ನಾ ದಿವಾಕರ
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿಯ ಮಾರ್ಗಗಳು ಸುಗಮವಾಗುತ್ತವೆ ಎನ್ನುವುದೊಂದು ನಂಬಿಕೆ. ಇದಕ್ಕೆ ಪೂರಕವಾಗಿ ಬೆಳೆದುಬಂದಿರುವ ಮತ್ತೊಂದು ನಂಬಿಕೆ ಎಂದರೆ ಕೇಂದ್ರದಲ್ಲಿ ಅನ್ಯ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯ ಸರ್ಕಾರದ ಅಗತ್ಯತೆಗಳಿಗೆ ಪೂರಕವಾಗಿ ಅನುದಾನ, ನೆರವು ಬಿಡುಗಡೆಯಾಗುವುದಿಲ್ಲ ಎನ್ನುವುದು. ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಸರ್ಕಾರ ದೃಢ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ, ಸಮ್ಮಿಶ್ರ ಸರ್ಕಾರಗಳಲ್ಲಿರುವಂತೆ ಅನಿಶ್ಚಿತತೆ ಕಾಡುವುದಿಲ್ಲ ಎನ್ನುವುದು ಮೂರನೆಯ ನಂಬಿಕೆ. ಯಾವುದೇ ಪಕ್ಷ ಸರ್ಕಾರ ರಚಿಸಿದರೂ, ಎಲ್ಲ ಜಾತಿ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡುವ ರೀತಿಯಲ್ಲಿ ಆಡಳಿತ ಸೂತ್ರ ರೂಪಿಸಿದರೆ ಸಾಮುದಾಯಿಕ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುವುದು ಮತ್ತೊಂದು ನಂಬಿಕೆ.
ಈ ಎಲ್ಲ ನಂಬಿಕೆಗಳನ್ನೂ ಬುಡಮೇಲು ಮಾಡುವ ಚಾಣಾಕ್ಷತೆ ಕಾರ್ಪೋರೇಟ್ ಪ್ರೇರಿತ ರಾಜಕಾರಣಕ್ಕೆ ಇರುವುದನ್ನು ಕರ್ನಾಟಕದ ರಾಜಕೀಯ ಬೆಳವಣಿಗೆಗಳಲ್ಲೇ ಗುರುತಿಸಬಹುದು. ರಾಜ್ಯ ಇಂದು ಎರಡು ಬಂಡವಾಳಗಳ ನಡುವೆ ಸಿಲುಕಿದೆ. 2024ರ ಮುನ್ನ ನವ ಉದಾರವಾದದ ಹೊಸ ಕಾರ್ಯಸೂಚಿಗಳನ್ನು ಕ್ಷಿಪ್ರಗತಿಯಲ್ಲಿ ಅನುಷ್ಟಾನಗೊಳಿಸಿ, ರಾಜ್ಯದ ಸಂಪನ್ಮೂಲಗಳನ್ನು ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಹಣಕಾಸು ಬಂಡವಾಳ ರಾಜ್ಯದ ಅರ್ಥವ್ಯವಸ್ಥೆಯ ಮೇಲೆ ತನ್ನ ಆಧಿಪತ್ಯ ಸಾಧಿಸಿದೆ. ಮತ್ತೊಂದೆಡೆ ಅಧಿಕಾರ ರಾಜಕಾರಣದಲ್ಲಿ ಸ್ಥಿರವಾಗಿ ನೆಲೆಯೂರಲು ಎಲ್ಲ ಪಕ್ಷಗಳಿಗೂ ಜಾತಿ ಒಂದು ಬಂಡವಾಳವಾಗಿ ರೂಪುಗೊಂಡಿದೆ. ಬಹುಶಃ ಈ ಜಾತಿ ಬಂಡವಾಳವೇ ರಾಜ್ಯದ ಭವಿಷ್ಯ ರಾಜಕಾರಣದ ದಿಕ್ಸೂಚಿಯಾಗುವ ಸಾಧ್ಯತೆಗಳಿವೆ.
ಇದನ್ನು ಓದಿ: ಲಿಂಗಾಯತರ ವಿರೋಧ ಕಟ್ಟಿಕೊಳ್ಳದೆ ತಂತ್ರ ಹೆಣೆದ ಬಿಜೆಪಿ, ಹಿಂದುತ್ವದ ಅಜೆಂಡ ಸಿಎಂ ಆಯ್ಕೆಗೆ ಮುಖ್ಯವಾಯಿತೆ?!
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಖಂಡಿಸುತ್ತಲೇ ಜನಮನ್ನಣೆ ಗಳಿಸಿದ ಬಿಜೆಪಿ ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೇವಲ ಇಬ್ಬರು ನಾಯಕರ ಅಣತಿಯಂತೆ ಸರ್ಕಾರಗಳನ್ನು ಪಲ್ಲಟಗೊಳಿಸುವ ನೂತನ ಸಂಸ್ಕೃತಿಗೆ ನಾಂದಿ ಹಾಡಿದೆ. ಒಂದು ರಾಜ್ಯದ ಜನತೆ ಚುನಾವಣೆಗಳಲ್ಲಿ ಆಯ್ಕೆ ಮಾಡುವ ಪಕ್ಷಗಳು ಮತ್ತು ನಾಯಕರು ಕಾರ್ಪೋರೇಟ್ ಮಾರುಕಟ್ಟೆಯ ನಿಯಂತ್ರಣದಲ್ಲಿದ್ದರೆ, ಈ ಶಾಸಕರು ರಚಿಸುವ ಸರ್ಕಾರಗಳು ಆಡಳಿತ ನಿರ್ವಹಣೆಗಿಂತಲೂ ಹೆಚ್ಚಾಗಿ ಜಾತಿ ಸಮತೋಲನವನ್ನು ಕಾಪಾಡುವ ಯಂತ್ರಗಳಾಗಿ ಪರಿಣಮಿಸುತ್ತವೆ. ಕರ್ನಾಟಕದ ಜಾತಿ ರಾಜಕಾರಣ ವಿಧಾನಸೌಧದ ಮೆಟ್ಟಿಲ ಮೇಲಿದ್ದುದು ಈಗ ಸಭಾಧ್ಯಕ್ಷರ ಪೀಠದವರೆಗೂ ತಲುಪಿರುವುದು ಯಡಿಯೂರಪ್ಪ ಅವರ ಪದಚ್ಯುತಿಯಲ್ಲಿ ಸ್ಪಷ್ಟವಾಗಿದೆ. ಚುನಾಯಿತ ಸರ್ಕಾರದ ಮುಖ್ಯಮಂತ್ರಿಯೊಬ್ಬರಿಗೆ ಒಂದು ನಿರ್ದಿಷ್ಟ ಜಾತಿಯ ಮಠೋದ್ಯಮಿಗಳು ಒತ್ತಾಸೆಯಾಗಿ ನಿಲ್ಲುವ ಮೂಲಕ ಕಾವಿಧಾರಿಗಳ ರಾಜಕೀಯ ಪ್ರವೇಶಕ್ಕೂ ನಾಂದಿ ಹಾಡಲಾಗಿದೆ.
ವೀರಶೈವ-ಲಿಂಗಾಯತ ಮಠೋದ್ಯಮಿಗಳ ಒತ್ತಡಕ್ಕೆ ಮಣಿದಿರುವ ಬಿಜೆಪಿ ಹೈಕಮಾಂಡ್ ಕೊನೆಗೂ ಜಾತಿ ರಾಜಕಾರಣದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂದುವರೆದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿರುವುದರ ಹಿಂದೆ ಜಾತಿ ರಾಜಕಾರಣದೊಂದಿಗೇ ಹಿಂದುತ್ವ ರಾಜಕಾರಣದ ಹೆಜ್ಜೆ ಗುರುತುಗಳನ್ನೂ ಗಮನಿಸಬೇಕಿದೆ. ಬೊಮ್ಮಾಯಿ ಅವರ ಪೂರ್ವಾಶ್ರಮದ ಹಿನ್ನೆಲೆಯಲ್ಲಿ ರಾಜ್ಯದ ವಿರೋಧ ಪಕ್ಷಗಳಷ್ಟೇ ಅಲ್ಲದೆ, ಸಾರ್ವಜನಿಕ ವಲಯದಲ್ಲೂ ಸಹ ನೂತನ ಮುಖ್ಯಮಂತ್ರಿಯ ಆಯ್ಕೆಯನ್ನು ಸ್ವಾಗತಿಸುತ್ತಿರುವುದು, 1998ರ ವಾಜಪೇಯಿ ಸರ್ಕಾರದ ಪ್ರಹಸನವನ್ನು ನೆನಪಿಸುತ್ತದೆ. ಎಲ್ಲರಿಗೂ ಸಲ್ಲುವ ಅಥವಾ ಎಲ್ಲರನ್ನೂ ಮೆಚ್ಚಿಸುವ ವ್ಯಕ್ತಿತ್ವದ ಬೊಮ್ಮಾಯಿ ತಮ್ಮ ಆಡಳಿತಾವಧಿಯಲ್ಲಿ ಹಿಂದುತ್ವ ಕಾರ್ಯಸೂಚಿಯನ್ನು ಪರಿಪೂರ್ಣತೆಯಿಂದ ಜಾರಿಗೊಳಿಸುವ ಒಂದು ಅಸ್ತ್ರವಾಗಿ ಮಾತ್ರ ಕಾಣಲು ಸಾಧ್ಯ.
ಇದನ್ನು ಓದಿ: ಜಾತಿ ಸ್ವಾಮಿಗಳು ಮತ್ತು ಜನ ನಾಯಕರು
ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಹೈಕಮಾಂಡ್ ಸಂಸ್ಕೃತಿ ಬಿಜೆಪಿ ಆಡಳಿತದಲ್ಲಿ ಮತ್ತಷ್ಟು ಆಳವಾಗಿ ಬೇರೂರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಜಾಸತ್ತಾತ್ಮಕ ಚುನಾವಣೆಗಳಲ್ಲಿ ಮತದಾರರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಸಾಂವಿಧಾನಿಕ ಹಕ್ಕುಗಳು ಮಾರುಕಟ್ಟೆಯ ವಸ್ತುಗಳಂತೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಳಕೆಯಾಗುತ್ತಿದೆ. ತಮ್ಮ ಸ್ವಹಿತಾಸಕ್ತಿಯಿಂದ ಬಿಕರಿಯಾಗಲು ಸದಾ ಸಿದ್ಧವಾಗಿರುವ ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ಕರ್ತವ್ಯವನ್ನೂ ಮರೆತು ಅಧಿಕಾರ ರಾಜಕಾರಣದ ಫಲಾನುಭವಿಗಳಾಗಲು ಉತ್ಸುಕರಾಗಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಅಧಿಕಾರ ಹಸ್ತಾಂತರದ ಹಿಂದೆ ಕಾರ್ಪೋರೇಟ್ ಹಿತಾಸಕ್ತಿಗಳು ಇರುವುದನ್ನೂ ಗಮನಿಸಬೇಕಾಗಿದೆ. ಮುಂದಿನ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಸಮಾಧಿಗೆ ಕೊನೆಯ ಇಟ್ಟಿಗೆಯನ್ನು ಪೇರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಈಗಾಗಲೇ ರಾಜ್ಯ ಸರ್ಕಾರಗಳ ವ್ಯಾಪ್ತಿಗೊಳಪಡುವ ಪದವಿ ಶಿಕ್ಷಣ, ಸಹಕಾರ ಕ್ಷೇತ್ರ ಮತ್ತು ಕೃಷಿ ವಲಯದಲ್ಲಿ ಹೊಸ ಶಾಸನಗಳನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ಏಕೀಕೃತ ಭಾರತದ ವಿಕೃತ ಪರಿಕಲ್ಪನೆಗೆ ಮಾನ್ಯತೆ ನೀಡಲಾರಂಭಿಸಿದೆ. ವಿಮಾ ಕ್ಷೇತ್ರವನ್ನೂ ಒಳಗೊಂಡಂತೆ, ಹಣಕಾಸು ವಲಯ, ಬ್ಯಾಂಕಿಂಗ್ ಉದ್ಯಮ, ಸಹಕಾರ ಕ್ಷೇತ್ರ, ಸಾರ್ವಜನಿಕ ಉದ್ದಿಮೆಗಳು, ರಸ್ತೆ ಸಾರಿಗೆ ಮತ್ತು ರೈಲ್ವೆ ಇಲಾಖೆ ಮತ್ತು ಕೈಗಾರಿಕಾ ವಲಯದಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಮಹತ್ತರ ತೀರ್ಮಾನಗಳನ್ನೂ ಕೈಗೊಳ್ಳಲಿದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಂದ ಯಾವುದೇ ಅಡ್ಡಿಯಾಗದಂತೆ ಎಚ್ಚರವಹಿಸುವುದೂ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಯಡಿಯೂರಪ್ಪ ಪದಚ್ಯುತವಾದ ನಂತರ ಅವರನ್ನು ಜಾತಿ ರಾಜಕಾರಣದ ಬಲಿಪಶು ಎಂದು ಬಿಂಬಿಸಲು ಯತ್ನಿಸುತ್ತಿರುವ ವಿಶ್ಲೇಷಕರಿಗೆ, ಕಳೆದ ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಜಾರಿಯಾಗಿರುವ ಜನವಿರೋಧಿ ಶಾಸನಗಳು ಮತ್ತು ಸರ್ಕಾರದ ಆಡಳಿತ ವೈಫಲ್ಯದ ಪರಿವೆಯೂ ಇರಬೇಕಲ್ಲವೇ ? ವೀರಶೈವ ಲಿಂಗಾಯತ ಮತಬ್ಯಾಂಕನ್ನು ಸುರಕ್ಷಿತವಾಗಿರಿಸಿಕೊಂಡೇ ತನ್ನ ಕಾರ್ಪೋರೇಟ್ ರಾಜಕಾರಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಅವರು ಮತ್ತೋರ್ವ ವಾಜಪೇಯಿಯಂತೆ ಸೌಮ್ಯವಾದದ ಮುಖವಾಡ ಹೊತ್ತು ನವ ಉದಾರವಾದದ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಸಜ್ಜಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಲಿಂಗಾಯತ ಮಠಾಧೀಶರ ಒಕ್ಕೊರಲ ಹಕ್ಕೊತ್ತಾಯದ ಹಿಂದೆ ಬಂಡವಾಳದ ಹಿತಾಸಕ್ತಿ ಇದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಉಳಿಸದಿದ್ದರೆ ಉಗ್ರ ಚಳುವಳಿ ಮಾಡುವ ಮಠೋದ್ಯಮಿಗಳ ಬೆದರಿಕೆಯ ಹಿಂದೆ ಔದ್ಯಮಿಕ ಹಿತಾಸಕ್ತಿ ಇದೆ. ಶಿಕ್ಷಣ, ಗಣಿಗಾರಿಕೆ, ಆರೋಗ್ಯ, ಉನ್ನತ ಶಿಕ್ಷಣ, ರಿಯಲ್ ಎಸ್ಟೇಟ್ ಮತ್ತು ಇತರ ಔದ್ಯಮಿಕ ವಲಯದ ಬಂಡವಳಿಗ ಕೂಟ ಲಿಂಗಾಯತ ಮಠೋದ್ಯಮಿಗಳ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ಹೊಸ ಪರ್ವ ಬರೆಯುತ್ತಿರುವುದು ಸ್ಪಷ್ಟ. ಜಾತಿ ರಾಜಕಾರಣ ಮತ್ತು ಕುಟುಂಬ ರಾಜಕಾರಣವನ್ನು ನಿರಾಕರಿಸುವ ಬಿಜೆಪಿ ರಾಜ್ಯದಲ್ಲಿ ಬೊಮ್ಮಾಯಿ ಅವರನ್ನು ನೇಮಿಸುವ ಮೂಲಕ ಎರಡೂ ಪ್ರಜಾತಂತ್ರ ವಿರೋಧಿ ನಡವಳಿಕೆಯ ಪ್ರಾತ್ಯಕ್ಷಿಕೆಯನ್ನು ಒದಗಿಸಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಭೂ ಸುಧಾರಣಾ ಕಾಯ್ದೆಗಳಿಗ ತಿದ್ದುಪಡಿ ಮಾಡುವ ಮೂಲಕ ಭೂ ಸ್ವಾಧೀನ ಮಾರ್ಗವನ್ನು ಸುಗಮಗೊಳಿಸಲಾಗಿದ್ದು, ಬಹುಶಃ ಬೊಮ್ಮಾಯಿ ಆಡಳಿತದಲ್ಲಿ ಮಠೋದ್ಯಮಿಗಳ ಮತ್ತು ರಿಯಲ್ ಎಸ್ಟೇಟ್-ಔದ್ಯಮಿಕ ವಲಯದ ಭೂ ದಾಹವನ್ನು ಸುಲಭವಾಗಿ ನೀಗಿಸುವ ಎಲ್ಲ ಪ್ರಯತ್ನಗಳೂ ನಡೆಯಲಿವೆ.
ಇದನ್ನು ಓದಿ: ಬೊಮ್ಮಾಯಿ ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು?
ಈಗಾಗಲೇ ರಾಜ್ಯ ಸರ್ಕಾರ ನೂತನ ಶಿಕ್ಷಣ ನೀತಿ 2020, ಜಾರಿಗೊಳಿಸಿದ್ದು, ಶೋಷಿತ ಸಮುದಾಯಗಳಿಗೆ, ಕೆಳಸ್ತರದ ಜನತೆಗೆ ಮತ್ತು ಗ್ರಾಮೀಣ ಬಡಜನತೆಗೆ ಮಾರಕವಾಗಬಹುದಾದ ನಾಲ್ಕು ವರ್ಷದ ಪದವಿ ಶಿಕ್ಷಣವನ್ನು ಜಾರಿಗೊಳಿಸಲು ಸಜ್ಜಾಗಿದೆ. ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಮತ್ತು ಔದ್ಯಮಿಕ ದೊರೆಗಳಿಗೆ ಸುಲಭವಾಗಿ ಪರಭಾರೆ ಮಾಡಲು ಹಾದಿ ನಿರ್ಮಿಸಲಾಗಿದೆ. ದೇಶದ ಅಮೂಲ್ಯ ಸಂಪತ್ತು ಎಂದೇ ಪರಿಗಣಿಸಲ್ಪಟ್ಟಿರುವ ಬಿಇಎಂಎಲ್, ಬಿಹೆಚ್‍ಇಎಲ್, ಹೆಚ್‍ಎಎಲ್ ಮುಂತಾದ ಸಾರ್ವಜನಿಕ ಉದ್ದಿಮೆಗಳು ಖಾಸಗೀಕರಣದ ಹೊಸ್ತಿಲಲ್ಲಿ ನಿಂತಿವೆ.
ಈ ಸಂದರ್ಭದಲ್ಲೇ ಬಸವರಾಜ ಬೊಮ್ಮಾಯಿ, ಕಾರ್ಪೋರೇಟ್ ಹಿಂದುತ್ವ ರಾಜಕಾರಣದ ಸೌಮ್ಯವಾದಿ ಮುಖವಾಡದಂತೆ ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ನೆರೆ ಪ್ರವಾಹದಿಂದ ರಾಜ್ಯದ ಒಂದು ಭಾಗದ ಜನತೆ ತತ್ತರಿಸಿಹೋಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ, ಸಚಿವ ಸಂಪುಟವೇ ಇಲ್ಲದ ಸರ್ಕಾರವೊಂದು ಅಸ್ತಿತ್ವದಲ್ಲಿರುವುದೇ ಆಳುವ ವರ್ಗಗಳ ಅಸೂಕ್ಷ್ಮತೆ ಮತ್ತು ಆಡಳಿತ ಕ್ರೌರ್ಯಕ್ಕೆ ಸಾಕ್ಷಿ ಅಲ್ಲವೇ ? ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೋವಿದ್ ನಿರ್ವಹಣೆಯಲ್ಲಿ ಉಂಟಾದ ಪ್ರಮಾದಗಳಿಗೆ ನೂತನ ಸರ್ಕಾರ ಹೊಣೆ ಹೊರಲು ಸಾಧ್ಯವೇ ? ಆಮ್ಲಜನಕದ ಕೊರತೆಯಿಂದ ಮೃತಪಟ್ಟವರು, ಕೋವಿದ್ ಉಲ್ಬಣಿಸಿದಾಗ ಆಸ್ಪತ್ರೆ ಸೌಕರ್ಯವಿಲ್ಲದೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಮೃತಪಟ್ಟವರು, ಲಾಕ್‍ಡೌನ್ ಸಂದರ್ಭದಲ್ಲಿ ಬೀದಿಪಾಲಾದ ಸಣ್ಣ ವ್ಯಾಪಾರಿಗಳು, ಸಮರ್ಪಕ ಆರ್ಥಿಕ ನೆರವಿಲ್ಲದೆ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಹೊಸ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ?
ಕಳೆದ ವರ್ಷದ ನೆರೆ ಪರಿಹಾರ ಧನವನ್ನೇ ಪೂರ್ತಿಯಾಗಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರ ಈ ಬಾರಿ ಮತ್ತೊಮ್ಮೆ ತಲೆದೋರಿರುವ ನೆರೆಹಾವಳಿಗೆ ಹೇಗೆ ಸ್ಪಂದಿಸಬಹುದು ಎನ್ನುವುದನ್ನು ಊಹಿಸಬಹುದು. ರಾಜ್ಯ ಸರ್ಕಾರ ತನಗೆ ಬರಬೇಕಾದ ಜಿಎಸ್‍ಟಿ ಪಾಲನ್ನೂ ಪಡೆಯದೆ ಸಾಲ ಮಾಡುವ ಮೂಲಕ ಹಣಕಾಸು ಪರಿಸ್ಥಿತಿಯನ್ನು ನಿಭಾಯಿಸಿದೆ. ಈ ನಡುವೆಯೇ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಪ್ರಕ್ರಿಯೆಗೆ ಕ್ಷಿಪ್ರಗತಿಯಲ್ಲಿ ಚಾಲನೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ತಾತ್ವಿಕವಾಗಿ ನಾಶಪಡಿಸಿ, ಸಾಂವಿಧಾನಿಕವಾಗಿ ಅಸಂಗತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಆಡಳಿತ ನೀತಿಗಳಿಗೆ, ಸೌಮ್ಯವಾದಿ ಮುಖವಾಡದ ಬಸವರಾಜ ಬೊಮ್ಮಾಯಿ ಒತ್ತಾಸೆಯಾಗಿ ನಿಲ್ಲುವ ಸಾಧ್ಯತೆಗಳಿವೆ.
ರಾಜ್ಯದ ರೈತರು ಬೆಂಬಲ ಬೆಲೆಗಾಗಿ ಹೋರಾಡುತ್ತಿದ್ದಾರೆ, ಕಬ್ಬು ಬೆಳೆಗಾರರು ತಮಗೆ ಬರಬೇಕಾದ ಬಾಕಿ ಹಣ ಸಂದಾಯ ಮಾಡಲು ಧರಣಿ ಮುಷ್ಕರದ ಮೊರೆ ಹೋಗಬೇಕಿದೆ. ಮೈಸೂರು ಬಳಿಯ ಕೋಚನಹಳ್ಳಿ ರೈತರು ತಮ್ಮ ನಾನ್ನೂರು ಎಕರೆ ಕೃಷಿ ಭೂಮಿಯನ್ನು ರಕ್ಷಿಸಲು ಕಳೆದ ಮೂರು ತಿಂಗಳಿಂದಲೂ ಹೋರಾಟ ನಡೆಸಿದ್ದಾರೆ. ಎಟಿಎಸ್ ಕಂಪನಿಯ ಕಾರ್ಮಿಕರು ತಮ್ಮ ವೇತನಕ್ಕಾಗಿ, ನೌಕರಿ ಭದ್ರತೆಗಾಗಿ ಕಳೆದ 150 ದಿನಗಳಿಂದ ಮುಷ್ಕರನಿರತರಾಗಿದ್ದಾರೆ. ಕೋಲಾರದ ಬಳಿಯ ವಿಸ್ಟ್ರಾನ್ ಕಾರ್ಮಿಕರು ಇನ್ನೂ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಬೆಂಗಳೂರು ಬಳಿಯ ಟೊಯೋಟಾ ಕಾರ್ಮಿಕರು, ಸಾರಿಗೆ ನೌಕರರು, ಪೌರ ಕಾರ್ಮಿಕರು ತಮ್ಮ ಹೋರಾಟನಿರತರಾಗಿದ್ದಾರೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಿಂದ ಕೈಗಾರಿಕಾ ವಲಯದ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದು, ನಿರುದ್ಯೋಗ ಪ್ರಮಾಣವೂ ಹೆಚ್ಚಲಿದೆ. ಈಗಾಗಲೇ ಕೋವಿದ್ 2ನೆಯ ಅಲೆಯಿಂದ ತತ್ತರಿಸಿರುವ ದುಡಿಯುವ ವರ್ಗಗಳು ಮೂರನೆಯ ಅಲೆಯ ಆತಂಕದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಏರುತ್ತಲೇ ಇರುವ ಪೆಟ್ರೋಲ್ ಡೀಸೆಲ್ ಮತ್ತು ಅನಿಲ ಬೆಲೆಗಳು ಬಡ ಜನತೆಯನ್ನು ದಾರಿದ್ರ್ಯತೆಯೆಡೆಗೆ ತಳ್ಳುತ್ತಿವೆ.
ಈ ಸಂದರ್ಭದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಬದಲಾಯಿಸುವುದೇ ಅಧಿಕಾರ ರಾಜಕಾರಣದ ಕ್ರೌರ್ಯ ಅಲ್ಲವೇ ? ಆದರೂ ಮಠೋದ್ಯಮಿಗಳ ಮನ ತಣಿಸಿ, ಹಿಂದುತ್ವ ರಾಜಕಾರಣದ ಕಾರ್ಯಸೂಚಿಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ಹೊಸ ಮುಖ್ಯಮಂತ್ರಿಯನ್ನು ನೇಮಿಸಿದೆ. ಜಾತಿ ಪ್ರಾಬಲ್ಯ ಮತ್ತು ಬಂಡವಾಳದ ಪಾರಮ್ಯದ ಅಡ್ಡಕತ್ತರಿಯಲ್ಲಿ ಕರ್ನಾಟಕದ ಜನತೆ ಸಿಲುಕಿದೆ. ಅವಕಾಶವಂಚಿತ, ತುಳಿತಕ್ಕೊಳಗಾದ ಸಮುದಾಯಗಳ ಜೀವನೋಪಾಯದ ಮಾರ್ಗಗಳೇ ದುರ್ಗಮವಾಗುತ್ತಿವೆ. ನವ ಉದಾರವಾದ ಮತ್ತು ಹಿಂದುತ್ವ ರಾಜಕಾರಣದ ನೇರ ಪ್ರಹಾರಕ್ಕೆ ಕರ್ನಾಟಕದ ಜನತೆ ಸಜ್ಜಾಗಬೇಕಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಕರ್ನಾಟಕದಲ್ಲಿ ಹೈಕಮಾಂಡ್ ಆಡಳಿತದ ಹೊಸ ಪರ್ವಕ್ಕೂ ನಾಂದಿ ಹಾಡಲಾಗಿದೆ.
ಪ್ರಾತಿನಿಧಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಸಾರ್ವಭೌಮ ಪ್ರಜೆಗಳಿಗೆ ಉತ್ತರದಾಯಿಯಾಗಿರಬೇಕಲ್ಲವೇ ? #ಆತ್ಮನಿರ್ಭರ ಭಾರತದಲ್ಲಿ ಈ ಪರಿಕಲ್ಪನೆಗೇ ಧಕ್ಕೆ ಉಂಟಾಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ದೆಹಲಿಯ ಅಣತಿಯಂತೆ ರಚನೆಯಾಗುವ ಒಂದು ಸಚಿವ ಸಂಪುಟ, ದೆಹಲಿಯ ಕೃಪಾಕಟಾಕ್ಷದಲ್ಲೇ ನೇಮಕವಾಗುವ ಮುಖ್ಯಮಂತ್ರಿಯೊಡನೆ ಕರ್ನಾಟಕದ ಜನತೆ ನಾಳೆಗಳನ್ನು ಎಣಿಸಬೇಕಾಗಿದೆ. ಜನಪ್ರತಿನಿಧಿಗಳು ತಮ್ಮ ಸಂವಿಧಾನ ನಿಷ್ಠೆಯನ್ನು ಬದಿಗೊತ್ತಿ ಸ್ವಾಮಿನಿಷ್ಠೆಗೆ ಶರಣಾಗುತ್ತಿರುವ ಸಂದರ್ಭದಲ್ಲಿ “ ಶಾಸಕ/ಸಂಸದ “ ಎಂಬ ಪವಿತ್ರ ಹುದ್ದೆಗಳು ತಮ್ಮ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ, ತಮ್ಮ ಪ್ರಾತಿನಿಧಿಕ ಲಕ್ಷಣವನ್ನೂ ಕಳೆದುಕೊಳ್ಳುತ್ತಿವೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾಗಬಹುದಾದ ಈ ಬೆಳವಣಿಗೆಯ ವಿರುದ್ಧ ರಾಜ್ಯದ ಪ್ರಜ್ಞಾವಂತ ಜನತೆ ದನಿಎತ್ತಬೇಕಿದೆ.