ತಜ್ಞರ ಸೂಚನೆ ನಂತರ ಶಾಲೆಗಳ ಪುನರಾರಂಭ: ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಕೋವಿಡ್ ಸಾಂಕ್ರಾಮಿಕತೆ ಹೆಚ್ಚಳದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು,  ಶಾಲೆಗಳ ಪುನರಾರಂಭಿಸುವ ಕುರಿತು ಶುಕ್ರವಾರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ನಡೆಯುವ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ತಜ್ಞರು ಕೈಗೊಳ್ಳವ ನಿರ್ಧಾರದ ಆಧಾರದ ಮೇಲೆ ಬೆಂಗಳೂರಿನಲ್ಲಿ 1-9 ಅಥವಾ 5-9 ನೇ ತರಗತಿಗಳನ್ನು ಪ್ರಾರಂಭ ಮಾಡುತ್ತೇವೆ. ಕೋವಿಡ್ ಸೋಂಕಿತರ ಸಂಖ್ಯೆ ಜಾಸ್ತಿ ಆಗದಿದ್ದರೆ, ನಿಗದಿಯಂತೆ ಎಸ್‍ಎಸ್‍ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗುವುದು. ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಸಿ‌ದ್ಧತೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸೋಂಕು ಹರಡಬಹುದು ಎಂಬ ಕಾರಣಕ್ಕಾಗಿ ಸರ್ಕಾರ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿತ್ತು. ಶುಕ್ರವಾರದ ಸಭೆಯಲ್ಲಿ ಅಲ್ಲಿ ಎಲ್ಲ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿ ಶಾಲೆಗಳನ್ನು ಆರಂಭಿಸುವ ನಿರ್ಧಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶಾಲೆಗಳನ್ನು ಮುಚ್ಚಬೇಕೆಂದು ತಾಂತ್ರಿಕ ಸಲಹಾ ಸಮಿತಿ ಇಲ್ಲವೇ ತಜ್ಞರು ಕೂಡ ಹೇಳಿರಲಿಲ್ಲ. 3ನೇ ಅಲೆಯಲ್ಲಿ ಸೋಂಕು ಒಬ್ಬರಿಂದ ಒಬ್ಬರಿಗೆ ಬಹು ವೇಗವಾಗಿ ಹಬ್ಬುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದರು. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಶಾಲೆಗಳನ್ನು ಮುಚ್ಚುವ ತೀರ್ಮಾನ ಕೈಗೊಂಡಿದ್ದೇವೆ.

ಶಾಲೆಗಳನ್ನು ಮುಚ್ಚದಂತೆ ಖಾಸಗಿ ಶಾಲಾ ಒಕ್ಕೂಟದವರು ಮನವಿ ಮಾಡಿದ್ದಾರೆ. ಈಗ ಯಾವ ಯಾವ ಶಾಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ನಾವು ಅಧ್ಯಯನ ಮಾಡಿದ್ದೇವೆ. ಹೆಚ್ಚು ಸೋಂಕು ಇರುವ ಶಾಲೆಗಳನ್ನು ಮಾತ್ರ ಮುಚ್ಚಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಶಾಲೆಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ ಉಳಿದಿರುವ ಕಡೆ ಎಂದಿನಂತೆ ಶಾಲೆಗಳು ನಡೆಯುತ್ತಿವೆ. ಮುಚ್ಚಲ್ಪಟ್ಟದ್ದು ಇಲ್ಲವೇ ಮುಂದುವರೆಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರೇ ಜಿಲ್ಲಾಕಾರಿಗಳಿಗೆ ಅನುಮತಿ ನೀಡಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರವನ್ನು ಜಿಲ್ಲಾಡಳಿತ ತೆಗೆದುಕೊಳ್ಳುತ್ತದೆ ಎಂದರು.

ಸದ್ಯಕ್ಕೆ ಜಿಲ್ಲೆಗಳಲ್ಲಿ ಶಾಲೆಗಳ ಪುನಾರಂಭಿಸಲು ಚಿಂತನೆ ನಡೆಸಿದ್ದೇವೆ. 5ನೇ ತರಗತಿ ಮೇಲ್ಪಟ್ಟು ಶಾಲೆಗಳನ್ನು ತೆರೆಯಲು ಗಂಭೀರ ಚಿಂತನೆ ನಡೆದಿದೆ. ಅಂತಿಮವಾಗಿ ಶುಕ್ರವಾರದ ಸಭೆ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದರು.

ಕ್ಲಸ್ಟರ್ ಮಟ್ಟದಲ್ಲಿ ಶಾಲೆಗಳನ್ನು ಮುಚ್ಚಲು ಸಲಹೆ ಬಂದಿದೆ. ನಾವು ಏಕಾಏಕಿ ಶಾಲೆ ಮುಚ್ಚಲು ಸಾಧ್ಯವಿಲ್ಲ. ಎಲ್ಲ ಸಾಧಕಬಾಧಕಗಳ ಬಗ್ಗೆ ಚರ್ಚೆ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿ, ಆರೋಗ್ಯ, ಪೋಷಕರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *