ಸುರತ್ಕಲ್‌ನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳ ಮೇಲೆ ಮತ್ತೊಮ್ಮೆ ಹಲ್ಲೆ: ಆರು ಮಂದಿ ಬಂಧನ

ಮಂಗಳೂರು: ನಗರ ಹೊರವಲಯದ ಸುರತ್ಕಲ್‌ನಲ್ಲಿ ನೆನ್ನೆ ತಡರಾತ್ರಿ ಮತ್ತೊಂದು ಹಲ್ಲೆ ಪ್ರಕರಣ ನಡೆದಿದೆ. ಅನ್ಯಧರ್ಮದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೇಲೆ ಗುಂಪು ದಾಳಿ ನಡೆದಿದೆ. ಈ ಸಂಬಂಧ ಹಲ್ಲೆ ಮಾಡಿರುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರ ಹೊರವಲಯದ ಮುಕ್ಕಾ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಾದ, ಕೇರಳ ಮೂಲದ ಮಹಮ್ಮದ್ ಯಾಸೀನ್ ಮತ್ತು ಆತನ ಸ್ನೇಹಿತೆ ಅನ್ಸಿ ವಿನ್ನಿ ಡಯಾಸ್ ಎಂಬವರು ಹಲ್ಲೆಗೊಳಗಾದ ಸಂತ್ರಸ್ತರಾಗಿದ್ದಾರೆ.

ವಿದ್ಯಾರ್ಥಿನಿ ಅನ್ಸಿ ವಿನ್ನಿ ಡಯಾಸ್ ತಾನು ವಾಸವಿದ್ದ ಅಪಾರ್ಟ್‌ಮೆಂಟ್ ಮತ್ತೊಂದು ಅಪಾರ್ಟ್‌ಮೆಂಟ್‌ಗೆ ಮನೆ ಸಾಮಗ್ರಿಗಳನ್ನು ಸಾಗಣೆ ಮಾಡಿದ ನಂತರ, ಯುವತಿಗೆ ಮಹಮ್ಮದ್ ಯಾಸೀನ್ ಅಪಾರ್ಟ್‌ಮೆಂಟ್‌ಗೆ ಬಿಟ್ಟು ಬರಲು ಹೋದ ಸಂದರ್ಭದಲ್ಲಿ ಆರು ಮಂದಿ ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಯುವತಿಗೂ ಧಮ್ಕಿ ಹಾಕಿದ್ದು, ಅನ್ಯಧರ್ಮದವನ ಜೊತೆ ಓಡಾಡುತ್ತೀಯಾ ಅಂತಾ ಬೆದರಿಕೆ ಹಾಕಿದ್ದಾರೆ.

ಇದನ್ನು ಓದಿ: ವೈದ್ಯ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಬೆಂಬಲಿಗರಿಂದ ದಾಂಧಲೆ

ಸಂತ್ರಸ್ತರ ದೂರಿನ್ವಯ ಸುರತ್ಕಲ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಮತ್ತು ಸುಕೇಶ್ ಎಂದು ಗುರುತಿಸಲಾಗಿದೆ.

ಘಟನೆ ನಡೆದ ತಕ್ಷಣ ಸೋಮವಾರ ತಡರಾತ್ರಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಸುರತ್ಕಲ್‌ನ ಘಟನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದುಕೊಂಡು ತನಿಖೆಯನ್ನು ಕೈಗೊಂಡರು.

ತಾವು ಹಿಂದುತ್ವ ಸಂಘಟನೆಗಳಿಗೆ ಸೇರಿದ್ದು, ಅದರ ಸದಸ್ಯರೆಂದು ಹೇಳಿಕೊಂಡಿದ್ದಾರೆ. ಮಾಹಿತಿಯನ್ನು ಸಂಬಂಧಪಟ್ಟ ಸಂಘಟನೆಗಳ ಮೂಲಕ ಪರಿಶೀಲನೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಎಸಿಪಿ (ಉತ್ತರ) ನೇತೃತ್ವದ ಸುರತ್ಕಲ್ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ. ಇಬ್ಬರು ಆರಂಭದಿಂದ ಸಂತ್ರಸ್ತರನ್ನು ಹಿಂಬಾಲಿಸುತ್ತಿದ್ದರು, ನಂತರ ಬಂದವರು ಮತ್ತೆ ನಾಲ್ವರನ್ನು ಫೋನ್ ಮೂಲಕ ಸಂಪರ್ಕಿಸಿ ಘಟನಾ ಸ್ಥಳಕ್ಕೆ ಬರಮಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಆಯುಕ್ತ ಶಶಿಕುಮಾರ್ ನೀಡಿದರು.

ಸುರತ್ಕಲ್‌ನಲ್ಲಿ ಅನ್ಯ ಧರ್ಮದ ಯುವಕ ಮತ್ತು ಯುವತಿಯರ ಮೇಲೆ ನಡೆದ ದಾಳಿಯ ಎರಡನೇ ಪ್ರಕರಣ ಇದಾಗಿದ್ದು, ಈ ಹಿಂದೆ ಸುರತ್ಕಲ್ ಟೋಲ್ ಗೇಟ್ ಬಳಿ ಹಿಂದೂ ಕಾರ್ಯಕರ್ತರು, ವಾಹನವೊಂದನ್ನು ತಡೆದು ವಾಹನದೊಳಗೆ ಹಿಂದೂ ಧರ್ಮದ ಯುವತಿಯ ಜೊತೆಗಿದ್ದ ಅನ್ಯಧರ್ಮದ ಯುವಕರಿಗೆ ಥಳಿಸಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

Donate Janashakthi Media

Leave a Reply

Your email address will not be published. Required fields are marked *