವರು ವಿಶ್ವಾರಾಧ್ಯರ ಗುರುಪುತ್ರ ಭೀಮಾಶಂಕರ ಅವಧೂತರು. ಭೀಮಾಶಂಕರರ ಗುರು ವಿಶ್ವಾರಾಧ್ಯರು ಒಮ್ಮೆ ದೂರದ ಜೇವರಗಿ ಬಳಿಯ ಶಖಾಪುರದಲ್ಲಿ ಸತ್ಸಂಗ ನಡೆಸುವಾಗ ಅನುಭಾವ ಸಂವಾದದ ತೂರ್ಯಾವಸ್ಥೆಯ ಪರೀಕ್ಷಾರ್ಥ ಕ್ಷಣಗಳು. ಗುರು ವಿಶ್ವಾರಾಧ್ಯರು ಘನಗಂಭೀರ ಸ್ವರದಲ್ಲಿ “ಬಯಲನು ಅಳೆಯಲು ಸೇರು ಬೇಕಿದೆ ಕೊಡಿರೆಂದು” ಕೇಳುತ್ತಾರೆ. ಎಲ್ಲ ಶಿಷ್ಯರು ಅವಾಕ್ಕಾಗಿ ಬಯಲನು ಅಳೆಯಲು ಎಲ್ಲಿಂದ ಸೇರು ತರುವುದು. ಅಷ್ಟಕ್ಕೂ ಬಯಲನು ಅಳೆಯಲು ಹೇಗೆ ಸಾಧ್ಯವೆಂದು ದಿಙ್ಮೂಢರಾಗುತ್ತಾರೆ. ಬೋರಗಿಯ ಶಿಷ್ಯೋತ್ತಮ ಭೀಮಾಶಂಕರ ಎದ್ದು ನಿಂತು “ಬಯಲು ಅಳೆಯುವ ಸೇರಿನೊಳಗಿನ ಬಯಲನು ಎಲ್ಲಿ ಚೆಲ್ಲಿ ತರಲೆಂದು” ಗುರು ವಿಶ್ವಾರಾಧ್ಯರನ್ನೇ ಮರು ಪ್ರಶ್ನಿಸುತ್ತಾನೆ. ಎಷ್ಟಾದರೂ ಅದು ಬಯಲನೆ ಬಿತ್ತಿ ಬಯಲನೆ ಬೆಳೆಯುವ, ಬಯಲು ಬಿತ್ತನೆಯ ಬೀಜ. ತನಗೆ ಬೇಕಾದ ಸ್ಫೋಟಕದ ‘ಬಯಲು ಬೀಜ’ ಸಿಕ್ಕಿತೆಂಬ ಅಮೋಘ ಸಂತಸದಲ್ಲಿ ಭೀಮಾಶಂಕರನ ಶಿಷ್ಯತ್ವದ ಪ್ರೊಬೇಷನರಿ ಪಿರಿಯಡ್ ಡಿಕ್ಲೇರ್ ಮಾಡುತ್ತಾರೆ ಗುರು ವಿಶ್ವಾರಾಧ್ಯರು. ಅಂತೆಯೇ ಕೂಗಳತೆ ದೂರದ ಬೋರಗಿ ಪುರದಾಳ ಅವಳಿ ಊರುಗಳಲ್ಲಿ ಇಂತಹ ಪರಂಪರೆಯ ತತ್ವವೇತ್ತ ಸಾಧಕ ವ್ಯಕ್ತಿತ್ವಗಳು ಇವತ್ತಿಗೂ ಬಾಳಿ ಬದುಕುತ್ತಿವೆ.

ಮೇಲುನೋಟಕ್ಕೆ ಅಂದಿನದು ನಿರೂಪಿತ ಸಭಾ ವೇದಿಕೆಯ ಚಹರೆಗಳನ್ನು ಹೊಂದಿದಂತೆ ಕಂಡುಬಂದರೂ ನನಗದು ಸಾಧು ಸತ್ಸಂಗದ ಸಂವೇದನೆಗಳನ್ನು ಆವಾಹಿಸಿದಂತಿತ್ತು. ಖುದ್ದು ಯಮನೂರೇಶನೇ ತಾನು ಬದುಕಿದ್ದಾಗಲೇ ಕಷ್ಟಪಟ್ಟು ಕಟ್ಟಿಸಿದ ತನ್ನ ಗುರು ಭೀಮಾಶಂಕರರ ಶಿಲಾ ಪ್ರತಿಮೆ ಇರುವ ಗದ್ದುಗೆ ಮಂಟಪ. ಗುರು ಮಂಟಪದ ಕೆಳಗೆ ತನಗೂ ಕಟ್ಟಿಸಿಕೊಂಡ ನೆಲಗದ್ದುಗೆ. ಯಮನೂರೇಶನ ನೆಲಗದ್ದುಗೆಯೊಳಗೆ ನಾನು ಹೊಕ್ಕು ಇಳಿದಾಗ ಅಲ್ಲಿ ಅವತ್ತು ನನಗೆ ಸಿದ್ಧರ ಸಿದ್ಧಪತ್ರಿಯ ಪರಿಮಳದ ಘಮಲು ತೇಲಿಬಂತು. ನನ್ನ ಪಾಲಿಗೆ ಅದೊಂದು ಅಪರೂಪದ ದರ್ಶನ ಭಾಗ್ಯ. ಅವತ್ತಿನದು ಭೀಮಾಶಂಕರ ಮಹಾರಾಜರ ನಲವತ್ತನೆ ಮತ್ತು ಅವರ ಶಿಷ್ಯ ಯಮನೂರೇಶರ‌ ಮೂರನೇ ವರುಷದ ಪುಣ್ಯಸ್ಮರಣೆ (27.11.2023) ಕಾರ್ಯಕ್ರಮ. ತನ್ನಿಮಿತ್ತ ಯಮನೂರೇಶರ ಪುತ್ರ ಸಾಹೇಬಗೌಡ ಮಾಸ್ತರ ಹಮ್ಮಿಕೊಂಡ ಅನುಭಾವದ ಸಮಾಗಮ ಅದಾಗಿತ್ತು. ಮೇಲಾಗಿ ಅನುಭಾವ ಕವಿಗೋಷ್ಠಿ. ಹದಿನೇಳು ಮಂದಿ ಕವಿ, ಕವಯತ್ರಿಯರ ಕವಿತಾ ವಾಚನ. ಕವಿತೆಗಳು ಇಸ್ರೇಲ್, ಪ್ಯಾಲೆಸ್ಟೈನ್, ಉಕ್ರೇನ್ ತನಕ ಅನುಭಾವದ ವಿಸ್ತರಿಸಿದ್ದವು. ವೃತ್ತಿಯಿಂದ ಹೈಸ್ಕೂಲ್ ಮಾಸ್ತರನಾದ ಸಾಹೇಬಗೌಡನ ಸಹಯಾನದ ಅನೇಕ ಉಪಾಧ್ಯಾಯರು ಅಲ್ಲಿ ಸೇರಿದ್ದರು.

ಇದನ್ನೂ ಓದಿ: ಒಂದು ಸೆಮಿನಾರಿನ ಅನುಭವ ಕಥನ

ಪುರದಾಳದ ಶ್ರೀ ಭೀಮಾಶಂಕರ ಗದ್ದುಗೆ ಮಂಟಪದ ಮುಂದೆ ಸಾಹೇಬಗೌಡ, ಮಲ್ಲಿಕಾರ್ಜುನ ಕಡಕೋಳ, ಸಬರದ, ಡಾ. ಪಡಶೆಟ್ಟಿ ಮತ್ತು ಲತಾ ಲಗಳಿ

ಶ್ರೀವಿಶ್ವಾರಾಧ್ಯ ವಿದ್ಯಾಶ್ರಮದ ತಪೋರತ್ನ ಶ್ರೀಮಹಾಲಿಂಗೇಶ್ವರ ಮಹಾಸ್ವಾಮಿಗಳ ಪ್ರೀತಿಯ ಶ್ರೀರಕ್ಷೆಯಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಬೇರೆ ಬೇರೆ ಊರುಗಳಿಂದ ಅನೇಕ ಮಂದಿ ನಿವೃತ್ತ ಉಪಾಧ್ಯಾಯರು ಬಂದಿದ್ದರು. ಮುಖ್ಯವಾಗಿ ಇನ್ನೂ ಮೊನ್ನೆಯಷ್ಟೇ ಕರ್ನಾಟಕ ಸರ್ಕಾರದ ‌ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಫ. ಗು. ಸಿದ್ಧಾಪುರ ಗುರುಗಳಿಗೆ ಗೌರವಾರ್ಪಣೆ. ಪ್ರೊ. ಎಸ್. ಎಸ್. ಪಡಶೆಟ್ಟಿ, ಡಾ. ಎಂ. ಎಸ್. ಮಾಗಣಗೇರಿ ಹೀಗೆ ವಿದ್ಯಾಗುರು ವೃಂದವೇ ನೆರೆದಿತ್ತು. ನಮ್ಮ ಯಮನೂರೇಶರು ಸಹ ಸರ್ಕಾರಿ ಸಾಲಿಯ ಕನ್ನಡ ಮಾಸ್ತರ ಆಗಿದ್ದವರು. ಅವರಿಗೆ ವಿದ್ಯಾಗುರುಗಳಾಗಿದ್ದ ನಾಯ್ಕೋಡಿ ನ ಬೀಸಾಹೇಬರ ಮಗ ಬಿದರಕುಂದಿಯ ಸಾಧಕ ಅಬ್ದುಲ್ ರಹಿಮಾನ್ ಆಗಮಿಸಿದ್ದರು.

ಹಾಗೆ ನೋಡಿದರೆ ಪುರದಾಳ ಗ್ರಾಮಸ್ಥರ ಹಾಜರಿಯೇ ಕಡಿಮೆ ಎನ್ನಬಹುದು. ಹತತ್ರ ನೂರು ಮಂದಿ ಸಾಧಕರಿಗೆ ಅವತ್ತು ಪೇಠವಿಟ್ಟು, ಶಾಲು ಹೊದಿಸಿ ಹೂಮಾಲೆ ಹಾಕಿ ಸತ್ಕರಿಸಿದ ಸಹೃದಯತೆ ನಮ್ಮ ಸಾಹೇಬಗೌಡನದು. ಕಾರ್ಯಕ್ರಮದ ನಡು ನಡುವೆ ಇಮಾಂಬಿ, ಬಸವರಾಜ ಬಡಿಗೇರ, ಭೀಂಬಾಯಿ ಗೌಡ್ತಿ, ನಾನಾಗೌಡ ಮತ್ತು ಶಾಂತಗೌಡ ಅವರಿಂದ ಉಕ್ಕಿಹರಿದ ತತ್ವಪದಗಳ ಗಾಯನ. ಮುಂಜಾನೆಯಿಂದ ಅಲ್ಲಿ ನೆರೆದ ಎಲ್ಲರಿಗೂ ಪುಷ್ಕಳವಾದ ಪ್ರಸಾದ ವ್ಯವಸ್ಥೆ ಅಲ್ಲಿತ್ತು. ವಿಶೇಷವಾಗಿ ಸಜ್ಜಕ, ಕಜ್ಜ ಭಜ್ಜಿಯ ಭೋಜನ.

 

ವಿಡಿಯೋ ನೋಡಿ: ದುಡಿವ ಜನರು ಬೆಕ್ಕುಗಳಲ್ಲ, ಹುಲಿಗಳೆಂದು ನೆನಪಿಸಲು ‘ಮಹಾಧರಣಿ’: ಸಿದ್ದನಗೌಡ ಪಾಟೀಲ್Janashakthi Media

Donate Janashakthi Media

Leave a Reply

Your email address will not be published. Required fields are marked *