ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ನಿವಾರಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶುಶ್ರೂಷಕರಿಗೆ ಕೋವಿಡ್ ವಿಶೇಷ ಭತ್ಯೆಯಾಗಿ ಹೆಚ್ಚುವರಿಯಾಗಿ ರೂ.8,000/- ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಿಳಿಸಿದರು.
ಇಂದು ಕೋವಿಡ್-19ರ ಕರ್ತವ್ಯದಲ್ಲಿ ನಿರತರಾಗಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಶುಶ್ರೂಷಕರೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ವಿಡಿಯೋ ಸಂವಾದವನ್ನು ನಡೆಸಿದರು.
ಇದನ್ನು ಓದಿ: ಕೋವಿಡ್ ಹಾಟ್‌ಸ್ಪಾಟ್ ಆಗುತ್ತಿದೆಯೇ ಚಿಕ್ಕಮಗಳೂರು ಕೋವಿಡ್ ಜಿಲ್ಲಾಸ್ಪತ್ರೆ
ಪ್ರಸ್ತುತ ರಾಜ್ಯದಲ್ಲಿ 21,574 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೈಯುಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು, ಕುಟುಂಬದವರಿಂದ ಅಂತರ ಕಾಯ್ದುಕೊಂಡಿರುವ ಶುಶ್ರೂಷಕರ ಕರ್ತವ್ಯವು ಶ್ಲಾಘನೀಯವಾದದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಶುಶ್ರೂಷಕರ ಕರ್ತವ್ಯ ಹಾಗೂ ಸ್ಥಳೀಯ ಆರೋಗ್ಯದ ಸ್ಥಿತಿಗತಿಗಳ ಸೇರಿದಂತೆ ವಿವಿಧ ವಿಚಾರಗಳ ಮುಖ್ಯಮಂತ್ರಿಗಳು ಚರ್ಚಿಸಿದರು.
ಮುಖ್ಯಮಂತ್ರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಬೀದರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂತೋಷ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವಹೀದಾ, ದಾವಣಗೆರೆ ಚಿಗಟೇರಿ ಆಸ್ಪತ್ರೆಯ ಎಂ.ಡಿ. ಶಾರದಾ, ಬದಾಮಿ ತಾಲ್ಲೂಕು ಆಸ್ಪತ್ರೆಯ ರೇಣುಕಾ ಗೂಗಿಹಾಳ, ಕೋಲಾರ ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯೆ ಶಶಿಕಲಾ, ರಾಯಚೂರು ವೈದ್ಯಕೀಯ ಕಾಲೇಜಿನ ರಾಚೋಟಿ ವಾರದ, ಚಾಮರಾಜನಗರ ಜಿಲ್ಲಾಸ್ಪತ್ರೆಯ ಪ್ರದೀಪ್ ಕುಮಾರ್, ವಿಜಯಪುರ ಜಿಲ್ಲಾ ಆಸ್ಪತ್ರೆಯ ಪುಷ್ಪರಾಜ್, ಹರಿಹರ ಸಾರ್ವಜನಿಕ ಆಸ್ಪತ್ರೆಯ ಶ್ವೇತಾ ಆರ್., ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಸಂಧ್ಯಾರಾಣಿ ಅವರುಗಳು ಭಾಗವಹಿಸಿ ಮಾತನಾಡಿದ್ದರು.