ನವದೆಹಲಿ: ನಾಲ್ವರು ರೈತರು ಸೇರಿ ಎಂಟು ಮಂದಿ ಸಾವಿಗೀಡಾದ ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ ‘ವ್ಯವಸ್ಥಿತ ದಾಳಿ’ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದು, ದೇಶದ ಆಡಳಿತ ಸರ್ವಾಧಿಕಾರಿತ ಹಿಡಿತದಲ್ಲಿದೆ ಎಂದು ಆರೋಪಿಸಿದರು.
ಹಿಂಸಾಚಾರ ನಡೆದ ಲಖಿಂಪುರಕ್ಕೆ ಕಾಂಗ್ರೆಸ್ ನಿಯೋಗದ ಭೇಟಿಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ, ಯೋಗಿ ಅದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ‘ರೈತರನ್ನು ಜೀಪ್ ಮೂಲಕ ಕೆಳಗೆ ತಳ್ಳಿ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ನಿನ್ನೆ ಪ್ರಧಾನಿ ಮೋದಿ ಲಖನೌಗೆ ಭೇಟಿ ನೀಡಿದ್ದರು. ಆದರೆ, ಅವರು ಲಖಿಂಪುರ್ ಖೇರಿಗೆ ಭೇಟಿ ನೀಡಲಿಲ್ಲ. ಇದು ರೈತರ ಮೇಲೆ ನಡೆಸಿರುವ ವ್ಯವಸ್ಥಿತ ದಾಳಿಯಾಗಿದೆ ಎಂದರು.
ಇದನ್ನು ಓದಿ: ರೈತರ ಮೇಲೆ ಕಾರು ಹರಿಸಿದ ಭಯಾನಕ ದೃಶ್ಯ ಮೊಬೈಲ್ ಸೆರೆ: ಧಾಳಿ ಮಾಡಲೆಂದೇ ಕಾರು ನುಗ್ಗಿಸಿದ್ದು
ದೇಶದಲ್ಲಿ ಸರ್ವಾಧಿಕಾರವಿದ್ದು, ಉತ್ತರಪ್ರದೇಶಕ್ಕೆ ರಾಜಕೀಯ ನಾಯಕರು ಭೇಟಿ ನೀಡಲು ಬಿಡುತ್ತಿಲ್ಲ. ಇವತ್ತು ನಾವು ಇಬ್ಬರು ಮುಖ್ಯಮಂತ್ರಿಗಳೊಂದಿಗೆ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸುತ್ತಿದ್ದೇವೆ. ಆದರೆ 144 ಸೆಕ್ಷನ್ ಹೇರಿ ಕೇವಲ ಮೂರು ಜನರಿಗೆ ಮಾತ್ರ ಅವಕಾಶ ನೀಡಿದ್ದಾರೆ. ನಾವೀಗ ಅಲ್ಲಿಗೆ ಹೋಗುತ್ತಿದ್ದೇವೆ. ನಾವು ಅಲ್ಲಿಗೆ ಹೋಗಿ ರೈತರಿಗೆ ಬೆಂಬಲ ಸೂಚಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವುದು ಪ್ರತಿಪಕ್ಷಗಳ ಕೆಲಸ ಎಂದ ರಾಹುಲ್ ಗಾಂಧಿ, ‘ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಅದು ಕೆಲಸ ಮಾಡಿದೆ. ನಾವು ಕೃಷಿ ಕಾಯ್ದೆಯ ವಿಷಯದಲ್ಲಿಯೂ ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇವೆ, ಆದರೆ ಸರ್ಕಾರವು ನಮಗೆ ಅವಕಾಶ ನೀಡುತ್ತಿಲ್ಲ. ಈ ವಿಷಯವನ್ನು ಪ್ರಸ್ತಾಪಿಸುವುದು ನಿಮ್ಮ (ಮಾಧ್ಯಮ) ಜವಾಬ್ದಾರಿ, ಆದರೆ, ನಾವು ಪ್ರಶ್ನೆಗಳನ್ನು ಕೇಳಿದಾಗ, ನೀವು (ಮಾಧ್ಯಮ) ರಾಜಕೀಯ ಮಾಡುತ್ತಿದ್ದೀರಿ ಎಂದು ನಮಗೆ ಹೇಳುತ್ತೀರಿ’ ಎಂದು ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಬಂಧಿಸಿರುವ ಕುರಿತು ಮಾತನಾಡಿ ರೈತರ ಬಗ್ಗೆ ಧ್ವನಿ ಎತ್ತಿದ ಪ್ರಿಯಾಂಕರನ್ನೂ ಬಂಧಿಸಿದ್ದಾರೆ. ಅವರು ರೈತರ ಸಮಸ್ಯೆಯ ಪ್ರಶ್ನೆಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಧ್ವನಿ ಎತ್ತುವವರನ್ನು ಬಂಧಿಸುವುದು ಖಂಡನೀಯ ಎಂದರು.
ಇದನ್ನು ಓದಿ: ಕೇಂದ್ರ ಸಚಿವರ ಪುತ್ರನಿಂದ ರೈತರ ಮೇಲೆ ಕಾರ್ ಹತ್ತಿಸಿದ ಪ್ರಕರಣ : 8ಕ್ಕೇರಿದ ರೈತರ ಸಾವಿನ ಸಂಖ್ಯೆ
ಸೋಮವಾರ ಸೀತಾಪುರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಲಖನೌ ಪೊಲೀಸ್ ಆಯುಕ್ತರು ಹೇಳಿಕೆ ನೀಡಿ, ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್ ಗಾಂಧಿಯವರಿಗೆ ಸರ್ಕಾರ ಅವಕಾಶ ನೀಡಿಲ್ಲ. ಲಖನೌಗೆ ಅವರು ಬಂದಿದ್ದೇ ಆದರೆ, ವಿಮಾನ ನಿಲ್ದಾಣದಲ್ಲಿಯೇ ಲಖಿಂಪುರ್ ಖೇರಿ ಹಾಗೂ ಸಿತಾಪುರಕ್ಕೆ ಭೇಟಿ ನೀಡದಂತೆ ಮನವಿ ಮಾಡಿಕೊಳ್ಳಲಾಗುತ್ತದೆ.
‘ಜಿಲ್ಲಾಧಿಕಾರಿ ಅವರಿಂದ ಲಿಖಿತ ಪತ್ರ ಬಂದಿದ್ದು, ಸ್ಥಳದಲ್ಲಿ ನಿಷೇಧಾಜ್ಞೆ ಇದೆ ಹಾಗೂ ಅವರ ಭೇಟಿಯಿಂದಾಗಿ ಸಮಸ್ಯೆ ಸೃಷ್ಟಿಯಾಗಬಹುದು. ಹೀಗಾಗಿ ಅವರ ಭೇಟಿಗೆ ಅವಕಾಶ ಕೊಡುವುದಿಲ್ಲ’ ಎಂದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಹುಲ್ ಗಾಂಧಿಯವರನ್ನು ತಡೆಯುವಂತೆ ಲಖಿಂಪುರ್ ಖೇರಿ ಹಾಗೂ ಸೀತಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್‌ಪಿ ಮನವಿ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ.