ಕೊಡಗು: ಕೋವಿಡ್ ಸಾಂಕ್ರಾಮಿಕ ರೋಗ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ದಾಖಲಾತಿ ಸಾವಿರ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದೆ. ಇದೇ ಸಂದರ್ಭದ ಸೋಂಕಿತರ ಸಾವಿನ ಸಂಖ್ಯೆಯೂ ಇನ್ನೂರು ಮುನ್ನೂರಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಕೊಡುಗು ಜಿಲ್ಲೆಯ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸ ಎದುರಾಗಿದೆ.
ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಸಾವಿರಾರು ಹೆಚ್ಚಿದ್ದು ಜೂನ್ 7ರವರೆಗೆ 341 ಜನರ ನಿಧನ ಹೊಂದಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದರೆ. ಕರ್ನಾಟಕ ಸರಕಾರದ ಆರೋಗ್ಯ ಇಲಾಖೆ ವರದಿ ಪ್ರಕಾರ 239 (ಜೂನ್ 09ರಂದು) ಮಂದಿ ನಿಧನ ಹೊಂದಿದ್ದಾರೆ ಎಂದು ದೃಢಪಡಿಸಿದೆ. ಇಲ್ಲಿ ಲೆಕ್ಕದಲ್ಲಿ ಆಗುತ್ತಿರುವ ಲೋಪವೆಸಗುತ್ತಿರುವುದು ಯಾರು ಎಂಬ ಪ್ರಶ್ನೆ ಎದುರಾಗಿದೆ.
ಇದನ್ನು ಓದಿ: ಖಾಸಗಿ ವೈದ್ಯಕೀಯ ಲಾಬಿ ಹಾಗೂ ತನಿಖಾ ಸಮಿತಿಗಳು
ಇಲ್ಲಿ ಸರಕಾರ ಕೊಡಗಿನ ಜನರ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದೆಯಾ ಅನುಮಾನ ಕಾಡುತ್ತಿದೆ. ಇದುವರೆಗೆ ಜಿಲ್ಲೆ ಒಟ್ಟು ಸೋಂಕಿತರ ಸಂಖ್ಯೆ 27,217 ಆಗಿದೆ. ಇದರಲ್ಲಿ ಒಟ್ಟು 24,602 ಮಂದು ಸೋಂಕಿನಿಂದ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
ಜಿಲ್ಲಾಡಳಿತ ವರದಿ ಪ್ರಕಾರ ಕೋವಿಡ್ ಸೋಂಕಿನಿಂದ 341 ಜನರು ಮೃತಪಟ್ಟಿದ್ದಾರೆ ಎಂದಾದರೆ, ರಾಜ್ಯ ಆರೋಗ್ಯ ಇಲಾಖೆಯಲ್ಲಿಯೂ ಅದೇ ವರದಿ ಬರಬೇಕಲ್ಲವೇ, ಇಲ್ಲವಾದಲ್ಲಿ 105 ಮೃತಪಟ್ಟವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬರುತ್ತದೆ. ಸರಕಾರವು ಸೋಂಕು ಪತ್ತೆ ಕಾರ್ಯದಲ್ಲಿ ಕೋವಿಡ್ ದೃಢಪಟ್ಟವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇಲ್ಲವೆಂದು ಮನೆ ಆರೈಕೆ ಮಾಡಲಾಗುತ್ತಿತ್ತು. ಹೀಗೆ ಮನೆ ಆರೈಕೆಯಲ್ಲಿದ್ದು ಮೃತಪಟ್ಟವರ ಲೆಕ್ಕ ಕೊಡಗು ಜಿಲ್ಲಾಡಳಿತ ಪರಿಗಣಿಸಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಜಿಲ್ಲಾಡಳಿತ ಪ್ರತೀದಿನ ಬಿಡುಗಡೆ ಮಾಡುವ ಕೋವಿಡ್ ಸಂಬಂಧಿಸಿದ ಅಂಕಿಅಂಶಗಳನ್ನು ನಿಖರವಾಗಿ ಸರ್ಕಾರದ ರಾಜ್ಯ ಮಟ್ಟದಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಅನುಮಾನವೂ ಇದೆ. ಕೊವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಕೊಡಗಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ನೆರವೇರಿಸುತ್ತಿವೆ. ಅವರ ಪ್ರಕಾರದಲ್ಲಿ ನೋಡಿದರೂ ಒಂದೊಂದು ಸಂಘಟನೆಗಳು ನೂರಾರು ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿವೆ ಎಂದು ಹೇಳುತ್ತಿವೆ.
ಇದನ್ನು ಓದಿ: ಹೇಗಿದ್ದೀರಾ ಮಕ್ಕಳೆ..! ಪತ್ರ ಬರೆದ ಗೀತಾ ಟೀಚರ್!!
ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ನೇತೃತ್ವದಲ್ಲೇ ಇದುವರೆಗೆ ಬರೋಬ್ಬರಿ 204 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ. ಎಸ್‍ಡಿಪಿಐ ಸಂಘಟನೆ ಕೂಡ ನೂರಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಿದೆ. ಇವುಗಳ ಲೆಕ್ಕವನ್ನು ತೆಗೆದುಕೊಂಡರೂ ಸಹ 300ಕ್ಕೂ ಹೆಚ್ಚು ಕೋವಿಡ್ ಸಾವಿನ ಲೆಕ್ಕವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರನ್ನು ಕೇಳಿದರೆ, ಸರ್ಕಾರದ ಪೋರ್ಟಲ್ ಗೂ ನಾವೇ ದಾಖಲು ಮಾಡುತ್ತಿದ್ದೇವೆ. ಅದು ತಾಂತ್ರಿಕ ದೋಷದಿಂದ ಆಗಿರುವ ಸಮಸ್ಯೆ. ಅದನ್ನು ಸರಿಪಡಿಸಲಾಗುವುದು ಎಂಬ ಉತ್ತರ ನೀಡಿದರು. ಆದರೆ ಇದೇ ಜಿಲ್ಲಾಡಳಿತ ನಿತ್ಯ ಬಿಡುಗಡೆ ಮಾಡುವ ಕೊವಿಡ್ ಅಂಕಿಅಂಶಗಳಲ್ಲಿ 341 ಜನರು ಮೃತಪಟ್ಟಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ಅಂಕಿ ಅಂಶಗಳು ಕೊಡಗಿನಲ್ಲಿ ಕೊವಿಡ್ ನಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಟ್ಟು ಆಗಿರುವ ಅನಾಹುತವನ್ನು ಮರೆಮಾಚಲು ಪ್ರಯತ್ನಿಸುತ್ತಿದೆಯಾ ಎನ್ನುವ ಅನುಮಾನ ಮೂಡಿದೆ.