ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಇಂದು ಎಲ್ಲೆಡೆ ಬೃಹತ್ ಸೈಕಲ್ ಜಾಥಾವನ್ನು ಹಮ್ಮಿಕೊಂಡಿತ್ತು. ಇದರ ಭಾಗವಾಗಿ ಇಂದು ನಗರದ ಕೆಪಿಸಿಸಿ ಕಚೇರಿಯಿಂದ ಜಾಥಾ ಆರಂಭವಾಯಿತು.
ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೈಕಲ್ ಜಾಥಾ ಪ್ರತಿಭಟನೆಗೆ ಕರೆ ನೀಡಿದ್ದವು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜಾಥಾ ನಡೆಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನು ಓದಿ: 3ನೇ ಅಲೆ ಎದುರಿಸಲು ಜನತೆಗೆ ಪೌಷ್ಟಿಕ ಆಹಾರ ಕಡಿಮೆ ದರದಲ್ಲಿ ನೀಡಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹ
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರೊಬ್ಬ ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿದ ಸೈಕಲ್ ತುಳಿದದ್ದು ಎಲ್ಲರ ಗಮನ ಸೆಳೆಯಿತು. ಇನ್ನೊಂದೆಡೆ ಕುದುರೆ ಟಾಂಗಾ ಮೆರವಣಿಗೆಯೂ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್ ಅವರು ಜಾಥಾದ ನೇತೃತ್ವವನ್ನು ವಹಿಸಿದ್ದರು. ಇದರಲ್ಲಿ ನೂರಾರು ಕಾರ್ಯಕರ್ತರು ಸೈಕಲ್ ಮೂಲಕ ಮೆರವಣಿಗೆ ಹೊರಟರು.
ಜಾಥಾಗೆ ಚಾಲನೆ ನೀಡುವ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಮಾತನಾಡಿ, ‘ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.60ರಷ್ಟು ತೆರಿಗೆ ಹಾಕಿ ಅನಗತ್ಯವಾಗಿ ಬೆಲೆಗಳನ್ನು ಏರಿಸುತ್ತಲೇ ಇವೆ. ಇವೆರಡೂ ಸರಕಾರಗಳು ಜನ ವಿರೋಧಿಯಾಗಿವೆ ’ ಎಂದು ಆರೋಪ ಮಾಡಿದರು.
ನಮ್ಮ ಪಕ್ಷದ ನಾಯಕರು ನಿರಂತರವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು, ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ. ಇವು ಜನಸಾಮಾನ್ಯರಿಗಾಗಿ ಸರ್ಕಾರ ನಡೆಸುತ್ತಿಲ್ಲ. ಬಡವರನ್ನು ಶೋಷಣೆ ಮಾಡಿ ಶ್ರೀಮಂತರನ್ನು ಉದ್ಧಾರ ಮಾಡುತ್ತಿವೆ. ಕೊರೊನಾದಿಂದಾಗಿ ಇಡೀ ದೇಶದ ಜನತೆ ಜೀವನ ನಡೆಸುವುದೇ ಕಷ್ಟವಾಗಿರುವಾಗ ಇಂಧನಗಳ ಬೆಲೆ ಏರಿಕೆಯಿಂದ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಂಗಳೂರು ನಗರದ ವಿವಿದೆಡೆ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಜಾಥಾ ನಡೆಯಿತು. ಕೆಪಿಸಿಸಿ ಕಚೇರಿಯಿಂದ ಕ್ವೀನ್ಸ್ ರಸ್ತೆಯ ಮೂಲಕ ಸೈಕಲ್‌ನಲ್ಲಿ ಸಾಗಿದ ಕಾರ್ಯಕರ್ತರನ್ನು ಇಂಡಿಯನ್ ಎಕ್ಸ್ಪ್ರೆಸ್ ವೃತ್ತದ ಬಳಿ ಪೊಲೀಸರು ತಡೆದರು. ಆದರೆ, ಕಾಂಗ್ರೆಸ್ ನಾಯಕರು ಕ್ವೀನ್ಸ್ ರಸ್ತೆಯಿಂದ ಕಾರ್ಪೊರೇಷನ್ ವೃತ್ತದವರೆಗೂ ಸೈಕಲ್ ಜಾಥಾ ನಡೆಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಬೆಂಗಳೂರಿನ ಕೇಂದ್ರ, ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವ್ಯಾಪ್ತಿಯ 32 ವಿಧಾನಸಭಾ ಕ್ಷೇತ್ರಗಳಲ್ಲಿ ಸೈಕಲ್ ಜಾಥಾ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಡುಪಿಯಲ್ಲಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಸೈಕಲ್ ಜಾಥಾಕ್ಕೆ ಜಾಲನೆ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗದಗ ಜಿಲ್ಲೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಕೆಲವು ದಿನಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ರಾಜ್ಯದಲ್ಲಿ 100 ರೂ. ಗಡಿ ದಾಟಿದಾಗಲೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಐದು ಸಾವಿರ ಪೆಟ್ರೋಲ್ ಬಂಕ್‌ಗಳ ಮುಂಭಾಗ ಪ್ರತಿಭಟನೆ ನಡೆಸಿದ್ದರು.