ಸುರತ್ಕಲ್ ಟೋಲ್ ಗೇಟ್ ತೆರವು: ಮಾರ್ಚ್‌ 15ಕ್ಕೆ ಪಾದಯಾತ್ರೆ

ಮಂಗಳೂರು: ಆರು ವರ್ಷಗಳ ನಿರಂತರ ಹೋರಾಟಗಳ ಹೊರತಾಗಿಯು ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ತೆರವುಗೊಳಿಸದಿರುವ ಕ್ರಮದ ವಿರುದ್ಧ ಮಾರ್ಚ್ 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಗೇಟ್ ವರಗೆ ಪಾದಯಾತ್ರೆಗೆ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸಂಘ ಸಂಸ್ಥೆಗಳ ಸಭೆಯಲ್ಲಿ ನಿರ್ಧಾರವಾಗಿದೆ.

ಹೋರಾಟದ ಕುರಿತು ನಿರ್ದಿಷ್ಟ ವಿಚಾರಗಳ ಬಗ್ಗೆ ಚರ್ಚಿಸಲು ಎರಡು ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರ ಸಭೆಯು ಬಪ್ಪನಾಡು ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ನಡೆಯಿತು. 150ಕ್ಕೂ ಹೆಚ್ಚಿನ ಪ್ರತಿನಿಧಿಗಳ ಸಭೆಯು ಸುರತ್ಕಲ್  ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ನಡೆಸಬೇಕಾದ ಹೋರಾಟಗಳ ಕುರಿತು ವಿಸ್ತಾರವಾಗಿ ಚರ್ಚಿಸಿದರು. ಅದರಂತೆ, ಮಾರ್ಚ್ 15 ರಂದು ಬೃಹತ್ ಪಾದಯಾತ್ರೆಯನ್ನು ಸಾಮೂಹಿಕವಾಗಿ ನಡೆಸುವುದಾಗಿ ಕರೆ ನೀಡಲಾಗಿದೆ.

ಕೇಂದ್ರ ಭೂಸಾರಿಗೆ ಸಚಿವರು ಇತ್ತೀಚಿಗೆ ಕಾರ್ಯಕ್ರಮದಲ್ಲಿ ಸಂಸದರು, ಸಚಿವರು ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ದೆಹಲಿಯಲ್ಲಿ ಅಧಿಕಾರಿಗಳ ಸಭೆ ನಡೆಸುವ ಕುರಿತು ಮಾತ್ರ ಕೇಂದ್ರೀಕೃತಗೊಂಡಿದೆ. ಸುಲಭವಾಗಿ ಬಗೆಹರಿಸಬಹುದಾದ ತಾಂತ್ರಿಕ ತೊಡಕುಗಳನ್ನು ಅನಗತ್ಯವಾಗಿ ಕಾನೂನಿನ ತೊಡಕುಗಳು ಎಂಬಂತೆ ಬಿಂಬಿಸುವುದು, ಅವುಗಳ ಪರಿಹಾರಕ್ಕೆ ಸಭೆ ನಡೆಸುವುದು ಎಂಬ ಹೇಳಿಕೆಗಳಿಂದಾಗಿ ಹಲವಾರು ಕಡೆಗಳಲ್ಲಿ ಟೋಲ್ ಗೇಟ್ ತೆರವು ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಈ ಎಲ್ಲಾ ಕಾರಣಗಳಿಂದ ಜನ ಹೋರಾಟವನ್ನು ತೀವ್ರಗೊಳಿಸಿದರೆ ಮಾತ್ರ ಟೋಲ್ ಗೇಟ್ ತೆರವು ಭರವಸೆ ಸಾಕಾರಗೊಳ್ಳಬಹುದು. ಆದುದರಿಂದ ಟೋಲ್ ಗೇಟ್ ತೆರವು ಘೋಷಣೆ ಅಧಿಕೃತ ಆದೇಶವಾಗಿ ಪ್ರಕಟವಾಗುವವರೆಗೆ ಹೋರಾಟವನ್ನು ಹಿಂಪಡೆಯದಿರಲು ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.‌ ಸುರತ್ಕಲ್ ಟೋಲ್ ಗೇಟ್ ತಕ್ಷಣ ತೆರವು, ಮೂಲ್ಕಿ, ಪಡುಬಿದ್ರೆ ಪ್ರದೇಶದ ಪ್ರಯಾಣಿಕರಿಗೆ ಸಾಸ್ತಾನ ಟೋಲ್ ಗೇಟ್ ಮಾದರಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸುವುದು ಮುಂತಾದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ 15 ರಂದು ಬೆಳಿಗ್ಗೆ 9  ಗಂಟೆಗೆ  ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಕೇಂದ್ರದ ವರಗೆ ಅವಳಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ‌ ಬೃಹತ್ ಪಾದಯಾತ್ರೆ ನಡೆಸಲು ಸಭೆಯು ನಿರ್ಧರಿಸಿದೆ.

ಸಭೆಯ ಅಧ್ಯಕ್ಷತೆಯನ್ನು ಮೂಲ್ಕಿ ತಾಲೂಕು ಅಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಅಭಯ ಚಂದ್ರ ಜೈನ್, ದಲಿತ ಮುಖಂಡ ಎಂ ದೇವದಾಸ್, ಸಹಬಾಳ್ವೆ ಉಡುಪಿಯ ಅಮೃತ್ ಶೆಣೈ, ಹಿರಿಯ ಕಾರ್ಮಿಕ ನಾಯಕ ಬಾಲಕೃಷ್ಣ ಶೆಟ್ಟಿ ಉಡುಪಿ, ದಕ್ಷಿಣ ಕನ್ನಡ  ಬಸ್ಸು ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ದಿಲ್ ರಾಜ್ ಆಳ್ವ, ಎಮ್ ಜಿ ಹೆಗ್ಡೆ, ಬಿಲ್ಲವ ಮಹಾ ಮಂಡಳಿಯ ರಾಜಶೇಖರ ಕೋಟ್ಯಾನ್, ಶಾಲೆಟ್ ಪಿಂಟೊ, ಜೆಡಿ(ಎಸ್) ನಾಯಕ ಇಕ್ಬಾಲ್ ಮೂಲ್ಕಿ, ಶೇಖರ ಹೆಜಮಾಡಿ, ವಸಂತ ಬೆರ್ನಾಡ್, ನೂರುಲ್ಲಾ ಮೂಲ್ಕಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸು‌ನಿಲ್ ಕುಮಾರ್ ಬಜಾಲ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಮೊರೇಟರ್ ಗಳಾದ ದಯಾನಂದ ಶೆಟ್ಟಿ, ಅಯಾಜ್ ಕೃಷ್ಣಾಪುರ, ಡಿಎಸ್ಎಸ್ ನ ರಘು ಎಕ್ಕಾರು, ವಿಶು ಕುಮಾರ್ ಮೂಲ್ಕಿ, ಟಿ ಎನ್ ರಮೇಶ್ ಸುರತ್ಕಲ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಶೇಕಬ್ಬ ಕೋಟೆ, ಪಡುಬಿದ್ರೆ ನಾಗರಿಕ ಸಮಿತಿಯ ಸುಧಾಕರ ಕರ್ಕೆರ, ಸುಧೀರ್ ಕರ್ಕೇರ, ಕೇಶವ ಸಾಲ್ಯಾನ್, ರಾಲ್ಫಿ ಡಿಕೋಸ್ತ, ಟ್ಯಾಕ್ಸಿ ಮೆನ್, ಮ್ಯಾಕ್ಸಿ ಕ್ಯಾಬ್ ಅಸೋಷಿಯೇಷನ್ ಪದಾಧಿಕಾರಿಗಳಾದ ರಮೇಶ್ ಕೋಟ್ಯಾನ್, ದಿನೇಶ್ ಕುಂಪಲ, ಲಾರಿ ಮಾಲಕರ ಸಂಘದ ಮೂಸಬ್ಬ ಪಕ್ಷಿಕೆರೆ, ಸಾಮಾಜಿಕ ಕಾರ್ಯಕರ್ತರಾದ ಆಸಿಫ್ ಆಪತ್ಭಾಂಧವ, ರಾಜೇಶ್ ಶೆಟ್ಟಿ ಪಡ್ರೆ,  ಧನಂಜಯ ಮಟ್ಟು, ಚರಣ್ ಶೆಟ್ಟಿ, ಅಜ್ಮಲ್ ಸುರತ್ಕಲ್ ಸಹಿತ ಹಲವು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ವೈ ರಾಘವೇಂದ್ರ ರಾವ್ ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಮೂಲ್ಕಿ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಜೀವನ್ ಶೆಟ್ಟಿ ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *