ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ಜನಶಕ್ತಿ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ ಕುರಿತ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಆಯೋಜಿಸಲಾಗಿದ್ದ ‘ಕೊರೊನಾ ಕಾಲದಲ್ಲಿ ಕಾಡಿದ ಕವನ, ಮೂಡಿದ ಕತೆ : ಯುವಜನರಿಗೆ ಕತೆ ಮತ್ತು ಕವನ ಸ್ಪರ್ಧೆ’ಯಲ್ಲಿ ಎರಡನೇ ಬಹುಮಾನ ಪಡೆದ ಕವಿತೆ.
ಉಸಿರುಗಟ್ಟಿದ
ಇಂತಹ ವಾತಾವರಣದಲ್ಲಿ
ದೊಡ್ಡ ದೊಡ್ಡದಾದ
ಹೆಸರು ಪೋಟೋ ಅಂಟಿಸಿ
ಬೇಳೆ ಬೇಯಿಸಿಕೊಳ್ಳಲು
ಹೊಂಚು ಹಾಕಿಕೊಂಡ ಭವಿಷ್ಯದ ಹಿತಕ್ಕಾಗಿ
ಇಲ್ಲೊಬ್ಬ ಮಾಸ್ಕ್ ಸ್ಯಾನಿಟೈಸರ್ ಹಂಚುತ್ತಿದ್ದಾನೆ
ತಲೆಕೆಟ್ಟ ಕವಿಯೊಬ್ಬ
ಇಂತಹ ವಾಚ್ಯ ಕವಿತೆ ಬರೆಯುತ್ತಿದ್ದಾನೆ
ಪ್ಲೇಟೋ
ಕವಿಗಳನ್ನು ಗಡಿಪಾರು ಮಾಡಿಸಿದ್ದು
ಸ್ಟಾಲಿನ್ ಜೈಲಿಗೆ ಅಟ್ಟಿಸಿದ್ದು
ಬ್ರೇಕ್ ನಿರ್ಗತಿಕರ ಕುರಿತು ಬರೆದದ್ದು
ವಿವೇಕವಂತರಿಗೆ ಸರಿ ಹೋಗುವುದಿಲ್ಲ ಎನ್ನುವುದು
ನಿರಂತರವಾಗಿ ಸಾಬೀತಾಗುತ್ತಲೇ ಇದೆ
ಮಾರ್ಕೆಟ್ಟಿನ ವರ್ತುಲ ಗಮನಿಸಿ ಬರೆಯಬೇಕೆ?
ಕಾವ್ಯ ರಂಜಿಸುವ ಮತ್ತೇರಿಸುವ
ಶರಾಬು ತಂಬಾಕು ಧೂಮಪಾನ ಇತ್ಯಾದಿ?
ಆಕ್ಟೇವಿಯೋ ಪಾಜ್ ನ ಆತ್ಮ
ಗೋರಿಯೊಳಗೆ ಮಗ್ಗಲು ಬದಲಿಸಿರಬೇಕು
ಪಾಪ
ಇಲ್ಲಿ ಅನೇಕ ಕವಿಮಿತ್ರರು ಅಳುಕಿನಲ್ಲಿ
ಸರಸ ವಿರಸದ ಕುರಿತು ಕವಿತೆ
ಬರೆದುಕೊಂಡು ತೆವಲು ತೀರಿಸಿಕೊಳ್ಳುತ್ತಿದ್ದಾರೆ
ಆಶಾಭಾವನೆ ದೊಡ್ಡದು
ಮನೆ ತುಂಬ ಫಲಕ
ಹಾರ ಶ್ಯಾಲ್ ತುರಾಯಿ
ಲಾಕ್ ಡೌನ್
ಮುಗಿದ ನಂತರ ಸಭೆ
ಸಮಾರಂಭ ಶಿಬಿರ ಗೋಷ್ಠಿ
ಅಧ್ಯಕ್ಷತೆಯ ಪೀಠ!
ವ್ಯಾಕರಣ ಛಂದಸ್ಸು ಅಲಂಕಾರ
ಪ್ರತಿಮೆ ರೂಪಕ ಮೆಟಾಫರ್
ಬಗ್ಗೆ ತಲೆಕೆಡಿಸಿಕೊಂಡು
ಹೊಸ ಬಟ್ಟೆ ತೊಟ್ಟು
ಮುಖಕ್ಕೆ ಪೌಡರ್ ಮೆತ್ತಿ
ಕಥೆ ಕವಿತೆ ಲೈವ್ ಸರಣಿ ಓದು
ಮುಂದುವರೆದೆ ಇದೆ
ಕಾವ್ಯ ಖರ್ಚಾಗಲು
ಪ್ರಶಸ್ತಿ ಪುರಸ್ಕಾರ ಬಿರುದುಗಳಿಗಾಗಿ
ಕವಿತೆ ಬರೆಯಬೇಕೆ?
ಈ ದುರಿತ ಕಾಲದಲ್ಲಿ
ಯಾವ ಯಾವ ನೆಪವೊ
ಲಾಕ್ ಡೌನ್ ಸುಖವೊ
ಮಹಾನುಭಾವರು ಸರಳ ಮದುವೆಗೆ
ಮೊರೆ ಹೋಗಿ ಹಿಗ್ಗಿದ್ದಾರೆ
ಇಲ್ಲಿ
ಯಾವುದಕ್ಕೂ ವಿಷಾದವಿಲ್ಲ
ಅಲೆಮಾರಿಗಳು ಅಲೆಯುತ್ತ
ಬಡವರು ನರಳುತ್ತ
ನ್ಯೂಸ್ ಚಾನೆಲ್ ಅಣ್ಣಯ್ಯ
ಒಂದೇ ಸಮನೆ ಕೂಗೆ ಕೂಗುತ್ತಾನೆ
ಕುದುರೆ ಹೋಗಿ ಕತ್ತೆಯಾದಂತೆ
ಪತ್ರಕರ್ತನೊಬ್ಬ ಸರ್ಕಾರದ ಕಪ್ಪು
ಮಾವು ನೆಕ್ಕುತ್ತಾ ಬರೆಯುತ್ತಿದ್ದಾನೆ
ಮಾಹಿತಿಗಾಗಿ
ಸಾವು ಎಣಿಕೆಯಲ್ಲಿ ಸಂಗ್ರಹಿಸಲಾಗಿದೆ
ಕಣ್ಣೀರು ಬತ್ತಿ ಹೋಗಿವೆ
ಬೆಲೆ ಗೊತ್ತು ಮೌಲ್ಯದ ಗಂಧವಿಲ್ಲ
ಈ ಕವಿತೆ ಓದಲು ಲಿಂಕ್ ಕ್ಲಿಕ್ ಮಾಡಿ : ಸಾಲಿನಲ್ಲಿ ಕಾಯುತ್ತಾ