ಪಾಟ್ನ: ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಬುರ್ಖಾ ಧರಿಸಿದ ಬ್ಯಾಂಕಿನ ವಹಿವಾಟು ನಡೆಸಬಾರದೆಂದು ಯುವತಿಗೆ ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಗಳು ನಿರ್ಬಂಧ ವಿಧಿಸಿರುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಯುಕೋ ಬ್ಯಾಂಕ್ ನ ಮನ್ಸೂರ್ ಚೌಕ್ ಶಾಖೆಗೆ ಹಣ ತೆಗೆದುಕೊಳ್ಳಲು ಬಂದಿದ್ದರು.
ವಿಡಿಯೋದಲ್ಲಿ ಚಿತ್ರಿಸಿರುವಂತೆ, ಮೂರರಿಂದ ನಾಲ್ಕು ಬ್ಯಾಂಕ್ ಉದ್ಯೋಗಿಗಳು ಆಕೆಗೆ ಹಿಜಾಬ್ ತೆಗೆದು, ಹಣ ತೆಗೆಯುವ ಪ್ರಕ್ರಿಯೆ ನಡೆಸುವಂತೆ ಹೇಳಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಯುವತಿ ತನ್ನ ಪೋಷಕರನ್ನು ಕರೆದಿದ್ದಾಳೆ. ಪೋಷಕರು ಬ್ಯಾಂಕ್ ಒಳಗೆ ಹಿಜಾಬ್ ನಿರ್ಬಂಧಕ್ಕೆ ನಿಯಮ ಎಲ್ಲಿ ಬರೆದಿದೆ ತೋರಿಸಿ? ಎಂದು ಪ್ರಶ್ನಿಸಿದ್ದಾರೆ.
ಪ್ರತಿ ತಿಂಗಳು ನಾನು ಮತ್ತು ನನ್ನ ಮಗಳು ಈ ಬ್ಯಾಂಕಿಗೆ ಬರುತ್ತಿದ್ದೆವು. ಯಾರೂ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಈಗೇಕೆ ಆಕ್ಷೇಪ? ಇಂತಹ ಯಾವುದಾದರೂ ನಿಯಮಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದ್ದರೆ, ಅದನ್ನು ಬಿಹಾರದಲ್ಲಿಯೂ ಏಕೆ ಜಾರಿಗೊಳಿಸುತ್ತಿದ್ದಾರೆ? ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಹಿಜಾಬ್ ನಿಷೇಧದ ಬಗ್ಗೆ ಲಿಖಿತ ಅಧಿಸೂಚನೆ ಹೊರಡಿಸಿದ್ದಾರೆಯೇ? ಎಂದು ಯುವತಿಯ ಪೋಷಕರು ಪ್ರಶ್ನಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಗಳು ವಿಡಿಯೋ ಚಿತ್ರೀಕರಿಸುವುದನ್ನು ಕೂಡಲೇ ನಿಲ್ಲಿಸಬೇಕೆಂದು ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರೂ ರಿಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ಯುಕೋ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದು, ʻʻಬ್ಯಾಂಕ್ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ. ತಾರತಮ್ಯ ಎಸಗುವುದಿಲ್ಲ. ಘಟನೆ ಸಂಬಂಧದ ವಾಸ್ತವಾಂಶಗಳನ್ನು ಬ್ಯಾಂಕ್ ಪರಿಶೀಲಿಸುತ್ತಿದೆ” ಎಂದು ಹೇಳಿದೆ.