ತರಗತಿಯೊಳಗೆ ವಿದ್ಯಾರ್ಥಿಯನ್ನು `ಟೆರರಿಸ್ಟ್’ ಎಂದ ಪ್ರೊಫೆಸರ್!

ಉಡುಪಿ: ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ತರಗತಿ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿ ಯೊಬ್ಬನಿಗೆ `ಟೆರರಿಸ್ಟ್’ ಎಂದು ನಿಂದಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ನವೆಂಬರ್‌ 26ರಂದು ನಡೆದಿದ್ದು, ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪ್ರೊಫೆಸರ್‌ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್‌ ಗಳು ಎಂಬ ಅರ್ಥದಲ್ಲಿ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. ಪ್ರೊಫೆಸರ್ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ವಿದ್ಯಾರ್ಥಿ, ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರೆಂದು ಕರೆಯಬೇಡಿ, ಅನಗತ್ಯವಾಗಿ ಈ ರೀತಿ ಮಾತನಾಡಬೇಡಿ ಎಂದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪ್ರಾಧ್ಯಾಕರು ವಿದ್ಯಾರ್ಥಿಗೆ ತನ್ನ ಮಗನಂತೆ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ `ನೀವು ನಿಮ್ಮ ಮಗನಿಗೆ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ನೀವು ಎಷ್ಟು ಜನರ ಮುಂದೆ ನನ್ನನ್ನು ಹಾಗೆ ಕರೆಯುತ್ತೀರಿ? ಇದು ತರಗತಿ, ನೀವು ವೃತ್ತಿಪರರಾಗಿ ಕಲಿಸುತ್ತಿದ್ದೀರಿ, ಮುಸ್ಲಿಮನಾಗಿ ದಿನನಿತ್ಯ ಇದನ್ನು ಎದುರಿಸುವುದು ತಮಾಷೆಯಲ್ಲ. ನೀವು ನನ್ನನ್ನು ಹಾಗೆ ಕರೆಯಬೇಡಿ” ಎಂದು ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದಾನೆ.

ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ವಿಷಾದ ವ್ಯಕ್ತಪಡಿಸಿ, ಸ್ಥಳದಲ್ಲೇ ಕ್ಷಮೆ ಕೋರಿದ್ದಾರೆ. ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ.

ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಮಾಹೆ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ. ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಯೊಂದಿಗೆ ಮಾತನಾಡಿ ಸಾಂತ್ವನ ಹೇಳಲಾಗಿದೆ.

ಈ ಕುರಿತಾಗಿ ಮಾತನಾಡಿರುವ ವಿವಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಎಸ್.ಪಿ. ಕರ್, ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡುತ್ತೇವೆ. ವಸುದೈವ ಕುಟುಂಬ ಎನ್ನುವ ನಾವು ಇಂತಹ ಘಟನೆಯನ್ನು ಖಂಡಿಸುತ್ತೇವೆ. ನಾವು ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದ್ದೇವೆ. ಘಟನೆ ಬಳಿಕ ವಿದ್ಯಾರ್ಥಿಯೂ ಆತಂಕಕ್ಕೊಳಗಾಗಿದ್ದಾನೆ. ಈ ವೀಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆಯಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *