ಮಡಿಕೇರಿ: ಬಗೆಬಗೆಯ ಭಕ್ಷ್ಯ ಭೋಜನ ಸವಿಯೋದು ಎಲ್ಲರಿಗೂ ತಿಳಿದ ವಿಷಯ. ಎಷ್ಟೋ ಜನರಿಗೆ ನಿಯಮಿತ ಪ್ರಮಾಣದಲ್ಲಿ ಊಟ ಮಾಡುವುದು ಇದೆ. ಆದರೆ, ಇಲ್ಲೊಬ್ಬ ಯುವತಿ ತನ್ನ ತಲೆಕೂದಲನ್ನು ತಾನೇ ಕಿತ್ತು ಕಿತ್ತು ತಿನ್ನುತ್ತಿದ್ದ ವಿಷಯ ಬಹಿರಂಗವಾಗಿದೆ.
ಯಾರಾದರೂ ಹೊಟ್ಟೆಗೆ ತಲೆಕೂದಲು ತಿನ್ನುತ್ತಾರಾ ಎಂದು ಆಚ್ಚರಿಪಟ್ಟರೂ ಇದು ಸತ್ಯ. ಕೊಡಗಿನ ಮಡಿಕೇರಿ ತಾಲ್ಲೂಕಿನ ಗ್ರಾಮವೊಂದರ 20 ವರ್ಷದ ಯುವತಿ ಕಳೆದ 15 ವರ್ಷಗಳಿಂದ ನಿರಂತರವಾಗಿ ತನ್ನ ತಲೆಕೂದಲನ್ನು ತಾನೇ ಕಿತ್ತು ಕಿತ್ತು ತಿಂದಿದ್ದಾಳೆ.
ಹೀಗೆ ತನ್ನ ತಲೆಕೂದಲನ್ನು ತಾನೇ ಕಿತ್ತು ತಿನ್ನೋದು ಒಂದು ರೀತಿಯ ಮಾನಸಿಕ ಖಿನ್ನತೆಯ ಭಾಗ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಟ್ರೈಕೋಫೇಜಿಯಾ ಅಂತ ಕರೆಯುತ್ತಾರೆ. ಇಂತಹ ವಿಚಿತ್ರ ಮಾನಸಿಕ ಖಿನ್ನತೆಗೆ ಇಂತಹದ್ದೇ ಎನ್ನುವ ನಿಖರ ಕಾರಣ ಇಲ್ಲ. ಆದರೆ ಈ ಮಾನಸಿಕ ಖಿನ್ನತೆಯಿಂದ ಬಳಲುವವರು ಯಾರಿಗೂ ಗೊತ್ತಿಲ್ಲದಂತೆ ತಮ್ಮ ತಲೆಕೂದಲನ್ನು ತಾವು ಕಿತ್ತು ತಿನ್ನುತ್ತಿರುತ್ತಾರೆ. ಕೆಲವೇ ಕೆಲವರಲ್ಲಿ ಮಾತ್ರ ಇಂತಹ ಖಿನ್ನತೆ ಅಪರೂಪ ಎನ್ನುತ್ತಾರೆ ವೈದ್ಯರು.
ಕಳೆದ ಹದಿನೈದು ವರ್ಷಗಳಿಂದಲೂ ತನ್ನ ತಲೆಕೂದಲನ್ನು ತಿನ್ನುತ್ತಿದ್ದ 20 ವರ್ಷದ ಯುವತಿಗೆ ಕಳೆದ ಎರಡು ವಾರಗಳ ಹಿಂದೆ ತೀವ್ರ ಪ್ರಮಾಣದಲ್ಲಿ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಪೋಷಕರು ಯುವತಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಭಾರಿ ಘಾತ್ರದ ಗಡ್ಡೆ ಇರೋದು ಪತ್ತೆಯಾಗಿದೆ. ಅದು ಟ್ರೈಕೋಫೇಜಿಯಾ ಎನ್ನೋದು ಗೊತ್ತಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಕೂದಲನ್ನು ತಿಂದ ಪರಿಣಾಮವಾಗಿ ಅದು ಕಲ್ಲಿನಂತೆ ಗಡ್ಡೆಯಾಗಿದೆ. ವಿಷಯವರಿತ ಡಾಕ್ಟರ್ ಅಜಿತ್ ಕುಮಾರ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿ ಸತತ ಮೂರು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ 21 ಸೆಂಟಿಮೀಟರ್ ಉದ್ದ, 10 ಸೆಂಟಿಮೀಟರ್ ಅಗಲದ ಬರೋಬ್ಬರಿ ಒಂದುವರೆ ಕೆ. ಜಿ ತೂಕದ ಗಡ್ಡೆಯನ್ನು ಹೊರತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಯುವತಿಗೆ ಮತ್ತೆ ಕೌನ್ಸೆಲಿಂಗ್ ನಡೆಸಿ ತಲೆಕೂದಲು ತಿನ್ನದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯುವತಿ ಆರೋಗ್ಯವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾಳೆ.