ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಬೆಂಬಲಿಸುವ ಭರದಲ್ಲಿ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಮೀಜಿಗಳು ತಲೆಯ ಮೇಲೆ ಪೇಟಾ ಹಾಕುವುದಿಲ್ಲವಾ? ಎಂದು ಮೈಸೂರಿನಲ್ಲಿ ಮಾತನಾಡಿರುವ ವಿಚಾರ ಇದೀಗ ವಿವಾದದಕ್ಕೆ ಕಾರಣವಾಗಿದೆ.
‘ಜೈನ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಲ್ವಾ? ಕೆಲವೆಡೆ ಹಿಂದೂ ಹೆಣ್ಣು ಮಕ್ಕಳು ಹಾಕಲ್ವಾ? ಸ್ವಾಮೀಜಿಗಳು ಕೂಡಾ ತಲೆ ಮೇಲೆ ಬಟ್ಟೆ ಹಾಕಲ್ವಾ? ಮುಸ್ಲಿಂ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹಾಕ್ಕೊಳ್ಲಿ ಬಿಡಿ. ಅದರಿಂದ ನಿಮಗೇನು ತೊಂದರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜೈನ್ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳುವುದಿಲ್ಲವೇ? ಸ್ವಾಮೀಜಿ ಹಾಕಿಕೊಳ್ಳುವುದಿಲ್ಲವೇ, ನಿಮಗೇನು ತೊಂದರೆʼ ಎಂದು ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ಹಿಜಾಬ್ ವಿವಾದ ಹುಟ್ಟುಹಾಕಿದ್ದೇ ಬಿಜೆಪಿಯವರು. ಎರಡೂ ಧರ್ಮದವರನ್ನು ಕರೆದು ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ದೊಡ್ಡದಾಗಿಸಿದ್ದಾರೆ’ ಎಂದು ದೂರಿದರು.
ಅಮಾನವೀಯ: ‘ಜಾತ್ರೆಗಳಲ್ಲಿ ಯಾರು ಬೇಕಾದರೂ ವ್ಯಾಪಾರ ಮಾಡಬಹುದು. ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಹೇರುತ್ತಿರುವುದು ಅಮಾನವೀಯ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಸ್ಲಿಂ ವರ್ತಕರನ್ನು ಬಹಿಷ್ಕರಿಸುವಂತೆ ಬಿಜೆಪಿಯವರೇ ವಿವಿಧ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಕ್ತದ ಅಗತ್ಯ ಬಿದ್ದಾಗ ಯಾವುದೇ ಜಾತಿಯವನ ರಕ್ತವನ್ನಾದರೂ ದೇಹಕ್ಕೆ ಸೇರಿಸಿಕೊಳ್ಳುತ್ತೇವೆ. ಇದೇ ಜಾತಿಯವನ ರಕ್ತ ಬೇಕು ಎಂದು ಕೇಳುತ್ತೇವಾ? ಜೀವ ರಕ್ಷಿಸಲು ರಕ್ತ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಇರುತ್ತದೆ. ನಮಗೆ ಬೇಕಿರುವುದು ಮನುಷ್ವತ್ವ’ ಎಂದರು.
ಸ್ವಾಮೀಜಿಗಳ ಶಿರವಸ್ತ್ರ ಮತ್ತು ಶಾಲಾ ಸಮವಸ್ತ್ರಕ್ಕೂ ಎಲ್ಲಿಯ ಹೋಲಿಕೆ, ಯಾಕೆ ಹೋಲಿಕೆ? ಎಂದು ರಾಜ್ಯದಲ್ಲಿನ ಕೆಲ ಸ್ವಾಮೀಜಿಗಳು ಕೇಳಿದ್ದಾರೆ. ಇನ್ನು ಸಿದ್ದರಾಮಯ್ಯ ವಿರುದ್ಧ ಆಡಳಿತಾರೂಢ ಬಿಜೆಪಿ ಪಕ್ಷ ಮುಗಿಬಿದ್ದಿದೆ.
ಸಿದ್ದರಾಮಯ್ಯರ ದಿಢೀರ್ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಂಡಂತಿದ್ದಾರೆ. ಕೆಲ ಶಾಸಕರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಕಾರ ಸೂಚಿಸಿದ್ದಾರೆ. ಈ ವಿಚಾರ ಸದ್ಯಕ್ಕೆ ಅನಗತ್ಯವಾಗಿತ್ತಾ? ಬೇರೆ ಉದಾಹರಣೆ ನೀಡಬಹುದಿತ್ತಲ್ಲವಾ ಎಂಬ ನಿಲುವು ಕೆಲ ನಾಯಕರದ್ದಾಗಿದೆ.
‘ಸಿದ್ದರಾಮಯ್ಯ ಮಠಾಧೀಶರ ಸಮೂಹವನ್ನೇ ಅವಮಾನಿಸಿದ್ದಾರೆ. ಅವರು ಕೂಡಲೇ ಮಠಾಧೀಶರ ಕ್ಷಮೆ ಕೋರಬೇಕು. ಹಿಂದೂ ಧರ್ಮ, ಸಂಸ್ಕೃತಿಯನ್ನು ಹೀಯಾಳಿಸುವುದು ಸಿದ್ದರಾಮಯ್ಯ ಅವರ ಚಟ’ ಎಂದು ಕೆಲ ಸ್ವಾಮೀಜಿಗಳು ಆಕ್ರೋಶಗೊಂಡಿದ್ದಾರೆ.