ಯಾವುದೆ ವಿರೋಧವಿಲ್ಲದೆ ಅಂತಿಮವಾಗಿ ಹಿಂದಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಅಮಿತ್ ಶಾ ಹೇಳಿದ್ದರು
ಚೆನ್ನೈ: ಹಿಂದಿ ಭಾಷೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ಗೃಹ ಸಚಿವರ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರೋಧಿಸಿದ್ದು, “ಇದನ್ನು ಕೇಳಿ ಒಪ್ಪಿಕೊಳ್ಳಲು ತಮಿಳುನಾಡು ಕೈಗೊಂಬೆ ರಾಜ್ಯವಲ್ಲ” ಎಂದು ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1965 ರ ಭಾಷಾ ಕ್ರಾಂತಿಯನ್ನು ಮರುಸೃಷ್ಟಿಸಬೇಡಿ ಎಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸಂಸತ್ತಿನ ಅಧಿಕೃತ ಭಾಷೆಯ ಸಮಿತಿಯ 38ನೇ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದ ಅಮಿತ್ ಶಾ, ”ಸ್ವಲ್ಪ ನಿಧಾನವಾಗಿದ್ದರೂ ಯಾವುದೇ ರೀತಿಯ ವಿರೋಧವಿಲ್ಲದೆ ಅಂತಿಮವಾಗಿ ಹಿಂದಿಯನ್ನು ಅಧಿಕೃತ ಭಾಷೆಯನ್ನು ಒಪ್ಪಿಕೊಳ್ಳಲೇಬೇಕು. ಅಧಿಕೃತ ಭಾಷೆಯ ಸ್ವೀಕಾರ ಕಾನೂನು ಅಥವಾ ಸುತ್ತೋಲೆಗಳಿಂದ ಬರುವುದಿಲ್ಲ, ಬದಲಾಗಿ ಸದ್ಭಾವನೆ, ಸ್ಫೂರ್ತಿ ಮತ್ತು ಪ್ರೋತ್ಸಾಹದಿಂದ ಬರುತ್ತದೆ” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಯಾವುದೇ ವಿರೋಧವಿಲ್ಲದೆ ಹಿಂದಿ ಭಾಷೆ ಒಪ್ಪಿಕೊಳ್ಳಬೇಕಾಗುತ್ತದೆ: ಅಮಿತ್ ಶಾ
ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಸ್ಟಾಲಿನ್, “ವಿರೋಧಿಸುತ್ತಿರುವ ಎಲ್ಲರೂ ಹಿಂದಿಯನ್ನು ಒಪ್ಪಿಕೊಳ್ಳಬೇಕು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ, ‘ಇತರ ಭಾಷೆ ಮಾತನಾಡುವ ಎಲ್ಲಾ ಜನಾಂಗದ ಜನರನ್ನು ಹಿಂದಿಗೆ ಗುಲಾಮರನ್ನಾಗಿ ಮಾಡುವ ಸರ್ವಾಧಿಕಾರಿ ಪ್ರಯತ್ನವಾಗಿದೆ’. ಇದನ್ನು ಕೇಳಿ ಒಪ್ಪಿಕೊಳ್ಳಲು ತಮಿಳುನಾಡು ಕೈಗೊಂಬೆ ರಾಜ್ಯವಲ್ಲ! ಅಮಿತ್ ಶಾ ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.
“ಅಮಿತ್ ಶಾ ಅವರ ಹೇಳಿಕೆಯು ಹಿಂದಿಯೇತರ ಭಾಷಿಕರನ್ನು ಬಗ್ಗುಬಡಿಯುವ ಯತ್ನವಾಗಿದೆ. ತಮಿಳುನಾಡು ಯಾವುದೇ ರೀತಿಯ ಹಿಂದಿ ಪ್ರಾಬಲ್ಯ ಮತ್ತು ಹೇರಿಕೆಯನ್ನು ತಿರಸ್ಕರಿಸುತ್ತದೆ. ನಮ್ಮ ಭಾಷೆ ಮತ್ತು ಪರಂಪರೆ ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಾವು ಹಿಂದಿಯ ಗುಲಾಮರಾಗುವುದಿಲ್ಲ!” ಎಂದು ಅವರು ಗುಡುಗಿದ್ದಾರೆ.
“ತಮಿಳುನಾಡಿಗೆ ಬಂದರೆ ಪುರಾತನವಾದ ಭಾಷೆ ಎಂದು ನಾಲಿಗೆಗೆ ಜೇನು ತುಪ್ಪ ಹಚ್ಚುವುದು, ದೆಹಲಿಗೆ ಹೋಗುತ್ತಲೆ ವಿಷ ಹಡುವುದು ಬಿಜೆಪಿಯ ಹಸಿ ರಾಜಕಾರಣ ಎಂಬುದು ನಾವೆಲ್ಲರೂ ತಿಳಿಯಬೇಕಿದೆ. ಹಿಂದಿ ಹೇರಿಕೆಯನ್ನು ಇದೀಗ ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಂತಹ ಅನೇಕ ರಾಜ್ಯಗಳು ಬಲವಾಗಿ ವಿರೋಧಿಸುತ್ತಿವೆ ಎಂಬುದನ್ನು ಮಾನ್ಯ ಅಮಿತ್ ಶಾ ಅರಿತುಕೊಳ್ಳಬೇಕು. 1965 ರ ಭಾಷಾ ಕ್ರಾಂತಿಯನ್ನು ಮರುಸೃಷ್ಟಿಸಬೇಡಿ ಎಂದು ನಾನು ನಿಮಗೆ ಎಚ್ಚರಿಕೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: SESP TSP : ದಲಿತರಿಗೆ ಮೀಸಲಿಟ್ಟ ಹಣದ ಮೇಲೆ ಗ್ಯಾರಂಟಿ ಕಣ್ಣು! Janashakthi Media