ಚೆನ್ನೈ: ಉಕ್ರೇನಿನಿಂದ ಭಾರತಕ್ಕೆ ಮರಳಿರುವ ತಮಿಳುನಾಡು ವಿದ್ಯಾರ್ಥಿಗಳು ಸ್ಥಳಾಂತರಕ್ಕೆ ನೇಮಿಸಿದ್ದ ಅಧಿಕಾರಿಗಳು ನಮ್ಮನ್ನು ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಸ್ಥಳಾಂತರದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಕೆಲವು ದಕ್ಷಿಣ ಭಾರತದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಪರವಾಗಿದ್ದು, ನಮ್ಮ ಹೆಸರನ್ನು ಸ್ಥಳಾಂತರದ ಪಟ್ಟಿಯಿಂದ ಅಳಿಸಿದ್ದಾರೆ ಹಾಗೂ ಕೇರಳದ ವಿದ್ಯಾರ್ಥಿಗಳಿಗಾಗಿ ನಿಗದಿಯಾಗಿದ್ದ ವಿಮಾನವನ್ನೂ ರದ್ದು ಮಾಡಿ, ಬದಲಾಯಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ತಮಿಳು ಮೂಲದ ವಿದ್ಯಾರ್ಥಿಯೊಬ್ಬ ನಾವು ವಿಮಾನಕ್ಕಾಗಿ 24-48 ಗಂಟೆಗಳ ಕಾಲ ಕಾದಿದ್ದೇವೆ. ಆದರೂ ಅಂದು ಬೆಳಗ್ಗೆ ಬಂದಿದ್ದ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಿದರು. ನಮ್ಮ ಹೆಸರನ್ನು ಅಳಿಸಿ ಆ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಇನ್ನೊಬ್ಬ ವಿದ್ಯಾರ್ಥಿ ನಮ್ಮನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದರು. ನಾವು ಮಾರ್ಚ್ 1ರಂದು ಗಡಿ ತಲುಪಿದ್ದೆವು. ಮಾರ್ಚ್ 2ರಂದು ವಿಮಾನವನ್ನು ನಿಗದಿಪಡಿಸಬೇಕಿತ್ತು. ಆದರೆ ಅದು ಆಗಿರಲಿಲ್ಲ ಎಂದರು.
ಪೋಲೆಂಡ್ನಲ್ಲಿ ಕೇರಳದ 15 ವಿದ್ಯಾರ್ಥಿಗಳಿಗಾಗಿ ಒಂದು ವಿಮಾನ ನಿಗದಿಯಾಗಿತ್ತು. ಆದರೆ ಅವರು ಕೇರಳದ ವಿದ್ಯಾರ್ಥಿಗಳಿಗೆ ತಿಳಿಸದೇ ಆ ವಿಮಾನದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸದೆಯೇ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಆ ವಿಮಾನದಲ್ಲಿ ಕೂರಿಸಿದ್ದರು. ಇದರಿಂದ ಕೇರಳ ಮೂಲದ ವಿದ್ಯಾರ್ಥಿಗಳೂ ಆಕ್ರೋಶಗೊಂಡಿದ್ದರು.
ಭಾರತದಲ್ಲಿ ವ್ಯಾಸಂಗಕ್ಕಾಗಿ ಅಗತ್ಯ ಕ್ರಮ ಎಂದ ಸ್ಟಾಲಿನ್
ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನಿಗೆ ಹೋಗಿದ್ದ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನಿಂದಾಗಿ ಇದೀಗ ವಾಪಸ್ಸು ಆಗಿದ್ದಾರೆ. ತಮಿಳುನಾಡಿನ ವಿದ್ಯಾರ್ಥಿಗಳನ್ನು ನಿನ್ನೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸ್ಟಾಲಿನ್ ಕೆಲಹೊತ್ತು ಮಾತುಕತೆ ನಡೆಸಿದರು.
ಈ ವೇಳೆ, ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯಕೀಯ ವ್ಯಾಸಂಗ ಮುಂದುವರೆಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಹಾನಿ ಪರಿಶೀಲನೆ ನಡೆಸಿದ ಬಳಿಕ ತಿರುನಲ್ವೇಲಿ ಜಿಲ್ಲೆಯಲ್ಲಿ ಉಕ್ರೇನಿನಿಂದ ವಾಪಸ್ಸು ಆದ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಉಕ್ರೇನಿನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡುವುದು ನಮ್ಮ ಗುರಿ ಎಂದಿದ್ದಾರೆ.