ಚೆನ್ನೈ : ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಇತರೆ ಪ್ರದೇಶಗಳಲ್ಲಿ ವರುಣನ ಆರ್ಭಟ ನಿಲ್ಲುತ್ತಿಲ್ಲ. ಈವರೆಗೆ ಐವರು ಈ ಮಳೆಯಿಂದ ಉಂಟಾದ ಅವಘಡದಲ್ಲಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 11 ರವರೆಗೆ ಚೆನ್ನೈ ಹಾಗೂ ಬೇರೆ ಪ್ರದೇಶಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳು ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೀಲಗಿರಿ, ಕೊಯಮತ್ತೂರು, ದಿಂಡಿಗಲ್, ಥೇಣಿ, ತೆಂಕಶಿ ಮತ್ತು ತಿರುನಲ್ವೇಲಿ ಸೇರಿದಂತೆ ಸುಮಾರು 14 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
70 ಮನೆಗಳು, 280 ಗುಡಿಸಲು ನಾಶವಾಗಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ರಾಜ್ಯದ ಕೆಲವು ಭಾಗಗಳಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಚೆನ್ನೈ, ಥೇಣಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಸಾವುಗಳು ಸಂಭವಿಸಿವೆ.
ಇಷ್ಟು ವರ್ಷ ಏನು ಮಾಡಿದ್ರಿ: “ಒಂದು ವರ್ಷದ ಅರ್ಧ ಭಾಗ ನೀವು ನಮ್ಮನ್ನು (ಚೆನ್ನೈ ಜನರನ್ನು) ನೀರಿಗಾಗಿ ಪರಿತಪಿಸುವಂತೆ ಮಾಡುತ್ತೀರಿ. ಇನ್ನು ಅರ್ಧ ವರ್ಷದಲ್ಲಿ ನೀರಿನಿಂದ ಮುಳುಗಿ ಸಾಯುವಂತೆ ಮಾಡುತ್ತೀರಿ. 2015 ರಿಂದಲೂ ನೀವೇನು ಮಾಡುತ್ತಿದ್ದಿರಿ? ಹೀಗೆಂದು ಮದ್ರಾಸ್ ಹೈಕೋರ್ಟ್ ಚೆನ್ನೈ ಮಹಾನಗರ ಪಾಲಿಕೆಯನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಧಾರಾಕಾರ ಮಳೆಯಿಂದಾಗಿ ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ ಸರಿಯಾದ ರೀತಿಯಲ್ಲಿ ನೀರು ಹರಿಯದೆ, ನಗರದ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತು.
ಪ್ರತಿವರ್ಷ ಮಳೆಗಾಲದಲ್ಲಿ ಚೆನ್ನೈ ನಗರದಲ್ಲಿ ರಸ್ತೆ ತುಂಬಾ ನೀರು ಹಾಗೂ ತಗ್ಗು ಪ್ರದೇಶ ಜಲಾವೃತವಾಗುತ್ತಿದೆ. ಈ ಬಾರಿಯೂ ಸುರಿದ ಧಾರಾಕಾರ ಮಳೆಗೆ ಐವರು ಸಾವನ್ನಪ್ಪಿದ್ದು, ಹಲವಾರು ಮನೆಗಳು ಹಾನಿಗೊಂಡಿರುವ ಘಟನೆ ನಡೆದಿದೆ. 2015ರ ವಿನಾಶಕಾರಿ ಪ್ರವಾಹದ ನಂತರ ಕಳೆದ ಆರು ವರ್ಷಗಳಿಂದ ಮಹಾನಗರ ಪಾಲಿಕೆ ಏನು ಮಾಡಿದೆ ಎಂಬುದು ತಿಳಿಯಬೇಕಾಗಿದೆ. ಒಂದು ವೇಳೆ ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ವಿಫಲರಾದರೆ ಮಹಾನಗರ ಪಾಲಿಕೆ ವಿರುದ್ಧ ಸ್ವಯಂ ಆಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
‘ಉಚಿತ ಊಟ’ ಘೋಷಿಸಿದ ಸರಕಾರ : ಮಳೆಗಾಲ ಮುಗಿಯುವವರೆಗೆ ಅಮ್ಮಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಅವರು ಮಳೆ ಪೀಡಿತ, ಜಲಾವೃತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಎಐಎಡಿಎಂಕೆ ಸರಕಾರವು ಮಳೆನೀರು ಚರಂಡಿ ಹಾಗೂ ಇತರ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ಸ್ಟಾಲಿನ್ ಆರೋಪಿಸಿದರು. ಯೋಜನೆಯಡಿಯಲ್ಲಿ ತೊಡಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹೆಚ್ಚುವರಿ ಮಳೆನೀರು ಜಲಾಶಯಗಳಿಂದ ಹೊರಹಾಕಲಾಗುತ್ತಿದ್ದು, ಚೆನ್ನೈನ ಹಲವಾರು ರಸ್ತೆಗಳು ತುಂಬಿಹೋಗಿದ್ದು ನದಿಗಳನ್ನು ಹೋಲುತ್ತಿವೆ ಮತ್ತು ತಮಿಳುನಾಡಿನಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ 70 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ರಾಜ್ಯದ ಕೆಲವು ಭಾಗಗಳಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಅವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಸ್ಟಾಲಿನ್ ತಿಳಿಸಿದ್ದಾರೆ.