ಬೆಂಗಳೂರು : ಮಂಗಳೂರು ಪೋಲೀಸ್ ಕಮಿಷನರ್ ರವರನ್ನು ತಕ್ಷಣವೇ ಅಮಾನತುಗೊಳಿಸಿ, ಅವರ ಪ್ರಜಾಪ್ರಭುತ್ವ ವಿರೋದಿ ನಡೆಯ ವಿರುದ್ದ ಕ್ರಮಕೈಗೊಳ್ಳಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ವಾದಿ)ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುವಾದಿ ಶಕ್ತಿಗಳು, ಭಾರತ ಸಂವಿಧಾನದ ಜಾತ್ಯಾತೀತ ಪ್ರಜಾಪ್ರಭುತ್ವ ನಡೆಯನ್ನು ಉಲ್ಲಂಘಿಸುತ್ತಾ ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಕಾನೂನು ಸುವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಸವಾಲಾಗಿದ್ದಾರೆ. ಇದೇ ಶಕ್ತಿಗಳು, ಜಿಲ್ಲೆಯಲ್ಲಿ ಅಕ್ರಮ ವ್ಯವಹಾರಗಳನ್ನು ನಡೆಸುವ ಶಕ್ತಿಗಳಿಗೆ ಕುಮ್ಮಕ್ಕಾಗಿದ್ದಾರೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೆಳಿದ್ದಾರೆ.
ಇಂತಹ ಸಂದರ್ಭದಲ್ಲಿ, ರಾಜ್ಯಸರಕಾರ ಹಾಗು ಜಿಲ್ಲಾಡಳಿತ ಜಂಟಿಯಾಗಿ ಜಿಲ್ಲೆಯ ಎಲ್ಲ ಪ್ರಗತಿಪರ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆ ಸೇರಿ ಜಾತ್ಯಾತೀತ ಪ್ರಜಾಸತ್ತೆಯನ್ನು ಹಾಗು ಜನತೆಯ ನಡುವಿನ ಭೀತಿಯನ್ನು ತೊಲಗಿಸಿ, ಅವರ ಪ್ರಜಾಪ್ರಭುತ್ವ ಹಕ್ಕುಗಳನ್ನು ಪುನರ್ ಸ್ಥಾಪಿಸ ಬೇಕಾಗಿದೆ ಮತ್ತು ಜಿಲ್ಲೆಯನ್ನು ಜೂಜು ಅಡ್ಡೆ, ಅಕ್ರಮ ವ್ಯವಹಾರ ತಾಣ ವಾಗಿಸಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಕರ್ತವ್ಯ ಮೆರೆಯ ಬೇಕಾಗಿದೆ.
ಇದನ್ನೂ ಓದಿ : ನನ್ನ ತಪ್ಪಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧ: ಆರೋಗ್ಯ ಸಚಿವ
ಆದರೆ, ಇದಕ್ಕೆ ತದ್ವಿರುದ್ದವಾಗಿ, ಜನತೆಯ ಜೊತೆ ನಿಂತು ಅವರಿಗೆ ಧೈರ್ಯ ನೀಡಿ, ಜಾತ್ಯಾತೀತ ಪ್ರಜಾಸತ್ತೆಯನ್ನು ಪುನರ್ ಸ್ಥಾಪಿಸಲು ಯತ್ನಿಸುತ್ತಿರುವ ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ಮೇಲೆಯೇ ದಾಳಿ ನಡೆಸುತ್ತಾ ಜಿಲ್ಲೆಯನ್ನು ಕೋಮುವಾದಿ ಪೋಲೀಸ್ ರಾಜ್ಯವಾಗಿಸುವ ನೀತಿ ಅನುಸರಿಸುತ್ತಿರುವುದನ್ನು ನಮ್ಮ ಪಕ್ಷ ಬಲವಾಗಿ ಖಂಡಿಸುತ್ತದೆ. ಈ ಕುರಿತ ವಿವರವನ್ನು ಲಗತ್ತಿಸಿದ ನಮ್ಮ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯದರ್ಶಿಯವರ ದೂರು ಸ್ಪಷ್ಠ ಪಡಿಸುತ್ತದೆ.
ಆದ್ದರಿಂದ, ತಾವು ಮದ್ಯ ಪ್ರವೇಶಿಸಿ, ಪ್ರಜಾಪ್ರಭುತ್ವ ವಿರೋದಿಯಾಗಿ ವರ್ತಿಸುತ್ತಿರುವ ಮಂಗಳೂರು ನಗರದ ಪೋಲೀಸ್ ಕಮಿಷನರ್ ರವರನ್ನು ಕೂಡಲೆ ಅಮಾನತು ಮಾಡಿ, ಅವರ ಮೇಲೆ ಕಾನೂನು ಕ್ರಮವಹಿಸಬೇಕು ಹಾಗು ಜಿಲ್ಲಾ ಆಡಳಿತದ ಸಭೆ ಕರೆದು ಪ್ರಜಾ ಸತ್ತಾತ್ಮಕ ಪ್ರಕ್ರಿಯೆ ಬಲಪಡಿಸಲು ಮತ್ತು ಕೋಮುವಾದಿ ಹಾಗು ಅಕ್ರಮ ದಂಧೆಯಲ್ಲಿ ತೊಡಗಿದ, ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ನಿಗ್ರಹಿಸಲು ಅಗತ್ಯ ಕ್ರಮ ವಹಿಸುವಂತೆ ಒತ್ತಾಯಿಸುತ್ತೇವೆ ಎಂದು ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.
ಇದನ್ನೂ ನೋಡಿ : ಕಷ್ಟದಲ್ಲಿರುವ ಕನ್ನಡವನ್ನು ಸಂರಕ್ಷಿಸೋಣ Janashakthi Media