ಸ್ವಾಮಿ ವಿವೇಕಾನಂದ ಅವರ 160ನೇ ಜಯಂತಿಯ ಶುಭಾಶಯಗಳು. ಜಾತಿ ಪದ್ಧತಿ ನಾಶವಾಗಬೇಕೆಂದು ಹುಸಿ ಮಾತುಗಳನ್ನಾಡುವ ಮಠಾಧಿಪತಿಗಳಿಗೆ ಗುಣಪಾಠವಾಗುವ ಆದರ್ಶ ಮಾದರಿಯೊಂದು ನಮಗೆ ಸ್ವಾಮಿ ವಿವೇಕಾನಂದರ ಜೀವನಗಾಥೆಯಲ್ಲಿ ಸಿಗುತ್ತದೆ. ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶ ಸಂಚಾರ ಮಾಡುತ್ತಿದ್ದಾಗ ನಡೆದ ಒಂದು ಘಟನೆ ಅತ್ಯಂತ ಹೃದಯವೇಲಿಯಾದುದು.
ಸ್ವಾಮೀಜಿಗಳಿಗೆ ಆದರ್ಶವಾಗುವ ವ್ಯಕ್ತಿತ್ವದ ಮಾದರಿಯಾದ ಸ್ವಾಮಿ ವಿವೇಕಾನಂದರು ತಮ್ಮದೇ ಮಾತುಗಳಲ್ಲಿ ಆ ಘಟನೆಯ ನೆನಪನ್ನು ಹೀಗೆ ಬಿಚ್ಚಿಡುತ್ತಾರೆ;
“ಓಮ್ಮೆ ನಾನು ಆಗ್ರಾದಿಂದ ಪೂನಾಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆ. ನನ್ನಲ್ಲಿ ಒಂದು ಬಿಡಿಗಾಸೂ ಇರಲಿಲ್ಲ. ಬೃಂದಾವನಕ್ಕೆ ಇನ್ನೂ ಒಂದೆರಡು ಮೈಲಿ ದೂರವಿತ್ತು. ಹಾದಿಯ ಪಕ್ಕದಲ್ಲಿ ಒಬ್ಬ ಮನುಷ್ಯ ಗುಡಿ ಗುಡಿ ಸೇದುತ್ತಾ ಕುಳಿತಿದ್ದ. ಆ ತಕ್ಷಣ ನನಗೂ ಸೇದಬೇಕೆಂಬ ಆಸೆಯಾಯಿತು. ನಾನು ಆ ಮನುಷ್ಯನಿಗೆ ನಿನ್ನ ಚಿಲುಮೆಯಲ್ಲಿ ಒಮ್ಮೆ ಸೇದಲು ನನಗೆ ಅವಕಾಶ ಕೊಡುವೆಯಾ?” ಎಂದೆ. ಆ ಮನುಷ್ಯ ನನಗೆ ಅದನ್ನು ಕೊಡಲು ತುಂಬಾ ಹಿಂಜರಿಯುತ್ತಾ, “ನಾನು ಜಲಗಾರ” ಎಂದ. ಇನ್ನೂ ನನ್ನಲ್ಲಿ ಹಿಂದೂ ಸಂಸ್ಕಾರದ ಪ್ರಭಾವವಿತ್ತು. ನಾನು ತಕ್ಷಣ ಹಿಂದೆ ಸರಿದು ಸೇದದೆ ಮುಂದಕ್ಕೆ ಹೊರಟೆ. ಕೊಂಚ ದೂರ ಹೋಗುವಷ್ಟರಲ್ಲಿಯೇ ನನಗೆ ನೆನಪಿಗೆ ಬಂತು. ನಾನೊಬ್ಬ ಸನ್ಯಾಸಿ. ಜಾತಿ, ಮತ, ಸಂಸಾರ, ಗೌರವ ಎಲ್ಲವನ್ನೂ ತ್ಯಜಿಸಿದವನು, ಆದರೂ ಆ ಮನುಷ್ಯ ಕಸ ಗುಡಿಸುವ ಜಾಡಮಾಲಿ ಎಂದ ಕೂಡಲೇ ಹಿಂದಕ್ಕೆ ಸರಿದೆ. ಅವನು ಮುಟ್ಟಿದ ಗುಡಿಗುಡಿಯನ್ನು ಸೇದದೆ ಹೊರಟು ಬಂದೆ ಎಂಬುದು ನೆನಪಿಗೆ ಬಂದಿತು. ಈ ಯೋಚನೆ ನನ್ನ ಮನಸ್ಸನ್ನು ಕ್ಷುಬ್ದಗೊಳಿಸಿತು. ನಾನಾಗಲೇ ಅರ್ಧ ಮೈಲಿ ದೂರ ಬಂದಿದ್ದೆ. ಪುನಃ ನಾನು ಹಿಂತಿರುಗಿ ಆ ಜಲಗಾರನಿದ್ದಲ್ಲಿಗೆ ಬಂದೆ, ಆವನಿನ್ನೂ ಅಲ್ಲಿಯೇ ಕುಳಿತಿದ್ದ. ನಾನು ತಕ್ಷಣ ಅವನಿಗೆ, ‘ನನ್ನ ಪ್ರಿಯ ಗೆಳೆಯಾ, ದಯವಿಟ್ಟು ನನಗೊಂದು ಗುಡಿ ಗುಡಿಯನ್ನು ಸಿದ್ಧಪಡಿಸು’ ಎಂದೆ. ಅವನು ಏನೇನು ಅಡ್ಡಿಗಳನ್ನು ಹೇಳಿದರೂ ಕೇಳದೆ ಅದನ್ನು ಕೊಟ್ಟೇ ತೀರಬೇಕೆಂದು ಹಠ ಹಿಡಿದೆ. ಆತ ನನಗೆ ಚಿಲುಮೆಯನ್ನು ಸಿದ್ಧಪಡಿಸಲೇಬೇಕಾಗಿ ಬಂತು. ನಂತರ ನಾನು ಸಂತೋಷದಿಂದ ಆ ಚಿಲುಮೆಯನ್ನು ಸೇದಿ ಬೃಂದಾವನಕ್ಕೆ ಹೊರಟೆ” (10-343-44).
ಇದು ಸ್ವಾಮಿ ವಿವೇಕಾನಂದರು ಜಲಗಾರನ ಜತೆ ಯಾವುದೇ ಜಾತಿ ಸೂತಕವಿಲ್ಲದೆ ಗುಡಿ ಗುಡಿ ಸೇದಿದ ಜಾತ್ಯತೀತ ಹೃದಯವಂತಿಕೆಯನ್ನು ತೋರಿಸುತ್ತದೆ,
ಆದರೆ, ಆಚಾರ್ಯತ್ರಯರಲ್ಲಿ ಒಬ್ಬನಾದ ಆದಿಶಂಕರಾಚಾರ್ಯನು ಶ್ವಪಚನೊಬ್ಬನಿಗೆ ಎದುರಾಗಿ ‘ದೂರ ಸರಿ’ ಎಂದಾಗ ಆ ಸ್ವಪಚನು ‘ಆತ್ಮದಿಂದ ದೂರ ಸರಿಯಲೋ ದೇಹದಿಂದ ದೂರ ಸರಿಯಲೊ?’ ಎಂದು ಪ್ರಶ್ನಿಸಲು, ಆ ಸ್ವಪಚನ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿ ಹೋಗುತ್ತಾನೆ. ಆ ಈಶ್ವರನೇ ಶ್ವಪಚನ ವೇಷದಲ್ಲಿ ಬಂದು ಶಂಕರನಿಗೆ ಬ್ರಹ್ಮಜ್ಞಾನ ಬೋಧಿಸಿದನೆಂದು ಶಂಕರಾಚಾರ್ಯನ ಭಕ್ತರು ಕಥೆ ಕಟ್ಟಿದ್ದಾರೆ. ಆದರೆ ಶಂಕರಾಚಾರ್ಯನು ಬ್ರಹ್ಮಜ್ಞಾನ ಪಡೆದ ನಂತರವಾದರೂ ಜಾತಿಯಿಂದ ಮುಕ್ತನಾಗಲಿಲ್ಲ. ‘ವೇದ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು, ಉಚ್ಚರಿಸಿದರೆ ನಾಲಗೆ ಕತ್ತರಿಸಬೇಕು.’ ಎಂದು ಬ್ರಹ್ಮಸೂತ್ರ ಭಾಷ್ಯ ಬರೆದ ಜನವಿರೋಧಿಯಾಗಿರುತ್ತಾನೆ. ಬ್ರಹ್ಮಸೂತ್ರ ಭಾಷ್ಯ: ಅಧ್ಯಾಯ1, ಪಾದ3, ಅಧಿಕರ್ಣ ಸೂತ್ರ 38, ಪುಟ 155- 59.
ಸಂಗ್ರಹಾನುವಾದ: ಡಾ.ವಡ್ಡಗೆರೆ ನಾಗರಾಜಯ್ಯ