- ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ಅವರ “ರೈತರ ಭದ್ರತೆ, ದೇಶದ ಭದ್ರತೆ” ಪುಸ್ತಕ ಬಿಡುಗಡೆ
ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ಅವರು ಬರೆದ “ರೈತರ ಭದ್ರತೆ, ದೇಶದ ಭದ್ರತೆ” ಎಂಬ ಪುಸ್ತಕವನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಇಂದು ನಗರದ ಶಿವಾನಂದ ವೃತ್ತದಲ್ಲಿ ಇರುವ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಲಾಯ್ತು. ಈ ವೇಳೆ ಮಾತಾಡಿದ ಸಿದ್ದರಾಮಯ್ಯ, ನಾನು ಕೃಷಿ ಕುಟುಂಬದಿಂದಲೇ ಬಂದವನು. ಸ್ವಲ್ಪ ದಿನ ನಾನು ಹಸಿರು ಶಾಲನ್ನೇ ಹಾಕಿಕೊಂಡಿದ್ದೇ. ರಾಜಕೀಯದ ಜತೆಗೆ ರೈತ ಸಂಘದಲ್ಲಿದ್ದೆ. ಕೆಲವು ಭಿನ್ನಾಭಿಪ್ರಾಯಗಳಿಂದ ರೈತ ಸಂಘದಿಂದ ಹೊರ ಬರಬೇಕಾಯ್ತು. ನಾನು ರೈತ ಸಂಘದಿಂದಲೇ ಚುನಾವಣೆ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಪ್ರೊ. ನಂಜುಂಡಸ್ವಾಮಿ ಬೇಡ ಎಂದರು. ಹೀಗಾಗಿ ರೈತ ಸಂಘದಿಂದ ಹೊರ ಬಂದಿದ್ದೆ ಎಂದರು.
ರೈತ ಸಂಘದಿಂದ ಹೊರ ಬಂದಮೇಲೆ ಸಂಪೂರ್ಣ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೆ. ದಲಿತ, ರೈತ, ಕೂಲಿ ಕಾರ್ಮಿಕರೇ ಈ ದೇಶದ ಸಂಪತ್ತಿಗೆ ಕಾರಣ. ರೈತರೇ ಕೃಷಿ ಕ್ಷೇತ್ರದ ಉತ್ಪಾದಕರು. ಹೀಗಿದ್ದರೂ ರೈತರೇ ತಮ್ಮ ಬೆಳೆಗೆ ಬೆಲೆ ನಿಗದಿ ಮಾಡಲಾಗದ ಪರಿಸ್ಥಿತಿ ಇದೆ. ಬೆಂಕಿ ಪೊಟ್ಟಣ ತಯಾರಕ ಅದರ ಬೆಲೆ ನಿಗದಿ ಮಾಡಬೇಕಾದರೇ ರೈತ ಮಾತ್ರ ತಾನು ಬೆಳೆದ ರೇಟ್ ಫಿಕ್ಸ್ ಮಾಡುವ ಅಧಿಕಾರವಿಲ್ಲ ಎಂದರು.
ಇಂತಹ ಪರಿಸ್ಥಿತಿ ನಿರ್ಮಾಣವಾದ್ದರಿಂದಲೇ ರೈತರು ಶೋಷಣೆಗೆ ಒಳಗಾಗಿದ್ಧಾರೆ. ಈ ಬಗ್ಗೆ ರೈತರ ಭದ್ರತೆ, ದೇಶದ ಭದ್ರತೆ ಪುಸ್ತಕದಲ್ಲಿ ಸಾಕಷ್ಟು ಮಾಹಿತಿ ಇದೆ. ಪ್ರಮುಖವಾಗಿ ಭೂ ಸುಧಾರಣೆ ಬಗ್ಗೆ ಉತ್ತಮ ಮಾಹಿತಿ ಇದೆ. ನಾಗಮೋಹನದಾಸ್ ರೈತರ ಕುಟುಂಬದಿಂದ ಬಂದವರು. ಹಳ್ಳಿಗಾಡಿನ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚು ಅನುಭವ ಇದೆ ಎಂದರು.
ಹೀಗೆ ಮುಂದುವರಿದ ಸಿದ್ದರಾಮಯ್ಯ, ರೈತರಿಗೆ ಶೋಷಣೆವಾಗುತ್ತೇ ಎಂದು ಕಾಯ್ದೆ ತರುವುದು ಸರಿಯಲ್ಲ. ಇರುವ ಶೋಷಣೆ ತಪ್ಪಿಸಬಹುದಿತ್ತು. ಆದರೆ, ಎಪಿಎಂಸಿ ಕಾಯ್ದೆ ಜಾರಿಯಾಗಿದೆ. ಒಂದು ಕಡೆ ಭಾಷಣ ಮಾಡೋದು, ಮತ್ತೊಂದು ಕಡೆ ಕಾಯ್ದೆಯನ್ನ ಜಾರಿ ಮಾಡುವುದು. ಇದು ಸರ್ಕಾರದ ಅವೈಜ್ಞಾನಿಕ ತೀರ್ಮಾನ ಎಂದರು.
ಕೇಂದ್ರದ ಮುಂದೆ ರಾಜ್ಯ ಸರ್ಕಾರ ಕೋಲೆ ಬಸವನಂತಾಗಿದೆ. ಕೊರೋನಾದಿಂದಾಗಿ ಜನ ಸಾಯುತ್ತಿದ್ಧಾರೆ. ಇದೇ ವೇಳೆ ಏಕಾಏಕಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದಿದ್ದಾರೆ. ಈಗ ಇದರ ಅವಶ್ಯಕತೆ ಏನಿತ್ತು? ಈ ಕಾಯ್ದೆ ಜಾರಿಗೊಳಿಸಿ ಎಂದು ಸರ್ಕಾರಕ್ಕೆ ಯಾರಾದ್ರೂ ಹೇಳಿದ್ರಾ? ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ.
ಇದನ್ನೂ ನೋಡಿ: ರೈತರ ಭದ್ರತೆ ದೇಶದ ಭದ್ರತೆ ಜಸ್ಟೀಸ್ ಹೆಚ್.ಎಸ್.ನಾಗಮೋಹನದಾಸ್ ರವರ ಪುಸ್ತಕ ಬಿಡುಗಡೆ ಹಾಗೂ ವಿಚಾರಸಂಕಿರಣ
ಇನ್ನು, ಈ ಹಿಂದೆ ಜಾರಿಗೆ ತಂದಿದ್ದ ಕಾಯ್ದೆ ಗೇಣಿದಾರರ ರಕ್ಷಣೆಗಾಗಿಯೇ ಹೊರತು ಜಮೀನ್ದಾರರಿಗೆ ತಂದಿದ್ದಲ್ಲ. ಅರಸರ ಕಾಯ್ದೆಯ ಸೆಕ್ಷನ್‌ಗಳನ್ನೇ ಕೈಬಿಟ್ಟಿದ್ದಾರೆ. ಕಾಯ್ದೆ ತರಬೇಕಾದರೆ ತುರ್ತು ಅವಶ್ಯಕತೆ ಇರಬೇಕು. ಈಗ ಅಂತ ಅವಶ್ಯಕತೆಯೂ ಇಲ್ಲ. ಅದ್ಹೇಗೆ ತರಾತುರಿಯಲ್ಲಿ ಈ ಕಾಯ್ದೆಯನ್ನ ತಂದರು ಎಂದರು.