ಕಮಿಷನ್‌ ಆರೋಪದ ತನಿಖೆ ನಡೆಸಿದರೆ 25ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ: ಡಿ.ಕೆಂಪಣ್ಣ

ತುಮಕೂರು: ”ರಾಜ್ಯ ಸರಕಾರ ಇದುವರೆಗೂ ರಾಜ್ಯದ ಗುತ್ತಿಗೆದಾರರಿಗೆ ಸುಮಾರು 22 ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ಎಲ್ಓಸಿ ನೀಡುವಿಕೆಯಲ್ಲಿಯೂ ಶೇ 6ರಿಂದ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಈ ಎಲ್ಲ ಹಗರಣಗಳ ಬಗ್ಗೆ ಸಂಘದ ಬಳಿ ಸ್ಪಷ್ಟ ದಾಖೆಗಳಿವೆ. ಸ್ವತಂತ್ರ ತನಿಖೆ ನಡೆಸಿದರೆ, 4 ಜನ ಹಿರಿಯ ಇಂಜಿನಿಯರುಗಳು, 25ಕ್ಕೂ ಹೆಚ್ಚು ಶಾಸಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ” ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.

ತುಮಕೂರು ನಗರದ ಕನ್ನಡ ಭವನದಲ್ಲಿ ತುಮಕೂರು ನಗರ ಗುತ್ತಿಗೆದಾರರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ಯಾಕೇಜ್ ಟೆಂಡರ್ ರದ್ದು ಪಡಿಸಲು ಹೈಕೋರ್ಟ್, ಸುಪ್ರಿಂ ಕೋರ್ಟ್ ಯಾವ ಹಂತದ ಹೋರಾಟಕ್ಕೂ ಸಂಘ ಸಿದ್ಧವಿದೆ. ಇದಕ್ಕೆ ರಾಜ್ಯದ ಎಲ್ಲ ಗುತ್ತಿಗೆದಾರರು ಕೈಜೋಡಿಸಬೇಕು ಎಂದು ಹೇಳಿದರು.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳಲ್ಲಿ ಪ್ಯಾಕೇಜ್‍ ಟೆಂಡರ್ ಪದ್ದತಿಯನ್ನು ರದ್ದುಪಡಿಸಬೇಕೆಂಬುದು ಕರ್ನಾಟಕ ರಾಜ್ಯದ ಗುತ್ತಿಗೆದಾರರ ಸಂಘದ ಪ್ರಮುಖ ಅಜೆಂಡವಾಗಿದ್ದು, ಇದಕ್ಕಾಗಿ ಯಾವ ರೀತಿಯ ನ್ಯಾಯಾಂಗ ಹೋರಾಟಕ್ಕೂ ಸಂಘ ಸಿದ್ಧವಿದೆ ಎಂದು ತಿಳಿಸಿದರು.

ಸರಕಾರ 2018 ರಿಂದಲೂ ಲೋಕೋಪಯೋಗಿ ಇಲಾಖೆಯ ಎಸ್.ಆರ್. ರೇಟ್ ಬದಲಾವಣೆ ಮಾಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮರಳು, ಸಿಮೆಂಟ್, ಜಲ್ಲಿ, ಲೇಬರ್ ಕೂಲಿ ಎಲ್ಲವೂ ನಿರೀಕ್ಷೆಗೂ ಮೀರಿ ಹೆಚ್ಚಾಗಿವೆ. ಕೇಳಿದರೆ ಇಂದು, ನಾಳೆ ಎಂದು ಸಬೂಬು ಹೇಳುತ್ತಲೇ ಬಂದಿದ್ದಾರೆ. ಅವರಿಗೆ ಯಾರು ಕಮಿಷನ್ ನೀಡುತ್ತಾರೋ ಅವರಿಗೆ ದಾಖಲಾತಿಗಳನ್ನು ಪರಿಶೀಲಿಸದೆ ಟೆಂಡರ್ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ, ಗುಣಮಟ್ಟದ ಕಾಮಗಾರಿ ಸಾಧ್ಯವೇ ಎಂದು ಡಿ.ಕೆಂಪಣ್ಣ ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *