ಕೊಡಗು: ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಕುಸಿಯುವ ಆತಂಕದಲ್ಲಿದ್ದು, ಮಂಗಳೂರು ರಸ್ತೆಯನ್ನು ಬಂದ್ ಮಾಡಿ ಮೂರ್ನಾಡು ರಸ್ತೆ ಮಾರ್ಗವಾಗಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡುವ ಮೂಲಕ ಜನರಿಗೆ ತೊಂದರೆ ಎದುರಾಗದಂತೆ ಕ್ರಮವಹಿಸಲಾಗಿದೆ.
ಇದೇ ರೀತಿ ತಡೆಗೋಡೆಯ ಕಾಮಗಾರಿಯ ಜವಾಬ್ದಾರಿಯನ್ನು ತೆಗೆದುಕೊಂಡ ಗುತ್ತಿಗೆದಾರರನ್ನು ಈ ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಹಾಗೂ ಇದಕ್ಕೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹಿವಾಗಿದೆ.
ಕಳಪೆ ಕಾಮಗಾರಿಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ʻ40% ಕಮೀಷನ್ʼ ಅಕ್ರಮ ವ್ಯವಹಾರ ಜಿಲ್ಲಾಧಿಕಾರಿ ಕಛೇರಿ ತಡೆಗೋಡೆಗೂ ಅಂಟಿದೆಯೇ ಎಂಬ ಅನುಮಾನ ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ.
ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದು ಅಲ್ಲದೆ, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದಿದ್ದು ಸಾರ್ವಜನಿಕರ ರಸ್ತೆಯನ್ನೇ ಬಂದ್ ಮಾಡಿಸುವ ಪರಿಸ್ಥಿತಿಗೆ ತಂದು, ತೊಂದರೆ ಉಂಟು ಮಾಡಿದಂತಹ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ಉನ್ನತ ಮಟ್ಟದ ತನಿಖೆಯಾಗಬೇಕು ಆಗ್ರಹಿಸಿದ್ದಾರೆ. ಈ ಕಾಮಗಾರಿಯ ಮೊತ್ತವನ್ನು ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಅವರೇ ಬರಿಸಿ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿ ಕೊಡಬೇಕಾಗಿದೆ ಎಂದಿದ್ದಾರೆ.
ಗೋಡೆ ಕುಸಿಯುವ ಭೀತಿ ಕಿವಿಗೆ ಬಿದ್ದ ತಕ್ಷಣ ಸ್ಥಳಕ್ಕೆ ಧಾವಿಸಿದ ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ ಹಾಗು ಕೆಪಿಸಿಸಿ ಮುಖಂಡ ಡಾ ಮಂಥರ್ ಗೌಡ, ಮಂಗಳೂರಿಗೆ ಪ್ರಯಾಣಿಸುವ ಅಥವಾ ಬರುವ ವಾಹನಗಳಿಗೆ ಅಪಾಯ ಎದುರಾಗದಂತೆ ವಹಿಸದ ಕ್ರಮದಂತೆ ಸುತ್ತಲ್ಲಿರುವ ನೂರಾರು ಮನೆಗಳಿಗೆ ವ್ಯವಸ್ಥೆ ಕಲ್ಪಿಸಬೇಕು ಅವೈಜ್ಞಾನಿಕ ವ್ಯವಸ್ಥೆಯಿಂದಲೇ ತಡೆಗೋಡೆ ಈ ಪರಿಸ್ಥಿತಿಗೆ ಬಂದಿದೆ ಅನ್ನುವಾಗಲೇ ತಡೆಗೋಡೆಯಿಂದ ಒಂದು ಸಿಮೇಂಟ್ ತುಂಡು ಕೆಳಗಡೆ ಬಿದ್ದಿದೆ.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಮಾತನಾಡಿ, 7 ಲಕ್ಷದ ಈ ತಡೆಗೋಡೆ ಕಡಿಮೆ ವೆಚ್ಚದಲ್ಲಿ ಮಾಡಿ ಜಿಲ್ಲಾಧಿಕಾರಿ ಕಛೇರಿ ಮಾತ್ರವಲ್ಲದೆ ಸಾರ್ವಜನಿಕರಿಗೂ ಅಪಾಯವಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಇಲ್ಲಿ ಭೇಟಿ ನೀಡಿದರು ಕೂಡಾ ಪ್ರಯೋಜನವಾಗಲಿಲ್ಲ. ಈ ವಿಚಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಗಮನಕ್ಕೆ ತಂದಿದ್ದೇವೆ. ಸದ್ಯದಲ್ಲೇ ಅವರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ತಿಳಿಸಿದರು.
ವರದಿ: ಜ್ವಾನ್ಸನ್ ಪ್ರವೀಣ್