ಬೆಂಗಳೂರು: ಸ್ವಾತಂತ್ರ ಹೋರಾಟಗಾರ ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ, ಅಪ್ಪಟ ಭಾರತೀಯ ಕ್ರಾಂತಿಕಾರಿ ತನ್ನ 23 ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್ ರವರ ಕುರಿತು 10ನೇ ತರಗತಿ (ಕನ್ನಡ ವಿಷಯ ) ಯಲ್ಲಿ ಇದ್ದ ಪಾಠವನ್ನು ಕೈ ಬಿಟ್ಟು, ತಮ್ಮ ಪರಮಾಪ್ತರಿಗೆ ಮಣೆ ಹಾಕವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಮೂಲಕ ಮಹಾನ್ ದೇಶಪ್ರೇಮಿ ಭಗತ್ ಸಿಂಗ್ ರವರಿಗೆ ರಾಜ್ಯ ಸರಕಾರ ಅವಮಾನ ಮಾಡಿದೆ ಎಂದು, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ರಾಜ್ಯ ಅಧ್ಯಕ್ಷ ಅಮರೇಶ ಕಡಗದ ತೀವ್ರವಾಗಿ ಖಂಡಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಪಠ್ಯಪುಸ್ತಕದಲ್ಲಿನ 5ನೇ ಪಾಠವಾಗಿ “ ಭಗತ್ ಸಿಂಗ್ ರವರ ಪಾಠವನ್ನು ಕೈಬಿಟ್ಟು ಕೆ.ಬಿ. ಹೆಗ್ಡೆವಾರ್ ಅವರ ಭಾಷಣವನ್ನ ಸೇರಿಸಲಾಗಿದೆ. ಆಗಾದರೆ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ರೋಹಿತ್ ಚಕ್ರತೀರ್ಥ ರವರಿಗೆ ಹೆಡ್ಡೆವಾರ್ ಆದರ್ಶ ಆಗಿರಬಹುದು, ಆದರೆ ಈ ದೇಶಕ್ಕೆ ಭಗತ್ ಸಿಂಗ್ ಆದರ್ಶ ಎಂಬುದನ್ನು ಮರೆಯಬಾರದು. ಜೊತೆಗೆ ಪತ್ರಕರ್ತ ಪಿ. ಲಂಕೇಶ್ ರವರ “ಮೃಗ ಮತ್ತು ಸುಂದರಿ, ಸಾರಾ ಅಬೂಬಕರ್ ರವರ “ಯುದ್ಧ”, ಎ.ಎನ್.ಮೂರ್ತಿ ರಾವ್ ರವರ “ವ್ಯಾಘ್ರ ಗೀತೆ” ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ’ಯನ್ನು ಕೈಬಿಡಲಾಗಿದೆ. ಇದರ ಬದಲಿಗೆ ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಸೇರಿಸಲಾಗಿದೆ ಎಂದು ತಿಳುದು ಬಂದಿದೆ.
ಹಾಗಾಗಿ ಈ ಹಿಂದೆ ಇದ್ದ ಪಾಠಗಳನ್ನು ಪಠ್ಯದಲ್ಲಿ ಎತಾವತ್ತಾಗಿ ಮುಂದುವರೆಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ. ಮತ್ತು ಸರ್ಕಾರವನ್ನು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಎಸ್.ಎಫ್.ಐ ರಾಜ್ಯದಾದ್ಯಂತ ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಶಿಕ್ಷಣ ತಜ್ಞರನ್ನು ಸೇರಿಸಿ ತೀವ್ರ ಹೋರಾಟ ಮಾಡುತ್ತವೆ ಎಂದು ಎಸ್.ಎಫ್.ಐ ಎಚ್ಚರಿಸಿದೆ.