ಜಾಲಹಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಧಿಕೃತ ಟೋಲ್ಗೇಟ್ ತೆರವುಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಗ್ರಾಮ ಘಟಕ ಜಾಲಹಳ್ಳಿ ನೇತೃತ್ವದಲ್ಲಿ ಇಂದು(ಅಕ್ಟೋಬರ್ 18) ಪ್ರತಿಭಟನೆ ನಡೆಸಿದರು.
ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರು ಹಾಗೂ ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ವತಿಯಿಂದ ಟೋಲ್ಗೇಟ್ ತೆರವುಗೊಳಿಸಬೇಕೆಂಬ ಇಂದು ಹಮ್ಮಿಕೊಂಡಿದ್ದ ಹೋರಾಟದ ಸಂದರ್ಭದಲ್ಲಿ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ತುಳುನಾಡಿನ ಜನತೆಯ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಬಿಜೆಪಿ ಸರಕಾರ ಪೊಲೀಸರ ಮೂಲಕ ಬಲಪ್ರಯೋಗಕ್ಕೆ ಮುಂದಾಗಿರುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಕಾರ್ಯರ್ಶಿ ರಾಜು ನಾಯಕ, ಮುಖಂಡರಾದ ಮಕ್ತುಮ್ ಭಾಷ, ಬಸವರಾಜ ಲಿಂಗದಹಳ್ಳಿ, ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಹುನುಮಂತ ಗುರಿಕಾರ, ಮೌನೇಶ, ಗುರು ನಾಯಕ, ರಂಗನಾಥ ಬುಂಕಲದೊಡ್ಡಿ, ಜೆ.ಎಸ್ ಹನ್ಮಂತ. ಹನುಮಂತ ಪರಶಿ ಬೊಮ್ಮನಹಳ್ಳಿ, ದುರುಗಪ್ಪ ಕುರುಬರ್, ಕನಕಪ್ಪ ಕುಂಬಾರ ಪೇಟೆ, ಅಂಬ್ರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಾಡ ತಹಶೀಲ್ದಾರ ಕಛೇರಿ ಮುಂಭಾಗ ನಡೆದ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯದ ಗೃಹ ಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರ ಬಿಡುಗಡೆಗೆ ಡಿವೈಎಫ್ಐ ರಾಜ್ಯ ಸಮಿತಿ ಆಗ್ರಹ
ಅನಧಿಕೃತ ಟೋಲ್ ತೆರವುಗೊಳಿಸಬೇಕೆಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಬಂಧನವನ್ನು ಖಂಡಿಸಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ರಾಜ್ಯ ಸಮಿತಿಯು, ಕೂಡಲೇ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಗೇಟ್ ತೆರವುಗೊಳಿಸಲು ಹೋರಾಟ ಸಮಿತಿ ನೇತೃತ್ವದಲ್ಲಿ ತುಳುನಾಡಿನ ಜನತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ವೇಳೆ ಬಿಜೆಪಿ ಸರಕಾರ ಪೊಲೀಸರ ಮೂಲಕ ಟೋಲ್ ವಿರೋಧಿ ಸಮಿತಿ ಸಂಚಾಲಕರು ಹಾಗೂ ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ 250ಕ್ಕೂ ಹೆಚ್ಚು ಜನ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ಶಾಸಕ, ಸಂಸದ ಹಾಗೂ ಸಚಿವರು ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವ ಬದಲಿಗೆ ತುಳುನಾಡಿನ ಜನರ ಮೇಲೆ ದ್ವೇಷ ಸಾಧಿಸುತ್ತಿರುವುದು ಅಕ್ಷಮ್ಯ ಹಾಗೂ ಆಯ್ಕೆ ಮಾಡಿದ ಜನರಿಗೆ ಎಸಗುತ್ತಿರುವ ಮಹಾದ್ರೋಹ ಎಂದು ಬಸವರಾಜ ಪೂಜಾರ ಆರೋಪಿಸಿದ್ದಾರೆ.
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಸ್ವತಃ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವುದಾಗಿ ಹೇಳಿ, ನಾಲ್ಕು ತಿಂಗಳು ಕಳೆದಿದೆ. ಟೋಲ್ ತೆರವುಗೊಳಿಸದೆ ಜನರನ್ನು ಲೂಟಿ ಮಾಡಲು ಮುಂದಾಗುತ್ತಿರುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ಹೋರಾಟ ಸಮಿತಿಯ ಮುಖಂಡರಿಗೆ ಸರಕಾರ ಮುಚ್ಚಳಿಕೆ ಬರೆದುಕೊಡುವುದು, ಬಾಂಡ್, ಶ್ಯೂರಿಟಿ ಕೊಡಬೇಕು ಎಂದು ಬೆದರಿಸುವ ಜೊತೆಗೆ ಪೂಡಾರಿಗಳ ರೀತಿ ಏಕವಚನ ಬಳಸಿ ಹೋರಾಟ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ ಎಂದಿದ್ದಾರೆ.
ಜನರ ಪ್ರತಿರೋಧವನ್ನು ಹತ್ತಿಕ್ಕಲು ಹೋಗಿ ಸ್ವತಃ ಬಿಜೆಪಿ ಸರಕಾರ ಜನರೆದುರು ಬೆತ್ತಲಾಗಿದೆ. ಹೋರಾಟಗಾರರನ್ನು ಬಂಧಿಸಿದರೆ, ಬೆದರಿಕೆ ತಂತ್ರ ಅನುಸರಿಸಿದರೆ ಹೋರಾಟ ಹತ್ತಿಕ್ಕಬಹುದು ಎಂದು ಬಿಜೆಪಿ ಸರಕಾರ ಎಣಿಕೆಯಾದರೆ ಅದು ಭ್ರಮೆ ಮಾತ್ರ. ಈ ಟೋಲ್ಗೇಟ್ ತೆರವುಗೊಳ್ಳುವವರೆಗೆ ತುಳುನಾಡ ಜನತೆ ಐಕ್ಯತೆಯಿಂದ ಹೋರಾಟ ಮುಂದುವರೆಸುತ್ತದೆ. ಕೂಡಲೇ ಈ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಜನತೆ ಮುಂದಾಗಬೇಕುತ್ತದೆ ಎಂದು ಡಿವೈಎಫ್ಐ ಸಂಘಟನೆಯು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.