ರಾಜ್ಯ ಯೋಜನಾ ಮಂಡಳಿಯ ಪ್ರಥಮ ಸಭೆಯಲ್ಲಿ ನಿರ್ಧಾರ
ಬೆಂಗಳೂರು,ಜನವರಿ 08: 2030 ರೊಳಗೆ ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪ್ರಥಮ ಯೋಜನಾ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಾ, 17 ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕ 100 ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6 ನೇ ಸ್ಥಾನದಲ್ಲಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳು- ಈ ಆರು ಗುರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ. ಈ ಗುರಿಗಳ ಪೈಕಿ ವಿಷಯವಾರು ತಜ್ಞರ ಅಧ್ಯಯನ ಮತ್ತು ಸಲಹೆಗಳನ್ನು ಆಧರಿಸಿ ವರದಿ ನೀಡಲು ರಾಜ್ಯ ಯೋಜನಾ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಈವರೆಗೆ ಮಂಡಳಿ ಕೈಗೊಂಡ ಅಧ್ಯಯನಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.