ಸ್ವಾತಂತ್ರ್ಯ ಹೋರಾಟದಲ್ಲಿ ಬೆನ್ನು ಮಾಡಿದವರ ವೈಭವೀಕರಣ ಸಲ್ಲದು: ಪಿಣರಾಯಿ ವಿಜಯನ್‌

ಕಣ್ಣೂರು: “ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಹೋರಾಟದ ಸಂದರ್ಭದಲ್ಲಿ ಹೋರಾಟದಿಂದ ಹಿಂದೆ ಸರಿದವರನ್ನು ವೈಭವೀಕರಿಸುವುದು ಸರಿಯಾದದ್ದಲ್ಲ. ಕೇರಳ ರಾಜ್ಯವು ಯಾವಾಗಲೂ ಇಂತಹ ವಿವಾದಾತ್ಮಕ ವ್ಯಕ್ತಿಗಳಿಂದ ಮತ್ತು ಅವರನ್ನು ವೈಭವೀಕರಿಸುವುದರಿಂದ ಅಂತರ ಕಾಯ್ದುಕೊಂಡು ಬಂದಿದೆ. ಯಾವುದೇ ಪ್ರತಿಗಾಮಿ ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕಣ್ಣೂರು ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಕೋರ್ಸುಗಳ ಪಠ್ಯಕ್ರಮವನ್ನು ವಸ್ತುನಿಷ್ಠವಾಗಿ ಇಲ್ಲದಿದ್ದು, ಇವುಗಳಲ್ಲಿನ  ಪಠ್ಯಕ್ರಮದಲ್ಲಿ ಸಾರ್ವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಕುರಿತಾದ ವಿಚಾರಗಳ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮೇಲಿನಂತೆ ತಿಳಿಸಿದ್ದಾರೆ.

ಈ ವಿಷಯವನ್ನು ಪರಿಶೀಲಿಸಲು ವಿಶ್ವವಿದ್ಯಾನಿಲಯವು ಈಗಾಗಲೇ ಇಬ್ಬರು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸಮಿತಿಯು ಪಠ್ಯಕ್ರಮವನ್ನು ಪರಿಶೀಲಿಸುತ್ತದೆ ಮತ್ತು ಸಮಿತಿಯ ಶಿಫಾರಸುಗಳ ಪ್ರಕಾರ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಣ್ಣೂರು ವಿಶ್ವವಿದ್ಯಾನಿಲಯವು ಸಾವರ್ಕರ್ ಅವರ ‘ಹಿಂದುತ್ವ: ಹಿಂದೂ ಯಾರು’, ಗೋಲ್ವಾಲ್ಕರ್ ಅವರ ‘ಬಂಚ್ ಆಫ್‌ ಥಾಟ್ಸ್‌’, ‘ವಿ ಓರ್‌ ಅವರ್‌ ನೇಷನ್‌ಹುಡ್‌ ಡಿಫೈನೆಡ್‌’ ಕೃತಿಯನ್ನು ಎಂಎ(ಕಲಾ ಸ್ನಾತಕೋತ್ತರ) ಆಡಳಿತ ಮತ್ತು ರಾಜಕೀಯದ ವಿಷಯದ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.

ದೀನದಯಾಳ್ ಉಪಾಧ್ಯಾಯರ ಸಮಗ್ರ ಮಾನವತಾವಾದ ಬಾಲರಾಜ್ ಮಧೋಕ್ ಅವರ ‘ಭಾರತೀಯೀಕರಣ: ಏನು, ಏಕೆ ಮತ್ತು ಹೇಗೆ?’ ಭಾಗಗಳು ಕೂಡ ಪಠ್ಯಕ್ರಮದಲ್ಲಿ ಒಳಗೊಂಡಿವೆ.

ಅಲ್ಲದೆ, ತಜ್ಞರ ಸಮಿತಿಯಿಂದ ಅನುಮೋದನೆಗೊಂಡ ಪುಸ್ತಕಗಳನ್ನು ಮೂರನೇ ಸೆಮಿಸ್ಟರ್ ಪಠ್ಯಕ್ರಮದ 2 ನೇ ಘಟಕದಲ್ಲಿ ಸೇರಿಸಲಾಗಿದೆ, ಇದನ್ನು ‘ಭಾರತೀಯ ರಾಜಕೀಯ ಚಿಂತನೆಯಲ್ಲಿ ರಾಷ್ಟ್ರ’ ಎಂದು ಹೆಸರಿಸಲಾಗಿದೆ. ರವೀಂದ್ರನಾಥ ಟ್ಯಾಗೋರ್‌ರವರ ʻರಾಷ್ಟ್ರೀಯತೆʼ, ಅರಬಿಂದೋ ಅವರ ʻರಾಷ್ಟ್ರೀಯತೆ ಧರ್ಮʼ, ಮಹಾತ್ಮ ಗಾಂಧಿ ಅವರ ʻರಾಷ್ಟ್ರೀಯತೆಗೆ ದ್ವೇಷ ಅಗತ್ಯವೇ?ʼ, ಬಿ ಆರ್ ಅಂಬೇಡ್ಕರ್ ಅವರ ʻಯಾರು ರಾಷ್ಟ್ರವನ್ನು ರೂಪಿಸುತ್ತಾರೆ?ʼ, ಜವಾಹರಲಾಲ್ ನೆಹರು ಅವರ ʻರಾಷ್ಟ್ರೀಯತೆ ಮತ್ತು ಅಂತರಾಷ್ಟ್ರೀಯತೆ ಮತ್ತು ಸಂಸ್ಕೃತಿ ಎಂದರೇನು?ʼ, ಮತ್ತು ಕಾಂಚ ಇಲಯ್ಯರವರ ʻಬಫಾಲೋ ನ್ಯಾಶನಲಿಸಂʼ ಪುಸ್ತಕಗಳು ಸೇರಿವೆ.

ವಿಶ್ವವಿದ್ಯಾಲಯದ ಉಪಕುಲಪತಿ ಗೋಪಿನಾಥ್ ರವೀಂದ್ರನ್  “ಕೇಸರೀಕರಣದ ಆರೋಪ ನಿರಾಧಾರ, ಇಂತಹ ಆರೋಪಗಳನ್ನು ಕಣ್ಣೂರು ವಿವಿ ವಿರುದ್ಧ ಮಾಡಿದರೆ ಅಂತಹುದೇ ಆರೋಪಗಳನ್ನು ಜವಾಹರಲಾಲ್ ನೆಹರೂ ವಿವಿ ಕುರಿತೂ ಮಾಡಬಹುದು. ವಿ ಡಿ ಸಾವರ್ಕರ್ ಕುರಿತ ಪಠ್ಯ ಅಲ್ಲಿನ ಪಠ್ಯಕ್ರಮದಲ್ಲೂ ಸೇರಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

“ಈ ವಿಚಾರದ ಕುರಿತಂತೆ ವಿದ್ಯಾರ್ಥಿಗಳ ವಿರೋಧ ಎದುರಿಸಿರುವ ಉಪಕುಲಪತಿ, ಪಠ್ಯಕ್ರಮದಲ್ಲಿ ಸಾರ್ವರ್ಕರ್, ಗೋಲ್ವಾಲ್ಕರ್ ಸೇರ್ಪಡೆ ತಪ್ಪಲ್ಲ” ಎಂದಿದ್ದಾರೆ.

ರಾಜ್ಯದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರು ಈ ವಿವಾದ ಕುರಿತಂತೆ ಸ್ಪಷ್ಟೀಕರಣ ಕೇಳಿರುವ ಬಗ್ಗೆ ಉಪಕುಲಪತಿಗಳು ಈಗಾಗಲೇ ಉತ್ತರಿಸಿರುವುದಾಗಿ ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯದ ಹೊರಗಿನ ತಜ್ಞರನ್ನು ಒಳಗೊಂಡ ಸಮಿತಿಯು ತನ್ನ ವರದಿಯನ್ನು ಐದು ದಿನಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಅದರ ನಂತರ ಪಠ್ಯಕ್ರಮದ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಗೋಪಿನಾಥ್ ರವೀಂದ್ರನ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *