ಚೆನ್ನೈ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ರಾಜ್ಯಪಾಲ ಆರ್.ಎನ್. ರವಿ ಗುರುವಾರದಂದು ಆದೇಶ ಹೊರಡಿಸಿದ್ದರು. ಈ ವಿವಾದಾತ್ಮಕ ಆದೇಶವನ್ನು ಕೆಲವೇ ಗಂಟೆಗಳ ಅಂತರದಲ್ಲಿ ಹಿಂಪಡೆದಿದ್ದಾರೆ ಎಂದು ರಾಜಭವನದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಜೂನ್ 14 ರಂದು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧಿಸಲ್ಪಟ್ಟಿದ್ದ ಸೆಂಥಿಲ್ ಬಾಲಾಜಿ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಂಪುಟದಲ್ಲಿ ಖಾತೆ ಇಲ್ಲದೆ ಸಚಿವರಾಗಿ ಉಳಿದಿದ್ದಾರೆ. ರಾಜ್ಯಪಾಲರು ಆದೇಶ ಹೊರಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಟಾಲಿನ್ ಅಕ್ರೋಶ ವ್ಯಕ್ತಪಡಿಸಿದ್ದು, ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೆಂಗೋಲ್‌ಗೆ ಕೃತಜ್ಞತೆಯಾಗಿ ತಮಿಳುನಾಡು 25 ಎನ್‍ಡಿಎ ಸಂಸದರನ್ನು ಆರಿಸಬೇಕು! -ಷಾ ಕೋರಿಕೆ
“ಸಚಿವರಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ವಿರುದ್ಧ ನಡೆಯುತ್ತಿರುವ ಪ್ರಕರಣದ ಮೇಲೆ ಪ್ರಭಾವ ಬೀರುತ್ತಿದ್ದಾರೆ” ಎಂದು ರಾಜ್ಯಪಾಲರು ಬಾಲಾಜಿ ಅವರನ್ನು ವಜಾಗೊಳಿಸಿದ್ದ ಆದೇಶದಲ್ಲಿ ಹೇಳಿದ್ದರು. ರಾಜ್ಯಪಾಲರ ಆದೇಶದ ವಿರುದ್ಧ ಆಡಳಿತರೂಢ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ತಮಿಳುನಾಡು ಸರ್ಕಾರ ಕಾನೂನು ಹೋರಾಟ ನಡೆಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದರು.
ಸಿಎಂ ಹೇಳಿಕೆಯ ನಂತರ ರಾಜ್ಯಪಾಲರು ತರಾತುರಿಯಲ್ಲಿ ತಮ್ಮ ಹಿಂದಿನ ಆದೇಶವನ್ನು ಹಿಂಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಕ್ಕೂಟ ಸರ್ಕಾರದ ಮಧ್ಯಪ್ರವೇಶದ ನಂತರ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ ಎಂದು ರಾಜಭವನದ ಅಧಿಕಾರಿಗಳು ತಿಳಿಸಿದ್ದಾರೆ. ಒಕ್ಕೂಟ ಸರ್ಕಾರವೂ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲು ರಾಜ್ಯಪಾಲರಿಗೆ ಸಲಹೆ ನೀಡಿದೆ ಎಂದು ವರದಿಯಾಗಿದೆ.
ವಿದ್ಯುತ್ ಮತ್ತು ಅಬಕಾರಿ ಸಚಿವರಾಗಿದ್ದ ಬಾಲಾಜಿ ಅವರನ್ನು ಈ ತಿಂಗಳ ಆರಂಭದಲ್ಲಿ ಉದ್ಯೋಗಕ್ಕಾಗಿ ಹಣ ಪಡೆದಿದ್ದಾರೆ ಎಂಬ ಹಳೆಯ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು. ಅವರು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ನಂತರ ಅವರು ತನ್ನ ಪ್ರಮುಖ ಖಾತೆಗಳನ್ನು ಕೈಬಿಟ್ಟಿದ್ದರು, ಆದರೆ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿ ಮುಂದುವರೆದಿದ್ದಾರೆ.